ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಪರಿಹಾರ ತಲುಪದಿದ್ದರೆ ಅಧಿಕಾರಿ ಅಮಾನತು

ಕೊನೆಗೂ ಸಂತ್ರಸ್ತರ ಸಂಕಷ್ಟ ಆಲಿಸಿದ ಕಂದಾಯ ಸಚಿವ ಆರ್. ಅಶೋಕ್‌
Last Updated 28 ಅಕ್ಟೋಬರ್ 2019, 12:33 IST
ಅಕ್ಷರ ಗಾತ್ರ

ಬೆಳಗಾವಿ: ‘ಸಂತ್ರಸ್ತರು ಪರಿಹಾರದಿಂದ ವಂಚಿತವಾದರೆ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಮಳೆಯಿಂದ ಉಂಟಾದ ಹಾನಿಯನ್ನು ಭಾನುವಾರ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ಮನೆಗಳನ್ನು ಕಳೆದುಕೊಂಡಿರುವ ಯಾವುದೇ ಕುಟುಂಬವೂ ಸರ್ಕಾರ ನೀಡುವ ಪರಿಹಾರ ಮತ್ತು ಇತರೆ ಸೌಲಭ್ಯಗಳಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ತಾಕೀತು ಮಾಡಿದರು.

‘ಪ್ರತಿ ಸಂತ್ರಸ್ತ ಕುಟುಂಬಕ್ಕೂ ಪರಿಹಾರ ತಲುಪಬೇಕು ಎಂಬ ಉದ್ದೇಶದಿಂದ ಈಗಾಗಲೇ ಸಾಕಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ. ಮನೆಗಳು ಮತ್ತು ಬೆಳೆ ಹಾನಿ ಸಮೀಕ್ಷೆ ಮಾಡುವ ಅಧಿಕಾರಿಗಳು ಸರ್ಕಾರದ ಆಶಯ ಅರಿತು ಕೆಲಸ ಮಾಡಬೇಕು. ಒಂದು ವೇಳೆ ಅರ್ಹ ಕುಟುಂಬಗಳು ಪರಿಹಾರದಿಂದ ವಂಚಿತಗೊಂಡಿದ್ದರೆ ಅಂತಹ ಕುಟುಂಬಗಳನ್ನೂ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಅಂಬಡಗಟ್ಟಿಯಿಂದ ಪ್ರವಾಸ:ನೆರೆ ಹಾನಿ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಬಂದ ಸಚಿವರು, ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿರುವ ಹುತಾತ್ಮ ಯೋಧ ಶಶಿಧರ ಗುರುವೈನವರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲಾ ಪ್ರವಾಸ ಆರಂಭಿಸಿದರು.

ಮೊದಲು ಅಂಬಡಗಟ್ಟಿಯಲ್ಲಿ ಹಾನಿಗೊಳಗಾದ ಪಿ.ಎಂ.ಜಿ.ಎಸ್.ವೈ. ರಸ್ತೆ ವೀಕ್ಷಿಸಿದರು. ಅಂಬಡಗಟ್ಟಿ-ಬಚ್ಚನಕೆರೆ ನಡುವಿನ ಅಯ್ಯನಕೆರೆ ನೀರಿನಿಂದ ರಸ್ತೆ ಹಾಳಾಗಿರುವುದನ್ನು ಪರಿಶೀಲಿಸಿದರು. ಅಹವಾಲು ಸಲ್ಲಿಸಿದ ಗ್ರಾಮಸ್ಥರು, ಅಂಬಡಗಟ್ಟಿ-ಬಚ್ಚನಕೆರೆ ರಸ್ತೆ ನಿರ್ಮಿಸಿಕೊಡುವಂತೆ ಕೋರಿದರು. ಆದಷ್ಟು ಬೇಗನೇ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಎಂ.ಕೆ. ಹುಬ್ಬಳ್ಳಿ ಸಮೀಪದ ಗದ್ದಿ ಕೆರೆ, ಹಿರೇಬಾಗೇವಾಡಿಯಲ್ಲಿ ಹಾನಿಗೀಡಾದ ಮನೆ ಮತ್ತು ಬೆಳೆಗಳನ್ನು ಸಚಿವರು ಪರಿಶೀಲಿಸಿದರು. ಗದ್ದಿಕೆರೆ ತುಂಬಿ ಹರಿಯುತ್ತಿರುವುದರಿಂದ ತಾತ್ಕಾಲಿಕವಾಗಿ ಉಸುಕಿನ ಚೀಲಗಳನ್ನು ಹಾಕುವಂತೆ ಹಾಗೂ ನೀರು ಕಡಿಮೆಯಾದ ಬಳಿಕ ರಸ್ತೆ ನಿರ್ಮಿಸುವಂತೆ ಸೂಚನೆ ನೀಡಿದರು.

ಪರಿಹಾರ ಕೊಡಿ:ಕಾಕತಿ ಸಮೀಪದ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿ ಹಾಳಾಗಿರುವ ರಸ್ತೆ ಮತ್ತು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ವೀಕ್ಷಿಸಿದರು. ಬಳಿಕ ನಿಪ್ಪಾಣಿ ತಾಲ್ಲೂಕಿನ ಜತ್ರಾಟ ಗ್ರಾಮದಲ್ಲಿ ಹಾನಿಗೊಳಗಾದ ಮನೆಗಳು ಮತ್ತು ಬೆಳೆಯನ್ನು ಪರಿಶೀಲಿಸಿದರು. ರಂಜನಾ ರಮೇಶ ಪಾಟೀಲ ಅವರ ಮನೆ ಹಾಳಾಗಿರುವುದನ್ನು ನೋಡಿ ಮರುಕ ವ್ಯಕ್ತಪಡಿಸಿದರು.

‘ಕುಸಿದ ಮನೆಯು ಮೂವರು ಸೋದರರಿಗೆ ಸೇರಿರುವುದರಿಂದ ಮನೆ ನಿರ್ಮಾಣಕ್ಕೆ ನೀಡಲಾಗುವ ₹ 5 ಲಕ್ಷ ರೂಪಾಯಿ ಪರಿಹಾರವನ್ನು ಮೂವರಿಗೂ ಹಂಚಬೇಕು’ ಎಂದು ರಂಜನಾ ಪಾಟೀಲ ಸಚಿವರನ್ನು ಕೋರಿದರು. ಇದನ್ನು ಪರಿಶೀಲಿಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ, ತಮ್ಮ ಕ್ಷೇತ್ರದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ವಿವರಿಸಿದರು. ಮೂಲಸೌಕರ್ಯ ನಿರ್ಮಾಣ ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಕೋರಿದರು.

ಜತ್ರಾಟಕ್ಕೆ ಭೇಟಿ ನೀಡಿದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ವಿಧಾನಪರಿಷತ್ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಮುಖಂಡ ಸಂಜಯ ಪಾಟೀಲ ಇದ್ದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ನೀಡಿದರು.

ಉತ್ತರ ವಲಯ ಐಜಿಪಿ ಎಚ್.ಜಿ. ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ್ ಪ್ರವೀಣ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT