ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳವಡಿ ಗ್ರಂಥಾಲಯದಲ್ಲಿ ‘ಓದುವ ಬೆಳಕು’: ಪಿಡಿಒ, ಸದಸ್ಯರ ಪ್ರಯತ್ನ ಯಶಸ್ವಿ

Last Updated 8 ಜನವರಿ 2022, 4:56 IST
ಅಕ್ಷರ ಗಾತ್ರ

ಬೈಲಹೊಂಗಲ: ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಗ್ರಾಮ ಪಂಚಾಯ್ತಿಯನ್ನು ಸುಸಜ್ಜಿತಗೊಳಿಸುವ ಜೊತೆಗೆ ಗ್ರಂಥಾಲಯಕ್ಕೆ ಆಧುನಿಕ ರೂಪ ನೀಡಲಾಗಿದೆ.

ಈ ಸುಧಾರಿತ ಗ್ರಂಥಾಲಯಕ್ಕೆ ಹೆಚ್ಚು ಓದುಗರು ಮನಸೋತಿದ್ದಾರೆ. ಬಂದು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಗ್ರಂಥಾಲಯ ಹೆಚ್ಚು ಓದುಗರನ್ನು ಸೆಳೆಯುವ ಮೂಲಕ ಗಮನಸೆಳೆದಿದೆ.

ವರ್ಣಮಯ: ಸರ್ಕಾರದ ‘ಓದುವ ಬೆಳಕು’ ಕಾರ್ಯಕ್ರಮದಡಿ ಗ್ರಾಮ ಪಂಚಾಯ್ತಿ ನಿಧಿ ಮತ್ತು ಕೇಂದ್ರ 14ನೇ ಹಣಕಾಸು ಯೋಜನೆಯಲ್ಲಿ ₹ 3.90 ಲಕ್ಷ ವೆಚ್ಚದಲ್ಲಿ ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಗ್ರಂಥಾಲಯ ಇರುವ ಹಳೆ ಗ್ರಾಮ ಪಂಚಾಯ್ತಿ ಕಟ್ಟಡದ ಒಳಾಂಗಣವನ್ನು ವರ್ಣಮಯವಾಗಿಸಿ ಮಕ್ಕಳು, ಮಹಿಳಾ, ಕಂಪ್ಯೂಟರ್, ಸ್ಪರ್ಧಾತ್ಮಕ ಪರೀಕ್ಷಾ ಓದು ವಿಭಾಗ ಮಾಡಲಾಗಿದೆ.

ಜ್ಞಾನಿಗಳ ನುಡಿಗಳ ಬರಹ:

ಪುಸ್ತಕ, ಓದಿನ ಕುರಿತಾದ ಚಿತ್ರಗಳು, ಜ್ಞಾನಿಗಳ ನುಡಿಗಳನ್ನು ಗ್ರಂಥಾಲಯದ ಗೋಡೆಗಳಿಗೆ ಬರೆಯಲಾಗಿದೆ. ಕಪಾಟುಗಳಲ್ಲಿ ಪುಸ್ತಕಗಳನ್ನು ಓರಣವಾಗಿ ಜೋಡಿಸಲಾಗಿದೆ. ಮಕ್ಕಳ ಪಠ್ಯಪುಸ್ತಕಗಳು ಸೇರಿದಂತೆ ಸುಮಾರು 6ಸಾವಿರ ಪುಸ್ತಕಗಳನ್ನು ಓದುಗರ ಆಯ್ಕೆಗೆ ಅನುಕೂಲ ಆಗುವಂತೆ ಇಡಲಾಗಿದೆ. ಇನ್ನೊಂದೆಡೆ ಕಂಪ್ಯೂಟರ್‌ನಲ್ಲಿ ಡಿಜಿಟಲ್ ಪುಸ್ತಕಗಳನ್ನು ಲಭ್ಯಗೊಳಿಸಲಾಗಿದೆ. ಅದರೊಂದಿಗೆ ಇ–ಲ್ಯಾಬ್ ತಂತ್ರಾಂಶದ ಮೂಲಕ ವಿದೇಶಗಳ (ಡಿಜಿಟಲ್‌ ವೇದಿಕೆಯಲ್ಲಿ ಸಿಗುವ) ಪುಸ್ತಕಗಳನ್ನು ಓದುವ ಅವಕಾಶ ಕಲ್ಪಿಸಲಾಗಿದೆ. ಈ ವಿಭಾಗವು ಯುವ ಓದುಗರನ್ನು ಆಕರ್ಷಿಸುತ್ತಿದೆ. ಪೀಠೋಪಕರಣ, ಗಾಳಿ–ಬೆಳಕು ಒದಗಿಸಿ ಗ್ರಂಥಾಲಯವನ್ನು ಓದುಗ ಸ್ನೇಹಿಯಾಗಿ ರೂಪಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಗ್ರಾಮ ಪಂಚಾಯ್ತಿ ಪಿಡಿಒ ಉಸ್ಮಾನ್ ನದಾಫ, ‘ಓದುಗರು ಸ್ಮಾರ್ಟ್ ಮೊಬೈಲ್‌ ಫೋನ್‌ಗಳ ಬಳಕೆಗೆ ಅಂಟಿಕೊಂಡ ಕಾರಣ ಗ್ರಂಥಾಲಯಗಳು– ಅಲ್ಲಿನ ಪುಸ್ತಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅದಕ್ಕಾಗಿ ಸರ್ಕಾರದ ಆದೇಶ ಅನುಸರಿಸಿ, ಅನುದಾನ ಬಳಕೆಯ ಅವಕಾಶ ಬಳಸಿಕೊಂಡು ಗ್ರಾಮ ಪಂಚಾಯ್ತಿ ಗ್ರಂಥಾಲಯಕ್ಕೆ ಆಧುನಿಕ ರೂಪ ನೀಡಲಾಗಿದೆ. ಬಳಕೆದಾರರ ಸ್ಪಂದನೆಗೆ ಅನುಗುಣವಾಗಿ ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು’ ಎಂದರು.

‘ಎಲ್ಲವನ್ನೂ ಮೊಬೈಲ್ ಫೋನ್‌್ ಮೂಲಕವೇ ನಿರ್ವಹಿಸುವಂತಹ ಈ ಕಾಲಘಟ್ಟದಲ್ಲಿ ಪುಸ್ತಕ ಓದುವವರು, ಗ್ರಂಥಾಲಯಕ್ಕೆ ಹೋಗುವವರ ಸಂಖ್ಯೆ ದಿನದಿಂದ ದಿನ ಕಡಿಮೆಯಾಗುತ್ತಿದೆ. ಇದಕ್ಕಾಗಿ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಜನರು ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಬೇಕೆಂಬ ಮಹದಾಸೆಯಿಂದ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ರೂಪಿಸಲಾಗುತ್ತಿದೆ. ಇದರ ಸದ್ಬಳಕೆ ಅತ್ಯವಶ್ಯ’ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಕಾರ್ಯನಿವಾರ್ಹಕ ಅಧಿಕಾರಿ ಸುಭಾಸ ಸಂಪಗಾಂವ.

ಖುಷಿ ತಂದಿದೆ

ಕೇಂದ್ರದ 14ನೇ ಹಣಕಾಸು ಯೋಜನೆಯಲ್ಲಿ ಒಟ್ಟು ₹ 3.90 ಲಕ್ಷ ವೆಚ್ಚದಲ್ಲಿ ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಹೆಚ್ಚು ಓದುಗರು ಸೆಳೆದಿರುವುದು ಖುಷಿ ತಂದಿದೆ.

–ಉಸ್ಮಾನ್ ನದಾಫ, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT