ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಪಘಾತ ಇಳಿಮುಖ; 3 ವರ್ಷಗಳಲ್ಲಿಯೇ ಕನಿಷ್ಠ

Last Updated 9 ಫೆಬ್ರುವರಿ 2019, 14:41 IST
ಅಕ್ಷರ ಗಾತ್ರ

ಬೆಳಗಾವಿ: ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪೊಲೀಸರು ಕೈಗೊಂಡ ಕ್ರಮಗಳಿಂದಾಗಿ 2018ರಲ್ಲಿ ವಾಹನ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ ಮೂರು ವರ್ಷಗಳ ಪೈಕಿ ಹೋಲಿಸಿ ನೋಡಿದಾಗ ಅಪಘಾತ ಸಂಖ್ಯೆ, ಸಾವಿಗೀಡಾದವರು ಹಾಗೂ ಗಾಯಗೊಂಡವರ ಸಂಖ್ಯೆ ಕಡಿಮೆಯಾಗಿದೆ.

2018ರ ಜನವರಿಯಿಂದ ಡಿಸೆಂಬರ್‌ ಅವಧಿಯಲ್ಲಿ 607 ಅಪಘಾತಗಳು ಸಂಭವಿಸಿವೆ. ಇದರಲ್ಲಿ 150 ಜನರು ಸಾವಿಗೀಡಾಗಿದ್ದರೆ, 791 ಜನರಿಗೆ ಗಾಯಗಳಾಗಿವೆ. ಇದರ ಹಿಂದಿನ ವರ್ಷದಲ್ಲಿ 682 ಅಪಘಾತಗಳು ಸಂಭವಿಸಿದ್ದವು. ಇದರಲ್ಲಿ 157 ಜನರು ಸಾವಿಗೀಡಾಗಿದ್ದರೆ, 913 ಜನರು ಗಾಯಗೊಂಡಿದ್ದರು. 2016ರಲ್ಲಿ 816 ಅಪಘಾತಗಳು ಸಂಭವಿಸಿದ್ದರೆ, 176 ಜನರು ಪ್ರಾಣ ಕಳೆದುಕೊಂಡಿದ್ದರು. 1,009 ಜನರು ಗಾಯಗೊಂಡಿದ್ದರು.

ಕಟ್ಟುನಿಟ್ಟಿನ ಕ್ರಮ: ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಯಿತು. ಮೇಲಿಂದ ಮೇಲೆ ವಿಶೇಷ ಅಭಿಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕ್ರಮಕೈಗೊಂಡರು. ಯಾವುದೇ ಮುಲಾಜಿಲ್ಲದೇ ದಂಡ ವಿಧಿಸಿದರು.

ಈ ರೀತಿ ಕ್ರಮಕೈಗೊಳ್ಳುವುದರಿಂದ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಲು ಆರಂಭಿಸಿದರು. ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲು ಆರಂಭಿಸಿದರು. ಹೆಲ್ಮೆಟ್‌ ಧರಿಸುವುದು, ಸೀಟ್‌ ಬೆಲ್ಟ್‌ ಧರಿಸುವುದು, ನಿಗದಿತ ವೇಗದ ಮಿತಿಯಲ್ಲಿಯೇ ವಾಹನ ಚಲಾಯಿಸಲು ಆರಂಭಿಸಿದರು. ಇವೆಲ್ಲ ಕ್ರಮಗಳಿಂದಾಗಿ ಅಪಘಾತಗಳು ಕಡಿಮೆಯಾದವು.

ಹೈವೇ ಪೆಟ್ರೋಲಿಂಗ್‌:ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರ ಮೇಲೆ ವಿಶೇಷ ಗಮನ ಹರಿಸಲು ಎರಡು ಹೈವೇ ಪೆಟ್ರೋಲಿಂಗ್‌ ವಾಹನಗಳು ನಿರಂತರವಾಗಿ ಗಸ್ತು ತಿರುಗುತ್ತವೆ. ಕಾಕತಿ ಹಾಗೂ ಹಿರೇಬಾಗೇವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ಈ ವಾಹನಗಳು, ಅಪಘಾತ ಸಂಭವಿಸಬಹುದಾದ ಸ್ಥಳಗಳಲ್ಲಿ ಹೆಚ್ಚು ಕಾರ್ಯನಿರ್ವಹಿಸುತ್ತಿವೆ.

ತಿರುವು, ಘಟ್ಟ ಪ್ರದೇಶದ ಇಳಿಜಾರು ಮುಂತಾದ ಸ್ಥಳಗಳಲ್ಲಿ ಈ ವಾಹನಗಳು, ಸಾರ್ವಜನಿಕರ ವಾಹನಗಳ ಮೇಲೆ ನಿಗಾ ವಹಿಸಿರುತ್ತವೆ. ಬೇಕಾಬಿಟ್ಟಿ ಓಡಿಸುವ ವಾಹನಗಳು, ಹೆದ್ದಾರಿ ಪಕ್ಕದಲ್ಲಿ ನಿಲುಗಡೆ ಮಾಡಿದ್ದ ವಾಹನಗಳ ವಿರುದ್ಧ ಕ್ರಮಕೈಗೊಳ್ಳುತ್ತಿವೆ. ಅಪಘಾತಗಳು ಸಂಭವಿಸಿದರೆ ತಕ್ಷಣ ಸ್ಥಳಕ್ಕೆ ತೆರಳಿ, ಅಗತ್ಯ ಕ್ರಮಕೈಗೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT