ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್ವಸತಿ ಕಾರ್ಯಕರ್ತರ ಗೌರವಧನ ಹೆಚ್ಚಳ: ಶಶಿಕಲಾ ಜೊಲ್ಲೆ

Last Updated 28 ಜನವರಿ 2020, 12:26 IST
ಅಕ್ಷರ ಗಾತ್ರ

ಬೆಳಗಾವಿ: ‘ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‌ಡಬ್ಲು), ನಗರ ಪುನರ್ವಸತಿ ಕಾರ್ಯಕರ್ತರು (ಯುಆರ್‌ಡಬ್ಲು) ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿಆರ್‌ಡಬ್ಲು) ಗೌರವ ಧನವನ್ನು ಹೆಚ್ಚಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂಆರ್‌ಡಬ್ಲು ಅವರಿಗೆ ಇದುವರೆಗೆ ₹ 6,000 ನೀಡಲಾಗುತ್ತಿದ್ದ ಗೌರವ ಧನವನ್ನು ₹ 12,000ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ, ಯುಆರ್‌ಡಬ್ಲು ಹಾಗೂ ವಿಆರ್‌ಡಬ್ಲು ಅವರಿಗೆ ನೀಡಲಾಗುತ್ತಿದ್ದ ₹ 3,000 ಗೌರವ ಧನವನ್ನು ₹ 6,000ಕ್ಕೆ ಹೆಚ್ಚಿಸಲಾಗಿದೆ. ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಪ್ರಸಕ್ತ ತಿಂಗಳಿನಿಂದಲೇ ಜಾರಿಯಾಗಲಿದೆ’ ಎಂದು ತಿಳಿಸಿದರು.

ಅಂಗವಿಕಲರ ಸಮೀಕ್ಷೆ:‘ಈ ಮೊದಲು 7ರಿಂದ8 ನ್ಯೂನ್ಯತೆಗಳನ್ನು ಮಾತ್ರ ಅಂಗವೈಕಲ್ಯ ಎಂದು ಗುರುತಿಸಲಾಗುತ್ತಿತ್ತು. ಈಗ 21 ರೀತಿಯ ದೈಹಿಕ ನ್ಯೂನ್ಯತೆಗಳನ್ನೂ ಅಂಗವೈಕಲ್ಯವೆಂದು ಗುರುತಿಸಬೇಕಾಗಿದೆ. ಅದಕ್ಕಾಗಿ ಅಂಗವಿಕಲರ ಸಮೀಕ್ಷೆಯನ್ನು ಮಾರ್ಚ್‌– ಏಪ್ರಿಲ್‌ನಲ್ಲಿ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಅಕ್ಕಿ ಪ್ರಮಾಣ ಇಳಿಕೆಗೆ ಚಿಂತನೆ:‘ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ 7 ಕೆ.ಜಿ ಅಕ್ಕಿಯ ಪ್ರಮಾಣವನ್ನು 5 ಕೆ.ಜಿ. ಪ್ರಮಾಣಕ್ಕೆ ಕಡಿತಗೊಳಿಸುವ ಚಿಂತನೆ ನಡೆದಿದೆ. ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ನುಡಿದರು.

ಅನರ್ಹರ ಪತ್ತೆಗೆ ಕ್ರಮ:‘ನಿಯಮ ಬಾಹಿರವಾಗಿ ಪಡೆದ ಬಿಪಿಎಲ್‌ ಕಾರ್ಡ್‌ಗಳನ್ನು ವಾಪಸ್‌ ನೀಡಲು ಮಾರ್ಚ್‌ 31ರವರೆಗೆ ಅವಕಾಶ ನೀಡಲಾಗಿದೆ. ಅಷ್ಟರೊಳಗೆ ವಾಪಸ್‌ ನೀಡದಿದ್ದರೆ ಅಂತಹವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅನರ್ಹರನ್ನು ಪತ್ತೆ ಹಚ್ಚಲು ಆಧಾರ್‌ ಕಾರ್ಡ್‌ ಹಾಗೂ ಆರ್‌ಟಿಒ ದಾಖಲೆಗಳ ಜೊತೆ ರೇಷನ್‌ ಕಾರ್ಡ್‌ಗಳನ್ನು ಲಿಂಕ್‌ ಮಾಡಲಾಗುವುದು. ನಾಲ್ಕು ಚಕ್ರಗಳ ವಾಹನ ಹೊಂದಿದವರ ಬಳಿ ಬಿಪಿಎಲ್‌ ಕಾರ್ಡ್‌ಗಳಿದ್ದರೆ ಅವುಗಳನ್ನು ರದ್ದುಪಡಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT