ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು ಉತ್ಸವದ ಬೆಳ್ಳಿ ಹಬ್ಬ: ಪ್ರಚಾರ ಸಾಮಗ್ರಿ ಬಿಡುಗಡೆ

Last Updated 18 ಅಕ್ಟೋಬರ್ 2021, 12:45 IST
ಅಕ್ಷರ ಗಾತ್ರ

ಬೆಳಗಾವಿ: ‘ವೀರ ರಾಣಿ ಕಿತ್ತೂರು ಚನ್ನಮ್ಮ ಉತ್ಸವವನ್ನು ರಾಜ್ಯಮಟ್ಟದ ಉತ್ಸವವೆಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ’ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಿತ್ತೂರು ಉತ್ಸವ-2021ರ ಪ್ರಚಾರ ಸಾಮಗ್ರಿಗಳನ್ನು ಸೋಮವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಈ ಬಾರಿಯ ಉತ್ಸವ ಅ.23 ಹಾಗೂ 24ರಂದು ನಡೆಯಲಿದೆ. ಕೋವಿಡ್ ಕಾರಣದಿಂದಾಗಿ 3 ದಿನಗಳ ಬದಲಿಗೆ 2 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಹಿಂದಿನ 2 ವರ್ಷ ಸರಳವಾಗಿ ಆಯೋಜಿಸಲಾಗಿತ್ತು. ಈ ಬಾರಿ ಉತ್ಸವವನ್ನು ಉದ್ಘಾಟಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರಲಿದ್ದಾರೆ. ರಾಜ್ಯಮಟ್ಟದ ಉತ್ಸವ ಎಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

‘1997ರಿಂದ ಉತ್ಸವ ಆಚರಣೆ ಆರಂಭಗೊಂಡಿದ್ದು, 1998ರಿಂದ ಸರ್ಕಾರದಿಂದ ನಡೆಸಲಾಗುತ್ತಿದೆ. ಈ ಬಾರಿ ಕಿತ್ತೂರು ಉತ್ಸವದ ಬೆಳ್ಳಿಹಬ್ಬ ಆಚರಿಸಲಾಗುತ್ತಿದೆ’ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ:

‘ಜಿಲ್ಲಾ ಉತ್ಸವಗಳಿಗೆ ₹ 30 ಲಕ್ಷ ಅನುದಾನವನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಈ ವರ್ಷ ಹೆಚ್ಚುವರಿಯಾಗಿ ₹ 75 ಲಕ್ಷ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಹೀಗಾಗಿ, ಒಟ್ಟು ₹ 1.05 ಕೋಟಿ ಲಭ್ಯವಾಗಲಿದೆ’ ಎಂದು ತಿಳಿಸಿದರು.

‘ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವೆಂದು ಘೋಷಿಸಿದರೆ ಪ್ರತಿ ವರ್ಷ ₹ 2ಕೋಟಿಯಿಂದ ₹ 5 ಕೋಟಿ ಅನುದಾನ ದೊರೆಯಲಿದೆ’ ಎಂದರು.

‘ಎರಡು ದಿನಗಳ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಚಾರ ಗೋಷ್ಠಿಗಳಿಗೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುವುದು. ಉತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಬೆಳಗಾವಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಬೈಲಹೊಂಗಲ‌ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವಾರ್ತಾ ಇಲಾಖೆ ಪ್ರಭಾರ ಉಪನಿರ್ದೇಶಕ ಗುರುನಾಥ ಕಡಬೂರ ಇದ್ದರು.

‘ಸ್ಥಳೀಯರಿಗೆ ಆದ್ಯತೆ, 7 ಗೋಷ್ಠಿಗಳು’

ಜಿಲ್ಲಾಧಿಕಾರಿ ಹಾಗೂ ಕಿತ್ತೂರು ಚನ್ನಮ್ಮ ಉತ್ಸವ ಸಮಿತಿ ಅಧ್ಯಕ್ಷ ಎಂ.ಜಿ. ಹಿರೇಮಠ ಉತ್ಸವದ ವಿವರ ನೀಡಿದರು.

‘ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ.ಅ.23ರಂದು ಸಂಜೆ 7ಕ್ಕೆ ಮುಖ್ಯಮಂತ್ರಿ ಉದ್ಘಾಟಿಸುವರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ‘ಭಾರತ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಚನ್ನಮ್ಮಾಜಿಯವರ 25ನೇ ಉತ್ಸವ’ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ‘ಕಿತ್ತೂರು ಸಂಸ್ಥಾನದ ಇತಿಹಾಸ ಮತ್ತು ಸಂಸ್ಕೃತಿ’ ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಬಿಡುಗಡೆ ಮಾಡುವರು. ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಅ.24ರಂದು ಕಿತ್ತೂರು ರಾಣಿ ಚನ್ನಮ್ಮನ ಚರಿತ್ರೆ ಕುರಿತು ರಾಜ್ಯ ಮಟ್ಟದ ವಿಚಾರಸಂಕಿರಣ ನಡೆಯಲಿದೆ. ಚನ್ನಮ್ಮನ ಇತಿಹಾಸ ಕುರಿತು 7 ವಿಚಾರಗೋಷ್ಠಿಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಡಲಾಗಿದೆ. ರಾಜ್ಯಮಟ್ಟದ ಕಲಾವಿದರೂ ಕಾರ್ಯಕ್ರಮ ನೀಡಲಿದ್ದಾರೆ. ಇದರೊಂದಿಗೆ ಸೈಕ್ಲಿಂಗ್, ಪುರುಷರು ಹಾಗೂ ಮಹಿಳೆಯರಿಗೆ ಮುಕ್ತ ವಾಲಿಬಾಲ್ ಪಂದ್ಯಗಳು, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ’ ಎಂದರು.

‘24ರಂದು ಸಂಜೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಆರ್‌ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಸಮಾರೋಪ ಭಾಷಣ ಮಾಡುವರು. ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಗುವುದು. ಬಳಿಕ ಸಿಡಿಮದ್ದು ಕಾರ್ಯಕ್ರಮ ಇರುತ್ತದೆ. ಕೋವಿಡ್ ಮಾರ್ಗಸೂಚಿ ಪ್ರಕಾರ 400 ಮಂದಿ ಸೇರಲು ಅವಕಾಶವಿದೆ. ಮಾರ್ಗಸೂಚಿ ಪ್ರಕಾರ ಉತ್ಸವ ನಡೆಸಲಾಗುವುದು’ ಎಂದು ಹೇಳಿದರು.

ಕುಸ್ತಿ ಪಂದ್ಯ ಇಲ್ಲ

ಕಿತ್ತೂರು ಉತ್ಸವದಲ್ಲಿ ಕಲಾ ತಂಡಗಳ ಮೆರವಣಿಗೆ ಇರಲಿದೆ. ಆದರೆ, ಕೋವಿಡ್ ಕಾರಣದಿಂದ ಕುಸ್ತಿ ಪಂದ್ಯಗಳನ್ನು ನಡೆಸಲಾಗುತ್ತಿಲ್ಲ.

–ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ಮುಖ್ಯಾಂಶಗಳು

* 2 ದಿನಗಳ ಉತ್ಸವ, ಕುಸ್ತಿ ಇಲ್ಲ

* ₹ 1.05 ಕೋಟಿ ಅನುದಾನ

* ಕೋವಿಡ್ ಮಾರ್ಗಸೂಚಿ ಪಾಲನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT