ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿಗೆ ವಿದ್ಯುತ್ ಕಂಬಗಳೇ ಅಡ್ಡಿ

ಲೋಕೋಪಯೋಗಿ ಇಲಾಖೆ– ಹೆಸ್ಕಾಂ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆ
Last Updated 31 ಜನವರಿ 2023, 5:57 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಹೊರವಲಯದ ಬೈಪಾಸ್ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಈಗ ವಿದ್ಯುತ್ ಕಂಬಗಳೇ ಅಡ್ಡಿಯಾಗಿವೆ. ಎರಡು ಇಲಾಖೆಗಳ ಅಧಿಕಾರಿಗಳ ನಡುವಿನ ತಿಕ್ಕಾಟದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಅಚ್ಚರಿಯೆಂದರೆ, ವಿದ್ಯುತ್‌ ಕಂಬಗಳು ರಸ್ತೆ ಮಧ್ಯದಲ್ಲೇ ಬರುತ್ತವೆ ಎಂದು ಗೊತ್ತಿದ್ದರೂ ರಸ್ತೆ ಸುಧಾರಣಾ ಕಾರ್ಯ ಶುರು ಮಾಡಲಾಗಿದೆ.

‘ತಂದೆ– ತಾಯಿ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಗಾದೆ ಮಾತು ಈಗ ಪಟ್ಟಣದ ಜನರಿಗೆ ಅನ್ವಯಿಸುತ್ತಿದೆ.

ಎಂ.ಕೆ.ಹುಬ್ಬಳ್ಳಿಯ ಬೈಪಾಸ್ ರಸ್ತೆ ಹಲವು ವರ್ಷಗಳಿಂದ ಹಾಳಾಗಿ, ಸಂಚಾರ ಸಮಸ್ಯೆ ಎದುರಾಗಿತ್ತು. ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕ ಮಹಾಂತೇಶ ದೊಡಗೌಡರ ಅವರು ₹1.75 ಕೋಟಿ ಅನುದಾನದಲ್ಲಿ ಮಂಜೂರು ಮಾಡಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಿದ್ದಾರೆ.

ಮೊದಲಿದ್ದ ರಸ್ತೆಗಿಂತ ಒಂದಿಷ್ಟು ವಿಸ್ತಿರಿಸಿ, ನೀರು ಸರಾಗವಾಗಿ ಹರಿಯಲು ಅನುಕೂಲವಾಗುವ ದೃಷ್ಟಿಯಿಂದ ರಸ್ತೆಯ ಎರಡೂ ಬದಿಯಲ್ಲಿ ಸಿಮೆಂಟ್‌ ಚರಂಡಿ ನಿರ್ಮಿಸಲಾಗಿದೆ. ಇನ್ನುಳಿದ ಅಭಿವೃದ್ಧಿ ಕಾರ್ಯವು ಪ್ರಗತಿಯಲ್ಲಿದೆ.

ಆದರೆ, ರಸ್ತೆಯ ಒಂದು ಬದಿಯಲಿದ್ದ ನಾಲ್ಕು ವಿದ್ಯುತ್ ಕಂಬಗಳು ಚರಂಡಿ ನಿರ್ಮಾಣದಿಂದ ರಸ್ತೆಯ ನಡುವೆ ನಿಂತಿವೆ. ಹಾಗೇಯೇ ಕಾಮಗಾರಿ ಮುಂದುವರಿಸಲಾಗಿದೆ. ವೇಗವಾಗಿ ಬರುವ ವಾಹನಗಳು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಇದರ ಕನಿಷ್ಠ ಕಾಳಜಿಯೂ ಇಲ್ಲದೇ ಕೆಲಸ ಮುಂದುವರಿಸಿದ್ದು, ಜನರನ್ನು ಕೆರಳಿಸಿದೆ.

ಉಭಯ ಇಲಾಖೆ ಅಧಿಕಾರಿಗಳ ಸಮನ್ವಯ ಕೊರತೆ ಹಾಗೂ ತಿಕ್ಕಾಟದ ನಡುವೆ ಪ್ರಯಾಣಿಕರು ಪ್ರಾಯಾಸ ಪಡುವಂತಾಗಿದೆ. ನಡುರಸ್ತೆಯಲ್ಲಿ ವಿದ್ಯುತ್ ಕಂಬ ಇಟ್ಟು ಡಾಂಬರೀಕರಣ ಮಾಡಿದರೆ, ಅಪಾಯ ಸಂಭವಿಸುವ ಜತೆಗೆ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯ ಉಪಯೋಗ ಇಲ್ಲದಂತಾಗುತ್ತದೆ. ತಕ್ಷಣವೇ ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು. ನಂತರ ರಸ್ತೆಗೆ ಡಾಂಬರೀಕರಣ ಮಾಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಇವರೇನಂತಾರೆ...

ರಸ್ತೆಗೆ ಅಡಚಣೆಯುಂಟು ಮಾಡುತ್ತಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಂತೆ ಈಗಾಗಲೇ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದೇವೆ. ನೋಟಿಸ್ ಸಹ ನೀಡಿದ್ದೇವೆ. ಒಂದು ವಿದ್ಯುತ್ ಕಂಬ ಸ್ಥಳಾಂತರಿಸಿ, ಉಳಿದ ಕಂಬಗಳ ಸ್ಥಳಾಂತರ ಮಾಡಿಲ್ಲ. ರಸ್ತೆ ಪಕ್ಕ ವಿದ್ಯುತ್ ಕಂಬಗಳನ್ನು ನೆಡುವಾಗ ನಮ್ಮಿಂದ ಅವರು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿಲ್ಲ.

–ಪಿ.ಆರ್.ಹುಲಜಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

ಈಗಾಗಲೇ ಸರ್ಕಲ್‍ನಲ್ಲಿದ್ದ ವಿದ್ಯುತ್ ಕಂಬವೊಂದನ್ನು ಸ್ಥಳಾಂತರಿಸಿಕೊಟ್ಟಿದ್ದೇವೆ. ಇನ್ನುಳಿದ ಕಂಬಗಳ ಸ್ಥಳಾಂತರಕ್ಕೆ ಸಂಬಂಧಿಸಿದ ಇಲಾಖೆ ಅಥವಾ ಗುತ್ತಿಗೆದಾರ ಸ್ಥಳಾಂತರದ ವೆಚ್ಚ ಭರಿಸಬೇಕು. ಆಗ ಮಾತ್ರ ನಮ್ಮಿಂದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಸಾಧ್ಯ.

–ಎಂ.ಕೆ.ಹಿರೇಮಠ, ಹೆಸ್ಕಾಂ ಕಿತ್ತೂರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸರ್ಕಾರ ರಸ್ತೆ ಅಭಿವೃದ್ಧಿ ಕಾರ್ಯಕೈಗೊಳ್ಳುತ್ತಿದೆ. ಅದರೆ, ವಿದ್ಯುತ್ ಕಂಬಗಳ ಸ್ಥಳಾಂತರಿಸದೇ ಕಾಮಗಾರಿ ನಡೆಸಿದರೇ ಉಪಯೋಗವಿಲ್ಲ. ವಿದ್ಯುತ್ ಕಂಬಕ್ಕೆ ವಾಹನಗಳು ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದರೆ ಯಾರು ಹೊಣೆ?

–ವಿಶ್ವನಾಥ, ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT