ಗುರುವಾರ , ಮೇ 13, 2021
26 °C
ಶಾಲಾ– ಕಾಲೇಜು, ಸರ್ಕಾರಿ ಕಚೇರಿಗಳ ಬಳಿಯೇ ತಂಬಾಕು ಪದಾರ್ಥ ಮಾರಾಟ

ಬೆಳಗಾವಿ: ‘ಗೋಡೆ ಬರಹ’ದಲ್ಲಷ್ಟೇ ಉಳಿದ ನಿಯಮ

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳ ಆವರಣದಿಂದ 100 ಮೀಟರ್‌ ಅಂತರದಲ್ಲಿ ಸಿಗರೇಟು, ಗುಟ್ಕಾ, ಬೀಡಿ ಮೊದಲಾದ ತಂಬಾಕು  ಪದಾರ್ಥಗಳನ್ನು ಮಾರುವಂತಿಲ್ಲ ಎಂಬ ನಿಯಮವು ಜಿಲ್ಲೆಯಾದ್ಯಂತ ‘ಗೋಡೆಗಳ ಬರಹ’ಕ್ಕಷ್ಟೆ ಸೀಮಿತವಾಗಿದೆ.

ಅಧಿಕಾರಿಗಳು ಯಾವಾಗಲೋ ಒಮ್ಮೆ ‘ಶಾಸ್ತ್ರ’ಕ್ಕೆ ಎನ್ನುವಂತೆ ನಡೆಸುವ ದಾಳಿಗಳಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಪರಿಣಾಮ, ರಾಜಾರೋಷವಾಗಿ ತಂಬಾಕು ಪದಾರ್ಥಗಳನ್ನು ಮಾರುವುದು ಸಾಮಾನ್ಯ ಎನ್ನುವಂತಾಗಿ ಹೋಗಿದೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಇದೇ ಪರಿಸ್ಥಿತಿ ಇದೆ. ಪುಂಡ–ಪೋಕರಿಗಳು ಶಾಲೆ–ಕಾಲೇಜು ಅಥವಾ ಸರ್ಕಾರಿ ಕಚೇರಿಗಳ ಆವರಣದಲ್ಲೇ (ರಜೆ ಇದ್ದಾಗ) ತಂಬಾಕು ಪದಾರ್ಥಗಳನ್ನು ಸೇವಿಸುವ ಚಟುವಟಿಕೆಗಳೂ ಅಲ್ಲಲ್ಲಿ ಕಂಡುಬರುತ್ತದೆ. ಕಡಿವಾಣ ಹಾಕಬೇಕಾದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಕಾಂಪೌಂಡ್‌ನಲ್ಲಿ ಹಲವು ಸರ್ಕಾರಿ ಕಚೇರಿಗಳಿವೆ. ಅವುಗಳ ಬಳಿಯೇ ತಂಬಾಕು ಪದಾರ್ಥಗಳನ್ನು ಮಾರಲಾಗುತ್ತುದೆ. ಹಲವು ಶಾಲಾ–ಕಾಲೇಜುಗಳ ಬಳಿಯೂ ಇದೇ ಸ್ಥಿತಿ ಇದೆ.

ನೆಪ ಮಾತ್ರಕ್ಕೆ ಇದೆ
ಸವದತ್ತಿ:
ತಾಲ್ಲೂಕಿನಲ್ಲಿ ನಿಯಮ ನೆಪ ಮಾತ್ರಕ್ಕೆ ಇದೆ. ಸರ್ಕಾರಿ ಶಾಲೆಗಳು ಸೇರಿದಂತೆ ಬಹುತೇಕ ಶಾಲಾ- ಕಾಲೇಜುಗಳ ಆವರಣದಲ್ಲೇ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ಎಗ್ಗಿಲ್ಲದೆ ನಡೆಯುತ್ತಿದೆ. ಪುರಸಭೆ ಹಾಗೂ ಇತರ ಅಧಿಕಾರಿಗಳು ಅಂಗಡಿಕಾರರಿಗೆ ಕೆಲವು ಬಾರಿ ದಂಡ ವಿಧಿಸಿ ಬಳಿಕ ಮೌನ ವಹಿಸುತ್ತಿದ್ದಾರೆ.

ಇಲ್ಲಿ ಅನ್ವಯವಾಗುತ್ತಿಲ್ಲ
ಅಥಣಿ:
ಇಲ್ಲೂ ಕಾನೂನು ಪಾಲನೆಯಾಗುತ್ತಿಲ್ಲ. ಶಾಲೆ–ಕಾಲೇಜು ಎದುರು ತಂಬಾಕು, ಗುಟ್ಕಾ ಮಾರುವ ದೃಶ್ಯಗಳು ಸಾಮಾನ್ಯವಾಗಿವೆ. ಇದರಿಂದ ಮಕ್ಕಳ‌  ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಶಿಕ್ಷಣ ಇಲಾಖೆಗೆ ದೂರು ನೀಡಿದರೂ ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ ಎನ್ನುವ ದೂರು ಪೋಷಕರದಾಗಿದೆ.

ಕಚೇರಿಗಳ ಬಳಿಯೇ
ಚಿಕ್ಕೋಡಿ:
ಪಟ್ಟಣದ ಬಹುತೇಕ ಶಾಲೆ– ಕಾಲೇಜುಗಳ ಪರಿಸರದ ನೂರು ಮೀಟರ್‌ ಅಂತರದೊಳಗೆ ತಂಬಾಕು ಉತ್ಪನ್ನಗಳ ಮಾರಾಟ ಕಂಡುಬರುತ್ತಿಲ್ಲ. ಆದರೆ, ಸರ್ಕಾರಿ ಕಚೇರಿಗಳ ಬಳಿಯೇ ಅಥವಾ ಕಾಂಪೌಂಡ್‌ಗೆ ಹೊಂದಿಕೊಂಡಂತೆಯೇ ಪಾನ್‌ ಬಿಡಾ ಅಂಗಡಿಗಳಲ್ಲಿ ತಂಬಾಕು ಚೀಟಿ, ಸಿಗರೇಟು, ವಿವಿಧ ಕಂಪನಿಗಳ ಗುಟ್ಕಾಗಳನ್ನು ಮಾರಾವುದು ಸಾಮಾನ್ಯವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಕಾಲೇಜುಗಳ ಸಮೀಪದಲ್ಲಿಯೇ ಮಾರುವುದು ಕಂಡುಬರುತ್ತದೆ. ಹೆಸ್ಕಾಂ ಕಚೇರಿ ಹಾಗೂ ಮಿನಿ ವಿಧಾನಸೌಧದ ಎದುರಿನ ಎನ್.ಎಂ. ರಸ್ತೆಯ ಬದಿಯಲ್ಲಿ ಅಂಗಡಿಗಳಲ್ಲಿ ಮಾರುತ್ತಾರೆ. ಅಧಿಕಾರಿಗಳು ಕಂಡರೂ ಕಾಣದಂತಿದ್ದಾರೆ!

ನಿರ್ಬಂಧದಿಂದ ಪ್ರಯೋಜನವಾಗಿಲ್ಲ

ರಾಮದುರ್ಗ: ಮಕ್ಕಳು ದುಶ್ಚಟದಿಂದ ದೂರ ಉಳಿಯಬೇಕೆಂಬ ಉದ್ದೇಶದಿಂದ ನಿರ್ಬಂಧ ಹೇರಲಾಗಿದ್ದರೂ ಶಾಲೆಗಳ ಹೊರಭಾಗದಲ್ಲಿಯೇ ಪಾನ್‌ ಬೀಡಾ ಅಂಗಡಿಗಳು ತಲೆ ಎತ್ತಿವೆ. ಇಂತಹ ಅಕ್ರಮಕ್ಕೆ ಬ್ರೇಕ್ ಹಾಕಲು ಪುರಸಭೆ ಅಥವಾ ಗ್ರಾಮ ಪಂಚಾಯ್ತಿಗಳು ಮುಂದಾಗುತ್ತಿಲ್ಲ. ಕಾಲೇಜು ಆವರಣದ ಕಾಂಪೌಂಡ್‌ ಸಮೀಪವೇ ಧೂಮಪಾನದಂತಹ ಚಟುವಟಿಕೆಗಳು ನಡೆಯುತ್ತಿರುವುದು, ತಮ್ಮ ಮಕ್ಕಳು ಆ ಚಟಕ್ಕೆ ಬಲಿ ಆಗುತ್ತಿರುವುದು ಪಾಲಕರಿಗೆ ಚಿಂತೆಯಾಗಿದೆ. ಮಿನಿ ವಿಧಾನಸೌಧದ ಸುತ್ತಲೂ ಇರುವ ಗುಟ್ಕಾ ಅಂಗಡಿಗಳಲ್ಲಿ ಖರೀದಿಸುವ ಕೆಲವರು, ಸರ್ಕಾರಿ ಕಚೇರಿಗಳ ಗೋಡೆಗಳಿಗೂ ಉಗಿದು ಗಲೀಜು ಮಾಡುತ್ತಿದ್ದಾರೆ.

ಯಾವುದೇ ಕ್ರಮ ಜರುಗಿಸುತ್ತಿಲ್ಲ
ಖಾನಾಪುರ:
ಪಟ್ಟಣದ ತಾರಾರಾಣಿ ಪ್ರೌಢಶಾಲೆ, ಶಾಸಕರ ಮಾದರಿ ಕನ್ನಡ ಶಾಲೆ, ಹಿರಿಯ ಪ್ರಾಥಮಿಕ ಮರಾಠಿ ಶಾಲೆ, ಹಿರಿಯ ಪ್ರಾಥಮಿಕ ಉರ್ದು ಶಾಲೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಅಂಗಡಿಗಳಿವೆ. ಶಿಕ್ಷಣ ಸಂಸ್ಥೆಯ 100 ಮೀಟರ್ ಅಂತರದಲ್ಲೇ ಇದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಜರುಗಿಸಿಲ್ಲ.

ಕಾಗದದಲ್ಲೇ ಉಳಿದಿದೆ
ಗೋಕಾಕ:
ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಶಾಲೆ, ಕಾಲೇಜು ಸರ್ಕಾರಿ ಕಚೇರಿಗಳ ಬಳಿ ಮಾರಬಾರದು ಎಂಬ ನಿಯಮ ಇಲ್ಲಿ ಕಾಗದಲ್ಲಷ್ಟೆ ಉಳಿದಿದೆ. ಬಹುತೇಕ ಸರ್ಕಾರಿ ಕಚೇರಿಗಳ ಆವರಣದಲ್ಲಿ ಇಲ್ಲವೇ ಆವರಣಕ್ಕೆ ಹೊಂದಿಕೊಂಡಂತೆಯೇ ಇಂತಹ ಅಂಗಡಿಗಳು ಸಕ್ರಿಯವಾಗಿವೆ. ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಪೂರೈಸುವ ಅಥವಾ ಮಾರುವುದಕ್ಕೆ ಕಡಿವಾಣ ಬಿದ್ದಿಲ್ಲ. ಸರ್ಕಾರಿ ಕಚೇರಿಗಳ ಮುಖ್ಯಸ್ಥರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಪ್ರೌಢಶಾಲೆ, ಪಿಯು ಕಾಲೇಜು ಮತ್ತು ಪದವಿ ಕಾಲೇಜುಗಳ ಆವರಣದಲ್ಲಿರುವ ಕ್ಯಾಂಟೀನ್‌ಗಳಲ್ಲೇ ತಂಬಾಕು ಪದಾರ್ಥಗಳು ಸಿಗುತ್ತಿವೆ! ಶಿಕ್ಷಣ ಮತ್ತು ವಿವಿಧ ಇಲಾಖೆಗಳವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಫಲಕಕ್ಕೆ ಸೀಮಿತವಾದ ನಿಷೇಧ
ಚನ್ನಮ್ಮನ ಕಿತ್ತೂರು
: ನೂರು ಮೀಟರ್ ಸುತ್ತಳತೆ ಪ್ರದೇಶದಲ್ಲಿ ತಂಬಾಕು, ತಂಬಾಕುಯುಕ್ತ ವಸ್ತುಗಳು, ಗುಟ್ಕಾ ಸೇರಿದಂತೆ ಮಾದಕ ವಸ್ತುಗಳನ್ನು ಮಾರಬಾರದು ಎಂದು ಶಾಲೆ–ಕಾಲೇಜು ಆವರಣದಲ್ಲಿ ಫಲಕ ಹಾಕಿದ್ದರೂ, ಕೆಲವು ಕಾರಣಗಳಿಂದಾಗಿ ಈ ಮಾರಾಟವು ಸಂಪೂರ್ಣ ನಿಷೇಧವಾಗಿಲ್ಲ ಎಂಬ ದೂರುಗಳು ಪಾಲಕರದಾಗಿದೆ. ಕೆಲ ಖಾಸಗಿ ‘ವಿದ್ಯಾವರ್ಧಕ’ ಸಂಸ್ಥೆಗಳು ‘ವಿದ್ಯಾವರ್ತಕ’ ಸಂಸ್ಥೆಗಳಾಗಿ ಬದಲಾಗಿದ್ದು ಕೂಡಾ ಕಾರಣವಾಗಿರಬಹುದು ಎಂಬ ಆರೋಪ ಅವರದು.

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶಾಲೆ, ಕಾಲೇಜು ಆವರಣ ಬಳಿಯೇ ಗುಟ್ಕಾ, ಸಿಗರೇಟ್ ಮಾರುವ ಅಂಗಡಿಗಳಿವೆ. ನಿಯಮ ಗೊತ್ತಿದ್ದರೂ ಏನು ಪ್ರಯೋಜನ ಆಗುತ್ತಿಲ್ಲ. ಈ ಕುರಿತು ತಂಬಾಕು ನಿಯಂತ್ರಣ ಘಟಕದ ಅಧಿಕಾರಿಗಳು ಬಂದಾಗ ಸಾಕಷ್ಟು ವಾದ, ವಿವಾದಗಳು ನಡೆದ ನಿದರ್ಶನಗಳಿವೆ. ‘ಗುಟ್ಕಾ ಕಂಪನಿಗಳನ್ನೇ ಬಂದ್‌ ಮಾಡಿಸಿ. ಗುಟ್ಕಾ, ಸಿಗರೇಟ್ ಬಂದ್ ಆದರೆ ನಾವೂ ಮಾರುವುದು ನಿಲ್ಲಿಸುತ್ತೇವೆ’ ಎಂಬ ಪ್ರಶ್ನಿಸಿದ ಘಟನೆಗಳು ನಡೆದಿವೆ.

ಇಲ್ಲಿ ಪಾಲನೆಯಾಗುತ್ತಿದೆ
ಮೂಡಲಗಿ:
ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳು ಬಹುತೇಕ ಮುಖ್ಯರಸ್ತೆಯಿಂದ ಒಳಭಾಗದಲ್ಲಿವೆ. ಪಾನ್, ಬೀಡಾ ಅಂಗಡಿಗಳಿಂದ ಬಹಳಷ್ಟು ಅಂತರದಲ್ಲಿವೆ. ಹೀಗಾಗಿ ತಾಂಬಾಕು ಉತ್ಪನ್ನಗಳ ಮಾರಾಟ ನಿಯಮ ಪಾಲನೆ ಆಗುತ್ತಿದೆ.

ಹೆಣ್ಣು ಮಕ್ಕಳ ಸರ್ಕಾರಿ ಶಾಲೆ, ಗಂಡು ಮಕ್ಕಳ ಕನ್ನಡ ಶಾಲೆ ಹಾಗೂ ಉರ್ದು ಶಾಲೆ ಮತ್ತು ಸಿಡಿಪಿಒ ಕಚೇರಿ ಒಂದೇ ಆವರಣದಲ್ಲಿವೆ. ಗೇಟು ಮುಖ್ಯರಸ್ತೆಗೆ ಹೊಂದಿಕೊಂಡಿದೆ. ಸಮೀಪದ ಅಂಗಡಿಗಳಲ್ಲಿ ತಂಬಾಕು ಪದಾರ್ಥಗಳನ್ನು ಮಾರಲಾಗುತ್ತಿದೆ. ಅಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಮಾರಾಟ ನಿಯಂತ್ರಿಸುವುದು ಕಷ್ಟ ಸಾಧ್ಯ ಎನ್ನುವ ಬೇಸರ ಅಧಿಕಾರಿಗದು. ಕೆಲ ಕಾಲೇಜು ಆವರಣಗಳಲ್ಲಿ ಗುಟ್ಕಾದ ಖಾಲಿ ಪೊಟ್ಟಣಗಳ ರಾಶಿ ಆಗಾಗ ಕಾಣಿಸುತ್ತಿರುತ್ತದೆ.

ಎಗ್ಗಿಲ್ಲದೆ ಮಾರಾಟ
ನಿಪ್ಪಾಣಿ
: ಇಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಯುವಜನರು, ಬಾಲಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದು ಪಾಲಕರ ಚಿಂತೆಗೆ ಕಾರಣವಾಗಿದೆ. ಶಾಲಾ-ಕಾಲೇಜುಗಳಿಗೆ ಸಂಬಂಧಿಸಿದವರು ಪೊಲೀಸ್ ಠಾಣೆಗಳಿಗೆ ದೂರು ನೀಡಬೇಕು ಎನ್ನವುದು ಅವರ ಒತ್ತಾಯವಾಗಿದೆ.

‘ನಿಪ್ಪಾಣಿಯಲ್ಲಿ ಮಾದಕ ವಸ್ತುಗಳ ಮಾರಾಟವೂ ಜೋರಾಗಿಯೇ ನಡೆದಿದೆ. ಆ ಮಾಫಿಯಾ ಜೊತೆಗೆ ಕೆಲ ಪೊಲೀಸರೂ ಸಾಥ್ ನೀಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಎಸ್ಪಿ ಹಾಗೂ ಪ್ರಧಾನಿ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದೇನೆ. ಪೊಲೀಸರು ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಜರುಗಿಸಿ ಯುವಜನರನ್ನು  ಕಾಪಾಡಬೇಕು’ ಎಂದು ಶ್ರೀರಾಮ ಸೇನಾ ಹಿಂದೂಸ್ತಾನ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ, ವಕೀಲ ನಿಲೇಶ ಹತ್ತಿ ಕೋರಿದರು.

***
ಪಟ್ಟಣದ ಹಲವಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ಅಧಿಕಾರಿಗಳು ಯಾವಾಗಲೋ ಒಮ್ಮೆ ದಾಳಿ ಮಾಡುತ್ತಾರೆ. ನಂತರ ಯಥಾಸ್ಥಿತಿ. ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾಗಬೇಕು.
–ಪುನೀತ ಹೊಸಮನಿ, ಅಥಣಿ

***

ಹತ್ತಿರವೇ ಸಲೀಸಾಗಿ ಸಿಗುವ ತಂಬಾಕು ಉತ್ಪನ್ನಗಳಿಗೆ ವಿದ್ಯಾರ್ಥಿಗಳು ದಾಸರಾದರೆ ಅವರ ಜೀವನವೇ ನರಕವಾಗಲಿದೆ. ಸಂಬಂಧಿಸಿದವರು ಕೂಡಲೇ ಕ್ರಮ ಜರುಗಿಸಬೇಕು.
–ಮಲ್ಲಿಕಾರ್ಜುನರಡ್ಡಿ ಗೊಂದಿ, ನಾಗರಿಕ, ರಾಮದುರ್ಗ

***
ಖಾನಾಪುರ ತಾಲ್ಲೂಕಿನಲ್ಲಿ ಶಾಲಾ -ಕಾಲೇಜುಗಳ ಸುತ್ತಮುತ್ತವೇ ತಂಬಾಕು ಪದಾರ್ಥಗಳನ್ನು ಮಾರಲಾಗುತ್ತಿದೆ. ಕೂಡಲೇ ಅಧಿಕಾರಿಗಳು ಒಂದು ತಂಡ ರಚಿಸಿ ಕಾರ್ಯಾಚರಣೆ ನಡೆಸುವ ಮೂಲಕ ಕ್ರಮ ಜರುಗಿಸಬೇಕು.
–ವಿಠ್ಠಲ ಹಲಗೇಕರ, ಮುಖ್ಯಸ್ಥರು, ಶಾಂತಿನಿಕೇತನ ಶಿಕ್ಷಣ ಸಂಸ್ಥೆ, ಖಾನಾಪುರ

***
ಖಾನಾಪುರ ತಾಲ್ಲೂಕಿನಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಇದರ ವಿರುದ್ಧ ಕ್ರಮ ಜರುಗಿಸಲಾಗುವುದು.
–ಡಾ. ಸಂಜೀವ ನಾಂದ್ರೆ, ಟಿಎಚ್‌ಒ, ಖಾನಾಪುರ

(ಪ್ರಜಾವಾಣಿ ತಂಡ: ಚನ್ನಪ್ಪ ಮಾದರ, ರವಿ ಎಂ. ಹುಲಕುಂದ, ಬಸವರಾಜ ಶಿರಸಂಗಿ, ಪ್ರದೀಪ ಮೇಲಿನಮನಿ, ಸುಧಾಕರ ತಳವಾರ, ಪ್ರಸನ್ನ ಕುಲಕರ್ಣು, ಪರಶುರಾಮ ನಂದೇಶ್ವರ, ಎಸ್. ವಿಭೂತಿಮಠ, ಬಾಲಶೇಖರ ಬಂದಿ, ಸುನೀಲ ಗಿರಿ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು