ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆ ನೀರಿಗೆ ಆಗ್ರಹಿಸಿ ಎಂಜಿನಿಯರಿಗೆ ದಿಗ್ಬಂಧನ

Last Updated 8 ಫೆಬ್ರುವರಿ 2018, 10:09 IST
ಅಕ್ಷರ ಗಾತ್ರ

ಮಲೇಬೆನ್ನೂರು: ಸಮೀಪದ ಹೊಳೆಸಿರಿಗೆರೆ ಗ್ರಾಮದ ಹೊರವಲಯದಲ್ಲಿರುವ 15ನೇ ಉಪಕಾಲುವೆ 5ನೇ ಪೈಪ್ ಬಳಿ ಬುಧವಾರ ನಾಲೆ ನೀರು ಹರಿಯದ ಹಿನ್ನೆಲೆಯಲ್ಲಿ ರೈತರು ಎಇಇ ಗವಿಸಿದ್ದೇಶ್ವರ ಅವರಿಗೆ ದಿಗ್ಬಂಧನ ಹಾಕಿ ಪ್ರತಿಭಟನೆ ನಡೆಸಿದರು.

ಈವರೆಗೂ ಕೊನೆಭಾಗಕ್ಕೆ ಭದ್ರಾ ನಾಲೆ ನೀರು ತಲುಪಿಲ್ಲ. ತೋಟಗಳು ಒಣಗುತ್ತಿವೆ, ಭತ್ತ ನಾಟಿ ಮಾಡಲು ಆಗುತ್ತಿಲ್ಲ ಎಂದು ರೈತರು ದೂರಿದರು. ಕೊಮಾರನಹಳ್ಳಿ ಪಿಯರ್ ಗೇಜ್ ಬಳಿ ರಾತ್ರಿವೇಳೆ ನಾಲೆ ನೀರಿನ ಪ್ರಮಾಣ 3 ಅಡಿಯಿಂದ 3.4 ಅಡಿ ಇದ್ದರೆ, ಹಗಲು 4.4 ಇರುತ್ತದೆ, ಇದೇ ಪರಿಸ್ಥಿತಿ ಮುಂದುವರಿದರೆ ಕೃಷಿಕಾರ್ಯ ಕಷ್ಟ ಎಂದು ಅವಲತ್ತುಕೊಂಡರು.

ಜಿಲ್ಲಾಧಿಕಾರಿಗಳು ನಾಲೆಯುದ್ದಕ್ಕೂ 144ನೇ ಸೆಕ್ಷನ್ ಹಾಕಿದ್ದಾರೆ, ಅಕ್ರಮ ಪಂಪ್ ಸೆಟ್ ಕೆಲವೆಡೆ ತೆರವು ಮಾಡಿದ್ದಾರೆ. ಕದ್ದುಮುಚ್ಚಿ ರಾತ್ರಿ ವೇಳೆ ಪಂಪ್‌ಸೆಟ್ ಕೆಲಸ ಮಾಡುತ್ತಿವೆ. ವಿವಿಧ ಇಲಾಖೆ ನಡುವೆ ಸಮನ್ವಯ ಇಲ್ಲ, ನೀರಾವರಿ ನಿಗಮದಲ್ಲಿ ಸಿಬ್ಬಂದಿ ಕೊರತೆ ಇದೆ, ನೀರಗಂಟಿಗಳು ರಾತ್ರಿಪಾಳಿ ಕೆಲಸ ಮಾಡದ ಕಾರಣ ನೀರಿನ ಸಮಸ್ಯೆ ಉಲ್ಬಣಿಸಿದೆ ಎಂದು ಪ್ರಭಾರಿ ಇಇ ಮಲ್ಲಿಕಾರ್ಜುನ ಅಸಹಾಯಕತೆ ವ್ಯಕ್ತಪಡಿಸಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ನೀರಾವರಿ ಇಲಾಖೆಗೆ ಮೊದಲೆ ನಾಲೆ ನೀರು ಹರಿಸುವ ಸಮಸ್ಯೆ ಮನವರಿಕೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿ ಕಾರಿದರು. ಜನತೆ ರೊಚ್ಚಿಗೆದ್ದು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಅಧಿಕಾರಿಗಳ ನಡುವೆ ಸಮನ್ವಯತೆ ಇರದ ಕಾರಣ ಸಮಸ್ಯೆ ಉಲ್ಬಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೊನೆಗೆ ರೈತರು ಬೇಸತ್ತು ಎಂಜಿನಿಯರುಗಳಿಗೆ ಹಾಕಿದ್ದ ದಿಗ್ಭಂಧನ ತೆರವು ಮಾಡಿ ಕಳುಹಿಸಿಕೊಟ್ಟರು. ರೈತರಾದ ಫಾಲಾಕ್ಷಪ್ಪ, ಮಹೇಶ್ವರಪ್ಪ ಬೂದಿಹಾಳ್, ಬಸಪ್ಪ, ಎಚ್.ತಿಪ್ಪೇರುದ್ರಪ್ಪ, ನಾಗರಾಜ್ ದೇವಿರಪ್ಪ, ಸೋಮಶೇಖರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT