ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಆರ್‌ಸಿ ಕಚೇರಿ ರದ್ದತಿ ವಿರೋಧಿಸಿ ಪ್ರತಿಭಟನೆ

Last Updated 16 ಜುಲೈ 2021, 14:42 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಾದೇಶಿಕ ಆಯುಕ್ತರ ಕಚೇರಿ (ಆರ್‌ಸಿ)ಗಳನ್ನು ರದ್ದುಗೊಳಿಸದಂತೆ ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕನ್ನಡ ಹೋರಾಟಗಾರರು ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ನೇತೃತ್ವದ ಆಡಳಿತ ಸುಧಾರಣೆ ಸಮಿತಿಯು, ರಾಜ್ಯದ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸಿ ರಾಜ್ಯ ಮಟ್ಟದಲ್ಲಿ ಕಂದಾಯ ಸಚಿವಾಲಯ ರಚಿಸಬೇಕೆಂಬ ಶಿಫಾರಸು ಸಂವಿಧಾನದ ಮೂಲ ತತ್ವವಾದ ಅಧಿಕಾರ ವಿಕೇಂದ್ರೀಕರಣದ ವಿರೋಧಿಯಾಗಿದೆ. ಇಂತಹ ಕ್ರಮವು ಜನರಿಗಾಗಲಿ, ಅಭಿವೃದ್ಧಿ ಮತ್ತು ಒಳ್ಳೆಯ ಆಡಳಿತಕ್ಕಾಗಲಿ ಅನುಕೂಲಕರವಲ್ಲ. ಹಿರಿಯ ಐಎಎಸ್ ಅಧಿಕಾರಿಗಳು ಬೆಂಗಳೂರಿನಿಂದ ಹೊರಗೆ ಹೋಗಲು ಇಚ್ಛಿಸುವುದಿಲ್ಲ ಎಂಬ ಕಾರಣಕ್ಕೆ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸುವುದು ಸರಿಯಲ್ಲ’ ಎಂದು ಹೇಳಿದರು.

‘ವರದಿಯನ್ನು ಅಂಗೀಕರಿಸಿ ಈ ಕಚೇರಿಗಳನ್ನು ರದ್ದುಗೊಳಿಸುವ ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರವು ಶಿಫಾರಸನ್ನು ಒಪ್ಪಿ ಆರ್‌ಸಿ ಕಚೇರಿಗಳನ್ನು ರದ್ದುಪಡಿಸಿದರೆ ಸಾರ್ವಜನಿಕರಿಗೆ ಅದರಲ್ಲೂ ಉತ್ತರ ಕರ್ನಾಟಕದ 13 ಜಿಲ್ಲೆಗಳ ಜನರಿಗೆ ತೀವ್ರ ತೊಂದರೆ ಆಗುವುದು ನಿಶ್ಚಿತ. ಹಲವು ಕಾರ್ಯಗಳಿಗಾಗಿ ಜನರು ದೂರದ ಬೆಂಗಳೂರಿಗೆ ಅಲೆಯಬೇಕಾಗುತ್ತದೆ. ಪ್ರಾದೇಶಿಕ ಆಯುಕ್ತರಿಗೆ ಇರುವ ಅಧಿಕಾರವನ್ನು ಕಂದಾಯ ಸಚಿವರು ತಿಳಿದುಕೊಳ್ಳಬೇಕು’ ಎಂದು ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿರುಗೇಟು ನೀಡಿದರು.

‘ಅಧಿಕಾರದ ವಿಕೇಂದ್ರೀಕರಣದ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವ ಶಿಫಾರಸನ್ನು ಯಾವುದೇ ಪರಿಸ್ಥಿತಿಯಲ್ಲೂ ಒಪ್ಪಿಕೊಳ್ಳಬಾರದು’ ಎಂದು ಆಗ್ರಹಿಸಿದರು.

‘ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ನಾವು ಹೋರಾಟ ಮಾಡುತ್ತಾ ಬಂದಿದ್ದೇವೆ. ಹೀಗಿರುವಾಗ, ಇರುವ ಕಚೇರಿಯನ್ನೂ ರದ್ದುಗೊಳಿಸುವ ಚಿಂತನೆ ಆಘಾತಕಾರಿಯಾಗುದು’ ಎಂದು ಕಳವಳ ವ್ಯಕ್ತಪಡಿಸಿದರು.

ಕರವೇ ಸಂಚಾಲಕ ಮಹದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT