ಕಣದಲ್ಲಿ ರಾಜಕಾರಣಿಗಳ ಕುಡಿಗಳು !

7
ಸ್ಥಳೀಯ ಸಂಸ್ಥೆಗಳ ಚುನಾವಣೆ

ಕಣದಲ್ಲಿ ರಾಜಕಾರಣಿಗಳ ಕುಡಿಗಳು !

Published:
Updated:

ಬೆಳಗಾವಿ: ರಾಜಕಾರಣದ ಮೊದಲ ಮೆಟ್ಟಿಲು ಎಂದು ಕರೆಯಿಸಿಕೊಳ್ಳುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಜಿಲ್ಲೆಯಲ್ಲಿ ರಂಗೇರಿದೆ. ರಾಜಕಾರಣದ ಅ, ಆ, ಇ, ಈ... ಕಲಿತುಕೊಳ್ಳಲಿ ಎನ್ನುವ ಉದ್ದೇಶದಿಂದ ಜಿಲ್ಲೆಯ ಹಲವು ಹಿರಿಯ ರಾಜಕಾರಣಿಗಳು ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕೆ ಇಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ, ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಅವರ ಸೊಸೆ ಜಯಲಕ್ಷ್ಮಿ ಸಿದ್ದಲಿಂಗಯ್ಯ ತಾಯಣ್ಣವರ ಅವರು ಗೋಕಾಕ ನಗರಸಭೆಯ ವಾರ್ಡ್‌ ನಂಬರ್‌ 19ರಿಂದ ಕಣಕ್ಕಿಳಿದಿದ್ದಾರೆ. ವಾರ್ಡ್‌ ನಂಬರ್‌ 20ರಿಂದ ಅಕ್ಕನ ಮಗನ ಹೆಂಡತಿ ವನಶ್ರೀ ಬಸವರಾಜ ತಾಯಣ್ಣವರ ಸ್ಪರ್ಧಿಸಿದ್ದಾರೆ. ಇವರು ಕಳೆದ ಬಾರಿ 19ನೇ ವಾರ್ಡ್‌ನ ಸದಸ್ಯರಾಗಿದ್ದರು. ಈಗ ವಾರ್ಡ್‌ ಬದಲಾಯಿಸಿದ್ದಾರೆ. ವಿಶೇಷವೆಂದರೆ ಇವರಿಬ್ಬರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಲ್ಲ, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರಿಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲು ಕಸರತ್ತುಗಳು ನಡೆದಿವೆ.

ಚಿಕ್ಕೋಡಿಯ ಪುರಸಭೆ ವಾರ್ಡ್‌ ಸಂಖ್ಯೆ 22ರಲ್ಲಿ ಸಂಸದ, ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಅವರ ಪತ್ನಿಯ ಸೋದರ ಪ್ರಭಾಕರ ಈರಪ್ಪ ಕೋರೆ ಅವರು ಕಣಕ್ಕಿಳಿದಿದ್ದಾರೆ. ಇವರು 5ನೇ ವಾರ್ಡ್‌ನಿಂದಲೂ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕಿಂತಲೂ ಮುಂಚೆ ಇವರು 5 ಸಲ ಪುರಸಭೆಗೆ ಆಯ್ಕೆಯಾಗಿದ್ದಾರೆ. 6ನೇ ಸಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇದೇ ರೀತಿ ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಅವರ ಸಂಬಂಧಿಕರು ಕೂಡ ಕಣಕ್ಕಿಳಿದಿದ್ದಾರೆ. ಇವರ ಸಹೋದರ ಜಗದೀಶ ಕವಟಗಿಮಠ ಅವರು ಚಿಕ್ಕೋಡಿ ಪುರಸಭೆಯ 22ನೇ ವಾರ್ಡ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕಿಂದ ಮುಂಚೆ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಜಗದೀಶ ಅವರ ಪತ್ನಿ ವೀಣಾ ಕವಟಗಿಮಠ ಅವರು 20ನೇ ವಾರ್ಡ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಅವರು ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಮಹಾಂತೇಶ ಕವಟಗಿಮಠ ಅವರ ಸೋದರ ಸಂಬಂಧಿಯಾಗಿರುವ ಸಂಜಯ ಕವಟಗಿಮಠ ಅವರು 5ನೇ ವಾರ್ಡ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಇವರೆಲ್ಲರೂ ಕೂಡ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಶಾಸಕ ದುರ್ಯೋಧನ ಐಹೊಳೆ ಅವರ ಅಳಿಯ ಮಹೇಶ ಕರ್ಮಡಿ ಅವರು ರಾಯಬಾಗ ಪಟ್ಟಣ ಪಂಚಾಯ್ತಿಯ 8ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದಾರೆ. ಈ ವಾರ್ಡ್‌ ಎಸ್‌.ಸಿ ಮೀಸಲಾತಿ ಹೊಂದಿತ್ತು. ಮಹೇಶ ಅವರು ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ.

ಬೈಲಹೊಂಗಲ ಪುರಸಭೆ 7ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿರುವ ರಾಜಶೇಖರ ಮೂಗಿ ಅವರು ಮಾಜಿ ಶಾಸಕ ವಿಶ್ವನಾಥ ಪಾಟೀಲ ಅವರ ಸೋದರ ಸಂಬಂಧಿಯಾಗಿದ್ದಾರೆ. ಇವರು ನಾಲ್ಕನೇ ಬಾರಿ ಕಣಕ್ಕಿಳಿದಿದ್ದಾರೆ. ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರ ಅಣ್ಣನ ಮಗ ಗುರು ಮೆಟಗುಡ್ಡ ಅವರು 18ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದಾರೆ. ಇವರು ಮೂರನೇ ಬಾರಿ ಕಣಕ್ಕಿಳಿದಿದ್ದಾರೆ.

ಕಣಕ್ಕಿಳಿದ ಎಂಎಲ್‌ಇ ಅಭ್ಯರ್ಥಿ:

ಕಳೆದ ಏಪ್ರಿಲ್‌– ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮದುರ್ಗದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಗಜರಾಜ ದೇವೂರು ಅವರು ಈಗ ಪುರಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ವಾರ್ಡ್‌ ಸಂಖ್ಯೆ 25ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !