ಶುಕ್ರವಾರ, ಮಾರ್ಚ್ 5, 2021
27 °C
ಪರಿಹಾರ ಕೈಗೊಳ್ಳಲು ಸಿಬ್ಬಂದಿ, ಸಾಮಗ್ರಿ ಕೊರತೆ!

ಟೈರ್‌ ಟ್ಯೂಬ್‌ ಬೋಟ್‌ನಲ್ಲಿ ಜನರ ಸಾಗಾಟ!

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಸಂಕೇಶ್ವರ (ಬೆಳಗಾವಿ ಜಿಲ್ಲೆ): ಮಳೆ ಹಾಗೂ ಪ್ರವಾಹಕ್ಕೆ ತತ್ತರಿಸಿಹೋಗಿರುವ ಬೆಳಗಾವಿ ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಿಬ್ಬಂದಿ ಹಾಗೂ ಸಾಮಗ್ರಿಗಳ ತೀವ್ರ ಕೊರತೆ ಎದುರಾಗಿದೆ.

ಬೋಟ್‌ಗಳ ವ್ಯವಸ್ಥೆ ಇಲ್ಲದಿರುವುದರಿಂದ ಜನರು ಹಗ್ಗ ಕಟ್ಟಿಕೊಂಡು, ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಪ್ರವಾಹದ ನೀರಿನಲ್ಲಿಯೇ ನಡೆದುಕೊಂಡು ದಡ ಸೇರುತ್ತಿದ್ದಾರೆ. ಟೈರ್‌ ಟ್ಯೂಬ್‌ ಬಳಸಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಪತ್ರಿಕೆಯ ಪ್ರತಿನಿಧಿ ಭೇಟಿ ನೀಡಿದಾಗ ಕಂಡುಬಂದ ದೃಶ್ಯಗಳಿವು.

ಹಿರಣ್ಯಕೇಶಿ ನದಿಯ ಹಿನ್ನೀರು ಸಂಕೇಶ್ವರ ಪಟ್ಟಣದೊಳಗೆ ನುಗ್ಗಿ ಆವಾಂತರ ಸೃಷ್ಟಿಸಿದೆ. ಎರಡು ದಿನಗಳಾದರೂ ಪರಿಹಾರ ತಂಡ ಬರಲಿಲ್ಲ. ಕಾದು ಕಾದು ಸುಸ್ತಾದ ಮಹಾಲಕ್ಷ್ಮಿ ಗುಡಿ ಪ್ರದೇಶದ ಯುವಕರು, ನಿಚ್ಚಣಿಕೆಗೆ ಎರಡೂ ಕಡೆ ಟೈರ್‌ ಟ್ಯೂಬ್‌ಗಳನ್ನು ಕಟ್ಟಿ ದೋಣಿ ತಯಾರಿಸಿದರು. ಮಹಿಳೆಯರು, ವೃದ್ಧರನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸಿದರು.

ಬೈಲಹೊಂಗಲದ ನೇಗಿನಹಾಳ, ನಾಗನೂರು ಸೇತುವೆಗಳು ಜಲಾವೃತವಾಗಿದ್ದು, ಜನರೇ ನಡೆದುಕೊಂಡು ನದಿ ದಾಟಿದ್ದಾರೆ. ಅವರಿಗೆ ಯಾವುದೇ ದೋಣಿಗಳು ಲಭ್ಯವಾಗಿಲ್ಲ. ಬೆಳಗಾವಿ ಬಳಿಯ ಕಬಲಾಪುರದಲ್ಲಿ ಮರವೇರಿ ಕುಳಿತಿದ್ದ ದಂಪತಿಯನ್ನು ಸೂಕ್ತ ಪರಿಹಾರ ಸಾಮಗ್ರಿಗಳು ಇಲ್ಲದ್ದರಿಂದ ರಕ್ಷಿಸಲು ವಿಳಂಬವಾಗಿತ್ತು.

ಗೋಕಾಕದ ಹೊರವಲಯ ಯೋಗಿಕೊಳ್ಳದ ಬಳಿ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದು, ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ನೀರಿನಿಂದ ರಕ್ಷಣೆ ಪಡೆಯಲು ಧರೆಪ್ಪ ಹೆಜ್ಜೆಗಾರ (23) ಮರ ಏರಿ ಕುಳಿತು 48 ಗಂಟೆ ಕಳೆದಿದ್ದರೂ ಅವರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ.

ಎನ್‌ಡಿಆರ್‌ಎಫ್‌ನ 4, ಎಸ್‌ಡಿಆರ್‌ಎಫ್‌ನ 5, ಸೇನೆಯ 2 ಹಾಗೂ ಅಗ್ನಿಶಾಮಕ ದಳದ 14 ತಂಡಗಳು, ಗೃಹರಕ್ಷಕ ದಳದ 150 ಸಿಬ್ಬಂದಿಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಕೇವಲ 17 ಯಾಂತ್ರೀಕೃತ ದೋಣಿಗಳು ಹಾಗೂ ಮಾನವ ಚಾಲಿತ 15 ದೋಣಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಜಿಲ್ಲೆಯ ಎಲ್ಲ ಪ್ರದೇಶಗಳು ತತ್ತರಿಸಿ ಹೋಗಿರುವುದರಿಂದ, ಇಷ್ಟು ಸಂಖ್ಯೆಯ ಸಿಬ್ಬಂದಿ ಹಾಗೂ ದೋಣಿಗಳು ಸಾಕಾಗುತ್ತಿಲ್ಲ.

‘ನೀರಿನ ಪ್ರವಾಹ ಅತ್ಯಂತ ರಭಸವಾಗಿದ್ದು, ರಬ್ಬರ್‌ ಬೋಟ್‌ ಬಳಸಲು ಸಾಧ್ಯವಾಗುತ್ತಿಲ್ಲ. ಮೋಟಾರ್‌ ಇರುವಂತಹ ಬೋಟ್‌ ಬೇಕು’ ಎಂದು ಹೆಸರು ಹೇಳಲು ಇಚ್ಛಿಸದ ರಾಷ್ಟ್ರೀಯ ವಿಕೋಪ ಪರಿಹಾರ ತಂಡದ ಸದಸ್ಯರೊಬ್ಬರು ತಿಳಿಸಿದರು.

‘ಎಷ್ಟೊಂದು ಪ್ರಮಾಣದಲ್ಲಿ ನೀರು ನುಗ್ಗಿ ಬರುತ್ತಿದೆ ಎನ್ನುವ ಅಂದಾಜು ಸಿಗುತ್ತಿಲ್ಲ. ನೀರಿನ ರಭಸವನ್ನು ಎದುರಿಸುವಂತಹ ಮೋಟಾರ್‌ ದೋಣಿಗಳಾಗಲಿ, ಅತ್ಯಾಧುನಿಕ ಸಲಕರಣೆಗಳಾಗಲಿ ನಮ್ಮಲ್ಲಿ ಇಲ್ಲ. ಹೀಗಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಅಡಚಣೆ ಉಂಟಾಗುತ್ತಿದೆ’ ಎಂದು ಹೇಳಿದರು.

ಜಿಲ್ಲೆಯ ವಿವಿಧೆಡೆ ಹರಿಯುತ್ತಿರುವ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ದೂಧ್‌ಗಂಗಾ, ವೇದಗಂಗಾ, ಹಿರಣ್ಯಕೇಶಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದುವರೆಗೆ 148 ಗ್ರಾಮಗಳ 40,180 ಜನರು ಸ್ಥಳಾಂತರಗೊಂಡಿದ್ದಾರೆ. ನದಿ ಹರಿವಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು, ಇತರ ಜನವಸತಿ ಪ್ರದೇಶಗಳಲ್ಲೂ ನುಗ್ಗುವ ಅಪಾಯವಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು