ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ; ಮೂರು ಸುತ್ತಿನ ನಂತರವೂ 695 ಸೀಟು ಖಾಲಿ

Last Updated 4 ಜುಲೈ 2018, 14:22 IST
ಅಕ್ಷರ ಗಾತ್ರ

ಬೆಳಗಾವಿ:ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಒಟ್ಟು 432 ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆರ್‌ಟಿಇ ಅಡಿ ಹಂಚಿಕೆಯಾಗಿದ್ದ 4,105 ಸೀಟುಗಳ ಪೈಕಿ 3,410 ಸೀಟುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಮೂರು ಸುತ್ತಿನಲ್ಲಿ ಸೀಟು ಹಂಚಿಕೆ ಮಾಡಿದ ನಂತರ 695 ಸ್ಥಾನಗಳು ಬಾಕಿ ಉಳಿದುಕೊಂಡಿವೆ.

ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿದ್ದ 3,022 ಸೀಟುಗಳ ಪೈಕಿ 2,634 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಎರಡನೇ ಸುತ್ತಿನಲ್ಲಿ 336 ಸೀಟುಗಳ ಪೈಕಿ 200 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡರು. ಅಂತಿಮವಾಗಿ ಮೂರನೇ ಸುತ್ತಿನಲ್ಲಿ ಹಂಚಿಕೆಯಾಗಿದ್ದ 747 ಸೀಟುಗಳ ಪೈಕಿ 576 ವಿದ್ಯಾರ್ಥಿಗಳು ದಾಖಲಾತಿ ಮಾಡಿಕೊಂಡಿದ್ದಾರೆ.

ಏಳು ಶೈಕ್ಷಣಿಕ ವಲಯಗಳನ್ನು ಬೆಳಗಾವಿ ಶೈಕ್ಷಣಿಕ ಜಿಲ್ಲೆ ಹೊಂದಿದೆ. ಇವುಗಳ ಪೈಕಿ ಬೆಳಗಾವಿ ನಗರದಲ್ಲಿ ಅತಿ ಹೆಚ್ಚು 1,227 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇಲ್ಲಿ 1,641 ಸೀಟುಗಳು ಹಂಚಿಕೆಯಾಗಿದ್ದವು. ನಗರದಲ್ಲಿ ಹಲವು ಪ್ರತಿಷ್ಠಿತ ಶಾಲೆಗಳಿದ್ದು, ಅಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಅತಿ ಕಡಿಮೆ ಎಂದರೆ ಕಿತ್ತೂರಿನಲ್ಲಿ 218 ಸೀಟುಗಳ ಪೈಕಿ 200 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಏನಿದು ಆರ್‌ಟಿಇ: ಖಾಸಗಿ ಶಾಲೆಗಳಲ್ಲೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ 2010ರಲ್ಲಿ ಕೇಂದ್ರ ಸರ್ಕಾರವು ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದರ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಆಡಳಿತ ಮಂಡಳಿಗಳು ನಡೆಸುವ ಶಾಲೆಗಳನ್ನು ಹೊರತುಪಡಿಸಿ ಇತರ ಎಲ್ಲ ಖಾಸಗಿ ಶಾಲೆಗಳು ಸೇರಿಕೊಂಡಿವೆ.

ಪ್ರತಿ ಶಿಕ್ಷಣ ಸಂಸ್ಥೆಯ ಆರಂಭಿಕ ತರಗತಿಗೆ (ಎಲ್‌ಕೆಜಿ ಅಥವಾ 1ನೇ ತರಗತಿ) ಆರ್‌ಟಿಇ ಅಡಿ ಪ್ರವೇಶ ನೀಡಲಾಗುತ್ತದೆ. ಆ ತರಗತಿಯ ದಾಖಲಾತಿ ಸಂಖ್ಯೆಯ ಶೇ 25ರಷ್ಟು ಸೀಟುಗಳನ್ನು ಆರ್‌ಟಿಇ ಅಡಿ ಕಾಯ್ದಿರಿಸಲಾಗುತ್ತದೆ. ಬೆಂಗಳೂರಿನ ಶಿಕ್ಷಣ ಇಲಾಖೆಯ ಕಚೇರಿಯಿಂದ ಆನ್‌ಲೈನ್‌ ವ್ಯವಸ್ಥೆಯಡಿ ಆರ್‌ಟಿಇಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಇದರಡಿ ಆಯ್ಕೆಯಾಗುವ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಈ ಮೊದಲು ಕೇವಲ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಮಾತ್ರ ಆರ್‌ಟಿಇ ಇತ್ತು. ಪ್ರಸಕ್ತ ವರ್ಷದಿಂದ ಅನುದಾನಿತ ಶಾಲೆಗಳಲ್ಲೂ ಆರಂಭಿಸಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ಸ್ವಾಮ್ಯದ ಕೇಂದ್ರೀಯ ವಿದ್ಯಾಲಯ ಹಾಗೂ ನವೋದಯ ವಿದ್ಯಾಲಯಗಳಲ್ಲೂ ಆರ್‌ಟಿಇ ಜಾರಿಯಲ್ಲಿದೆ.

ಹೊಸ ನಿಯಮದಿಂದಾಗಿ ಜಿಲ್ಲೆಯ 40 ಅನುದಾನಿತ ಶಾಲೆಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ. 392 ಅನುದಾನ ರಹಿತ ಶಾಲೆಗಳಿದ್ದು, ಒಟ್ಟು 432 ಶಾಲೆಗಳಲ್ಲಿ ಆರ್‌ಟಿಇ ಜಾರಿಯಲ್ಲಿದೆ. ಸುಮಾರು 4,370 ಸೀಟುಗಳು ಲಭ್ಯ ಇವೆ. ಇವುಗಳಿಗಾಗಿ ಸುಮಾರು 6,337 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಖಾಲಿ ಸೀಟಿಗೆ ಕಾರಣ:

ಜಿಲ್ಲೆಯಲ್ಲಿ ಒಟ್ಟು 4,370 ಸೀಟುಗಳಿದ್ದರೂ 4,105 ಸೀಟುಗಳಿಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ 3,410 ಸೀಟುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮೀಸಲು ನಿಗದಿಯಾದ ಜಾತಿಯ ವಿದ್ಯಾರ್ಥಿಗಳು ಲಭ್ಯವಾಗದ ಕಾರಣ, ಅಥವಾ ಬೇರೆ ಬೇರೆ ಶಾಲೆಗಳಲ್ಲಿ ಈಗಾಗಲೇ ಪ್ರವೇಶ ಪಡೆದಿರುವ ಕಾರಣ ಕೆಲವು ಸೀಟುಗಳು ಖಾಲಿ ಉಳಿದಿವೆ ಎಂದು ಶಿಕ್ಷಣಾಧಿಕಾರಿ, ಆರ್‌ಟಿಇ ನೋಡಲ್‌ ಅಧಿಕಾರಿ ಎ.ಎನ್‌. ಪ್ಯಾಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವು ಸಂದರ್ಭಗಳಲ್ಲಿ ಪೋಷಕರು ಮನೆ ಬದಲಾಯಿಸಿ, ಬೇರೆಡೆ ವಾಸ್ತವ್ಯ ಬದಲಾಯಿಸಿದ್ದರಿಂದಲೂ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗಿರಲಿಕ್ಕಿಲ್ಲ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT