ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ತವರೂರಲ್ಲಿ ಯೋಧರಿಗೆ ಆತ್ಮೀಯ ಸ್ವಾಗತ

ನಿವೃತ್ತರಾಗಿ ಮರಳಿದ 10 ಮಂದಿ
Last Updated 9 ಡಿಸೆಂಬರ್ 2020, 13:50 IST
ಅಕ್ಷರ ಗಾತ್ರ

ಮೂಡಲಗಿ: ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ತವರೂರಿಗೆ ಬಂದ ಶಿವಾಪುರ (ಹ) ಗ್ರಾಮದ 10 ಜನ ಯೋಧರನ್ನು ಗ್ರಾಮಸ್ಥರು ಭವ್ಯವಾಗಿ ಸ್ವಾಗತಿಸಿದರು.

ಮಹಿಳೆಯರು ಆರತಿ ಬೆಳಗಿ, ಹಣೆಗೆ ತಿಲಕ ಇಟ್ಟು ಬರಮಾಡಿಕೊಂಡರು. ಯೋಧರು ಬರುವ ದಾರಿಯುದ್ದಕ್ಕೂ ವಿವಿಧ ವಾದ್ಯ ಮೇಳಗಳು ವಾದನ, ಮೂಡಲಗಿಯ ಕರುನಾಡು ಸೈನಿಕ ತರಬೇತಿ ಕೇಂದ್ರದ ನೂರಕ್ಕೂ ಅಧಿಕ ಪ್ರಶಿಕ್ಷಣಾರ್ಥಿಗಳ ಪಥಸಂಚಲನ ಗಮನಸೆಳೆಯಿತು. ಯೋಧರಿಗೆ ಗೌರವ ಮತ್ತು ದೇಶಾಭಿಮಾನದ ಘೋಷಣೆಗಳು ಮೊಳಗಿದವು. ಗ್ರಾಮದ ಬಹುತೇಕರು ಈ ಸಂಭ್ರಮದ ಕ್ಷಣದಲ್ಲಿ ಭಾಗಿಯಾದರು. ದೇಶಾಭಿಮಾನವನ್ನೂ ಮೆರೆದರು.

‘ಗ್ರಾಮದಲ್ಲಿ ಇಂತಹ ಸಂಭ್ರಮದ ಸ್ವಾಗತ ಕಂಡು ಖುಷಿಯಾಗಿದೆ. ದೇಶ ಕಾಯುವ ಕಾಯಕ ಸಾರ್ಥಕ ಎನಿಸಿದೆ’ ಎಂದು ನಿವೃತ್ತ ಯೋಧರಾದ ಮಲ್ಲಪ್ಪ ಸಾಯನ್ನವರ ಮತ್ತು ಸಂಗಪ್ಪ ಕರಿಶೆಟ್ಟಿ ಹರ್ಷ ವ್ಯಕ್ತಪಡಿಸಿದರು.

ಎರಡು ವರ್ಷಗಳ ಹಿಂದೆ ಹುತಾತ್ಮರಾದ ವಿಠ್ಠಲ ಮೇತ್ರಿಯ ಪತ್ನಿ ಸುಜಾತಾ ಮೇತ್ರಿ ಹಾಗೂ ನಿವೃತ್ತ ಸೈನಿಕರಾದ ವಿಠ್ಠಲ ಮೇತ್ರಿ, ಮಲ್ಲಪ್ಪ ಹೊಸತೋಟ, ಮಹಾದೇವ ಸವದಿ, ಘೂಳಪ್ಪ ಕಂಬಾರ, ಬಸವರಾಜ ಗಿರೆಣ್ಣವರ, ಮಲ್ಲಪ್ಪ ಜಿ. ಬಿ.ಪಾಟೀಲ, ಸಂಗಪ್ಪ ಕರಿಶೆಟ್ಟಿ, ಮಲ್ಲಪ್ಪ ಸಾಯನ್ನವರ, ಚನ್ನಬಸಪ್ಪ ಪೂಜೇರಿ ಅವರನ್ನು ಪ್ರಮುಖ ಶಿವನಗೌಡ ಪಾಟೀಲ, ಮಾಜಿ ಸೈನಿಕರ ವೇದಿಕೆ, ಗ್ರಾಮ ಯುವ ಸಂಘಟನೆಗಳು ಸನ್ಮಾನಿಸಿದರು. ಊರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

50 ಯೋಧರು: ಐದು ಸಾವಿರ ಜನಸಂಖ್ಯೆ ಹೊಂದಿರುವ ಶಿವಾಪುರ ಗ್ರಾಮವು ಕೃಷಿಗೆ ಹೆಸರುವಾಸಿ. ಅದರೊಂದಿಗೆ ಅಲ್ಲಿನ ಯುವಕರು ಭಾರತೀಯ ಸೇನೆಗೆ ಸೇರುವ ಮೂಲಕ ಗ್ರಾಮವು ಗಮನಸೆಳೆದಿದೆ. 25 ವರ್ಷಗಳಲ್ಲಿ ಅಲ್ಲಿಂದ 50ಕ್ಕೂ ಅಧಿಕ ಯುವಕರು ಭಾರತೀಯ ಸೇನೆ ಸೇರಿದ್ದಾರೆ. ದೇಶ ಸೇವೆ ಮಾಡುಬೇಕು ಎನ್ನುವ ಹಂಬಲ, ಕುಟುಂಬದಲ್ಲಿನ ಬಡತನದ ಹಿನ್ನೆಲೆ ಅಥವಾ ಸಾಹಸ ಪ್ರವೃತ್ತಿಯ ಯುವಕರು ಸೇನೆ ಸೇರುವ ಕನಸು ತುಂಬಿಕೊಂಡವರಾಗಿದ್ದಾರೆ. ಹೀಗಾಗಿ ಪ್ರತಿ ವರ್ಷವೂ ಒಬ್ಬರು ಇಲ್ಲವೆ ಇಬ್ಬರು ಸೇನೆಗೆ ಆಯ್ಕೆ ಆಗುತ್ತಿದ್ದಾರೆ ಎನ್ನುತ್ತಾರೆ ಮಾಜಿ ಯೋಧರು.

ಪ್ರಮುಖರಾದ ಸತ್ಯಪ್ಪ ಜುಂಜರವಾಡ, ಸಿದ್ದಣ್ಣ ದುರದುಂಡಿ, ಕಲ್ಲಪ್ಪ ಸಾಯನ್ನವರ, ಕರುನಾಡ ಸೈನಿಕ ತರಬೇತಿ ಕೇಂದ್ರ ಅಧ್ಯಕ್ಷೆ ಸವಿತಾ ತುಕ್ಕನ್ನವರ, ರಾಜಿ ಸವದಿ, ಮಹಾದೇವ ಡಬ್ಬನವರ, ಮಹಾದೇವ ಗಿಡ್ಡನವರ, ಪ್ರಸಾದ ಹಿರೇಮಠ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT