ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ : ತಗ್ಗಿದ ಮಳೆ, ಪ್ರವಾಹ ಇಳಿಮುಖ

ಜಲಾವೃತವಾಗಿದ್ದ ಸೇತುವೆಗಳು ಸಂಚಾರಕ್ಕೆ ಮುಕ್ತ
Last Updated 19 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆಲವು ಭಾಗದಲ್ಲಿ ಬಿರುಸಿನಿಂದ ಕೂಡಿದ್ದರೂ ಬಹುತೇಕ ಕಡೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹ ಇಳಿಕೆಯಾಗಿದ್ದು, ಮುಳುಗಡೆಯಾಗಿದ್ದ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಅದರ ಉಪ ನದಿಗಳ ಪ್ರವಾಹಕ್ಕೆ 10 ದಿನಗಳಿಂದ ಜಲಾವೃತಗೊಂಡಿದ್ದ 6 ಸೇತುವೆಗಳು ಸೋಮವಾರ ಸಂಚಾರಕ್ಕೆ ಮುಕ್ತವಾಗಿವೆ. ಈ ಮೂಲಕ ಜಲಾವೃತಗೊಂಡಿದ್ದ ಒಟ್ಟು 12 ಸೇತುವೆಗಳು ಸಂಚಾರಕ್ಕೆ ಮುಕ್ತವಾದಂತಾಗಿವೆ.

ಅಥಣಿ ತಾಲ್ಲೂಕಿನ ದರೂರು ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದರೂ ರಸ್ತೆ ತುಂಬಾ ಹಾಳಾಗಿರುವುದರಿಂದ ಕೇವಲ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಯಬಾಗ ತಾಲ್ಲೂಕಿನ ಕುಡಚಿ ಹಾಗೂ ಚಿಂಚಲಿ– ಹಾಲಹಳ್ಳಿ ಸೇತುವೆಗಳ ಮೇಲೆಯೂ ಲಘು ವಾಹನಗಳು ಸಂಚರಿಸುತ್ತಿವೆ.

ಹುಬ್ಬಳ್ಳಿ–ಧಾರವಾಡ ಅವಳಿನಗರಗಳಲ್ಲಿ ಹಾಗೂ ಶಿರಸಿಯಲ್ಲಿ ಸೋಮವಾರ ಮಧ್ಯಾಹ್ನ ಸ್ವಲ್ಪ ಹೊತ್ತು ಮಳೆ ಸುರಿದಿದೆ.

‌ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಕಾಳಗಿ ಮತ್ತು ಕಮಲಾಪುರ ತಾಲ್ಲೂಕುಗಳಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆಯಾಯಿತು. ಕಲಬುರ್ಗಿ ನಗರದಲ್ಲಿ ಸಾಧಾರಣ ಮಳೆಯಾಗಿದೆ.

ಉತ್ತಮ ಮಳೆ: ಶಿವಮೊಗ್ಗ ನಗರ ಹಾಗೂ ಭದ್ರಾವತಿ ತಾಲ್ಲೂಕಿನ ಕೆಲವೆಡೆ ಸೋಮವಾರ ಒಂದುತಾಸುಉತ್ತಮ ಮಳೆಯಾಗಿದೆ. ಶಿಕಾರಿಪುರ, ಕೋಣಂದೂರು, ಸೊರಬ ತಾಲ್ಲೂಕಿನಲ್ಲಿ ಕೆಲಕಾಲ ಉತ್ತಮ ಮಳೆಯಾಗಿದೆ. ಸಾಗರ, ತೀರ್ಥಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.

ದಾವಣಗೆರೆಯಲ್ಲಿ ಭಾನುವಾರ ಸಂಜೆಯ ಬಳಿಕ ನಾಲ್ಕು ಗಂಟೆಗಳ ಕಾಲ ಭಾರಿ ಮಳೆಯಾಗಿ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಆದರೆ, ಸೋಮವಾರ ದಿನವಿಡೀ ಬಿಡುವು ನೀಡಿತ್ತು. ಸಂಜೆಯ ಬಳಿಕ ತುಂತುರು ಮಳೆಯಾಯಿತು.

ನಾಗಮಂಗಲದಲ್ಲಿ ಬಿರುಸಿನ ಮಳೆ: ಮೈಸೂರು, ಮಡಿಕೇರಿ, ಮಂಡ್ಯ ಹಾಗೂ ಹಾಸನ ಜಿಲ್ಲೆಯ ಹಲವೆಡೆ ಸೋಮವಾರ ಸಂಜೆ ಮಳೆಯಾಗಿದೆ.‌ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಎರಡು ತಾಸು ಬಿರುಸಿನ ಮಳೆಯಾಗಿದೆ.

ದಕ್ಷಿಣ ಕೊಡಗಿನ ತಿತಿಮತಿ, ಮತ್ತಿಗೋಡು, ದೇವಮಚ್ಚಿ, ಪೊನ್ನಂಪೇಟೆ, ಅರಣ್ಯ ಭಾಗದಲ್ಲಿ ಮಧ್ಯಾಹ್ನ ಅರ್ಧ ತಾಸು ಧಾರಾಕಾರ ಮಳೆ ಬಿದ್ದಿತು. ಗೋಣಿಕೊಪ್ಪಲು, ಕಿರುಗೂರು, ಬಾಳೆಲೆ ಭಾಗದಲ್ಲೂ ಉತ್ತಮ ಮಳೆ ಯಾಗಿದೆ. ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಮಧ್ಯಾಹ್ನದ ನಂತರ ಸಾಧಾರಣವಾಗಿ ಮಳೆ ಸುರಿಯಿತು.

ರಸ್ತೆ ಕುಸಿದು ಸಂಚಾರ ಬಂದ್ ಆಗಿದ್ದ ವಿರಾಜಪೇಟೆ -ಮಾಕುಟ್ಟ ರಸ್ತೆಯಲ್ಲಿ ದ್ವಿಚಕ್ರ, ಕಾರು ಸೇರಿದಂತೆ ಲಘು ವಾಹನ ಸಂಚಾರಕ್ಕೆ ಸೋಮವಾರ ಸಂಜೆಯಿಂದ ಅವಕಾಶ ಕಲ್ಪಿಸಲಾಗಿದೆ.

ಭಾನುವಾರ ಸಂಜೆ ಸುರಿದ ಮಳೆಗೆ, ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ನಾಲ್ಕು ಮನೆಗಳು ಕುಸಿದಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧೆಡೆ ಸೋಮವಾರ ಸಾಧಾರಣ ಮಳೆಯಾಗಿದೆ.

ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ: ಬೆಂಗಳೂರು: ‘ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಆಗಸ್ಟ್‌ 20 ಮತ್ತು 21ರಂದು ಸಾಧಾರಣ ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಸೋಮವಾರ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ರಾಜ್ಯದ ಹಲವೆಡೆ ಮಳೆಯಾಗಿದೆ. ಬೆಂಗಳೂರಿನಲ್ಲಿ ಇನ್ನೆರಡು ದಿನಗಳ ಕಾಲ ಗರಿಷ್ಠ 6 ಸೆಂ.ಮೀ ಮಳೆಯಾಗುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT