ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತರಿಂದ ರಸ್ತೆ ದುರಸ್ತಿ!

Last Updated 5 ಅಕ್ಟೋಬರ್ 2021, 14:19 IST
ಅಕ್ಷರ ಗಾತ್ರ

ಬೆಳಗಾವಿ: ‘ಭಾರತೀಯ ಜನತಾ ಪಕ್ಷ ಗ್ರಾಮೀಣ ಮಂಡಳದಿಂದ ನಡೆಸುತ್ತಿರುವ ಸೇವೆಯೆ ಸಮರ್ಪಣೆ ಅಭಿಯಾನದಲ್ಲಿ ತಾಲ್ಲೂಕಿನ ಬೆಳಗುಂದಿಯಲ್ಲಿ 4 ಕಿ.ಮೀ. ರಸ್ತೆ ಮತ್ತು ಬೆಕ್ಕಿನಕೆರೆ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ’ ಎಂದು ಮಂಡಳದ ಅಧ್ಯಕ್ಷ ಧನಂಜಯ ಜಾಧವ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅನೇಕ ರಸ್ತೆಗಳು ಹದಗೆಟ್ಟಿವೆ. ಹೀಗಾಗಿ ಶಾಸಕರ ಬಗ್ಗೆ ಜನರಲ್ಲಿ ಭಾರಿ ಅಸಮಾಧಾನವಿದೆ’ ಎಂದು ದೂರಿದ್ದಾರೆ.

‘ಮಂಡಳಿದಿಂದ ರಸ್ತೆ ದುರಸ್ತಿಯಿಂದ ಹಿಡಿದು ಆರೋಗ್ಯ ತಪಾಸಣೆ, ರಕ್ತದಾನ, ಸ್ವಚ್ಛತೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದಿದ್ದಾರೆ.

‘ಮುಖಂಡರಾದ ಮನೋಹರ ಕಡೋಲ್ಕರ, ಪಂಕಜ್ ಘಡಿ, ಲಿಂಗರಾಜ ಹಿರೇಮಠ, ಗಣಪತರಾವ ದೇಸಾಯಿ, ಮಲ್ಲಪ ಕಾಂಬಳೆ, ನಿತಿನ ದೇಸಾಯಿ, ದಾದ ಗಾವಡೆ, ನೇತಾಜಿ ಬೆನಕೆ, ದಯಾನಂದ ಭೋಗನ ಪಾಲ್ಗೊಂಡಿದ್ದರು’ ಎಂದು ತಿಳಿಸಿದ್ದಾರೆ.

ಪಾಟೀಲ ತಿರುಗೇಟು:

‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಹಣ ಬಿಡುಗಡೆ ಮಾಡದ ಬಿಜೆಪಿ ಸರ್ಕಾರದ ವಿರುದ್ಧ ಆ ಪಕ್ಷದ ಕಾರ್ಯಕರ್ತರೆ ಪ್ರತಿಭಟನೆ ನಡೆಸುತ್ತಿರುವುದು ವಿಪರ್ಯಾಸವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಗ್ರಾಮೀಣ ಕ್ಷೇತ್ರದ ರಸ್ತೆಗಳ ದುರಸ್ತಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬೇರೆ ಬೇರೆ ಮೂಲಗಳಿಂದ ಅನುದಾನ ತಂದು ಅಭಿವೃದ್ಧಿ ಮಾಡಿಸಿದ್ದಾರೆ. 4 ರಸ್ತೆಗಳ ಕೆಲಸ ಮಾತ್ರ ಅನುದಾನ ಕೊರತೆಯಿಂದಾಗಿ ನಡೆದಿಲ್ಲ. ಇದಕ್ಕೂ ಅನುದಾನ ತರಲು ಯತ್ನಿಸುತ್ತಿದ್ದಾರೆ. ಹೀಗಿರುವಾಗ, ಬಿಜೆಪಿ ಕಾರ್ಯಕರ್ತರು ಬ್ಯಾನರ್ ಹಾಕುವುದು, ಕಲ್ಲು, ಮಣ್ಣು ತಂದು ಸುರಿಯುವ ನಾಟಕದ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮದೇ ಕಾರ್ಯಕರ್ತರ ಪ್ರತಿಭಟನೆಯಿಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಶೀಘ್ರ ಅನುದಾನ ಬಿಡುಗಡೆ ಮಾಡಲಿ’ ಎಂದಿದ್ದಾರೆ.

‘ಹಾಳಾದ ರಸ್ತೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಬಳಿ ಸಾಕಷ್ಟು ಬಾರಿ ಶಾಸಕರು ವಿನಂತಿಸಿದ್ದಾರೆ. ಆದರೆ, ಅವರಿಂದ ಸ್ಪಂದನೆ ಸಿಕ್ಕಿಲ್ಲ. ಈಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮೂಲಕ ಸಚಿವರ ಮತ್ತು ಸರ್ಕಾರದ ವೈಫಲ್ಯವನ್ನು ಜನರಿಗೆ ತೋರಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT