ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿಯಿಂದ 2020–21ನೇ ಸಾಲಿನಲ್ಲಿ ₹ 230 ಕೋಟಿ ಸಾಲ

ಪಿಎಫ್‌ ವಂತಿಗೆಗೆ ಟಿಟಿಎಂಸಿ ಅಡವು
Last Updated 15 ಡಿಸೆಂಬರ್ 2021, 22:28 IST
ಅಕ್ಷರ ಗಾತ್ರ

ಬೆಳಗಾವಿ: ಭವಿಷ್ಯ ನಿಧಿಯ ವಂತಿಗೆ ಪಾವತಿಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಶಾಂತಿನಗರದ ಟಿಟಿಎಂಸಿಯನ್ನು ಅಡಮಾನಕ್ಕೆ ಇಟ್ಟು 2019–20ನೇ ಸಾಲಿನಲ್ಲಿ ₹160 ಕೋಟಿ ಹಾಗೂ 2020–21ನೇ ಸಾಲಿನಲ್ಲಿ ₹230 ಕೋಟಿ ಸಾಲ ಪಡೆದಿದೆ.

ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಶರತ್‌ ಬಚ್ಚೇಗೌಡ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು ಈ ವಿಷಯ ತಿಳಿಸಿದರು. ಭವಿಷ್ಯ ನಿಧಿ ವಂತಿಗೆ ಪಾವತಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಕಲಬುರಗಿ ಕೇಂದ್ರ ಬಸ್‌ ನಿಲ್ದಾಣದ 6 ಎಕರೆ 28 ಗುಂಟೆ ನಿವೇಶನವನ್ನು ಅಡಮಾನ ಇಡಲಾಗಿದೆ ಎಂದೂ ಹೇಳಿದರು.

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಹಾಗೂ ಸಂಪನ್ಮೂಲ ಕ್ರೋಡೀಕರಣಗಳ ಅಧ್ಯಯನ ನಡೆಸಿ ವರದಿ ನೀಡಲು ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದೂ ತಿಳಿಸಿದರು.

ಶರತ್‌ ಬಚ್ಚೇಗೌಡ, ’ಟೋಲ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಇದರಿಂದ ಪ್ರತಿ ಪ್ರಯಾಣಿಕರ ಮೇಲೆ ₹3 ಹೊರೆ ಬೀಳುತ್ತಿದೆ. ಈ ಬಸ್‌ ಗಳಿಂದ ಶುಲ್ಕ ಸಂಗ್ರಹ ನಿಲ್ಲಿಸಬೇಕು‘ಎಂದು ಆಗ್ರಹಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಶ್ರೀರಾಮುಲು ಭರವಸೆ ನೀಡಿದರು.

ಹಳ್ಳಿಗಳಿಗೆ ಬಸ್‌ ಬರುತ್ತಿಲ್ಲ: ಲಾಕ್‌ಡೌನ್‌ ತೆರವಾದ ನಂತರ ಶಾಲಾ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ಆರಂಭಿಸಿವೆ. ಆದರೆ, ಗ್ರಾಮೀಣ ಭಾಗಕ್ಕೆ ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಓಡಾಟ ಆರಂಭಿಸದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗಿದೆ ಎಂದು ಸದಸ್ಯರಾದ ಎಚ್‌.ಡಿ.ರಂಗನಾಥ್‌, ಅಂಜಲಿ ನಿಂಬಾಳ್ಕರ್‌, ಬಸನಗೌಡ ದದ್ದಲ್‌, ಟಿ.ಡಿ.ರಾಜೇಗೌಡ, ನಾರಾಯಣಸ್ವಾಮಿ ಸೇರಿ ಹಲವು ಸದಸ್ಯರು ಗಮನಸೆಳೆದರು.

ಗ್ರಾಮೀಣ ಪ್ರದೇಶಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಒತ್ತಡಕ್ಕೆ ಅನುಗುಣವಾಗಿ ಕೋವಿಡ್‌ ಪೂರ್ವದಲ್ಲಿ ಇದ್ದಂತೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಬೇಡಿಕೆಗೆ ಅನುಗುಣವಾಗಿ ಬಸ್‌ಗಳು ಬರುತ್ತಿಲ್ಲ‘ ಎಂದು ಸದಸ್ಯರು ದೂರಿದರು. ‘ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ಸಾರಿಗೆ ನಿಗಮಗಳ ವರಮಾನ
ವರ್ಷ: ವರಮಾನ (₹ಕೋಟಿಗಳಲ್ಲಿ)
2018–19: 9,835
2019–20: 9,703
2020–21: 6,021
2021–22: 4,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT