ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡಕ್ಕೆ ಸಲಾಂ

Last Updated 8 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮಾರಕ ರೋಗ ಕೋವಿಡ್‌– 19 ದಿನದಿಂದ ದಿನಕ್ಕೆ ತೀವ್ರವಾಗಿ ಹರಡುತ್ತಿದೆ. ರೋಗಿಯ ಸಂಪರ್ಕಕ್ಕೆ ಬಂದವರಿಗೆ ಬಲುಬೇಗ ಆವರಿಸಿಕೊಳ್ಳುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರು, ದಾದಿಯರು, ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಚಿಕಿತ್ಸೆ ನೀಡುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 7 ಪ್ರಕರಣಗಳು ಕೋವಿಡ್‌– 19 ದೃಢಪಟ್ಟಿವೆ. ಕೊರೊನಾ ವೈರಾಣು ತಗುಲಿದ್ದ 175 ಪ್ರಕರಣಗಳು ವರದಿಯಾಗಿವೆ. ಇವರಿಗೆಲ್ಲ ಇಲ್ಲಿನ ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸೋಲೇಷನ್‌ ವಾರ್ಡ್‌ ಹಾಗೂ ಕ್ವಾರಂಟೈನ್‌ ವಾರ್ಡ್‌ಗಳನ್ನು ಪ್ರತ್ಯೇಕವಾಗಿ ಮಾಡಲಾಗಿದ್ದು, ಸುಮಾರು 300 ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಪಾಳೆಯ ಪ್ರಕಾರ ವೈದ್ಯರು, ನರ್ಸ್‌ಗಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಕೋವಿಡ್‌ ಸಾಂಕ್ರಾಮಿಕವಾಗಿದೆ. ರೋಗಿಯ ಜೊತೆ ಸಂಪರ್ಕಕ್ಕೆ ಬರುವವರಿಗೆ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ವೈದ್ಯಕೀಯ ಸಿಬ್ಬಂದಿ ಬಹಳಷ್ಟು ಮುಂಜಾಗ್ರತೆ ಕೈಗೊಂಡಿದ್ದಾರೆ. ಮಾಸ್ಕ್‌, ಕೈಗವುಸು ಹಾಕಿಕೊಳ್ಳುತ್ತಿದ್ದಾರೆ. ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳುತ್ತಿದ್ದಾರೆ. ಪಿಪಿಇ ಸೂಟ್‌ ಧರಿಸಿಕೊಂಡೇ ಚಿಕಿತ್ಸೆ ನೀಡುತ್ತಿದ್ದಾರೆ.

100ಕ್ಕೂ ಹೆಚ್ಚು ಸಿಬ್ಬಂದಿ:ವೈದ್ಯರು, ನರ್ಸ್‌ ಹಾಗೂ ಸಿಬ್ಬಂದಿಗಳು ಸೇರಿದಂತೆ 100ಕ್ಕೂ ಹೆಚ್ಚು ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿನರ್ಸ್‌ಗಳು ಹಾಗೂ ಡಿ– ದರ್ಜೆಯ ಸಿಬ್ಬಂದಿಗಳ ಪೈಕಿ ಬಹುತೇಕರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರು ಎನ್ನುವುದು ಗಮನಾರ್ಹ. ₹ 10 ಸಾವಿರದಿಂದ ₹ 15 ಸಾವಿರ ಸಂಬಳ ಪಡೆಯುವ ಇವರು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ರೋಗಿಗಳ ರಕ್ತ ತಪಾಸಣೆ, ಗಂಟಲು ದ್ರವ ಮಾದರಿ ಸಂಗ್ರಹ ಮಾಡುತ್ತಿದ್ದಾರೆ. ಮಾತ್ರೆ, ಇಂಜೆಕ್ಷನ್‌ ನೀಡುವುದು, ಊಟ– ತಿಂಡಿ ಪೂರೈಸುವುದು ಸೇರಿದಂತೆ ಎಲ್ಲ ಅಗತ್ಯ ಸೇವೆ ನೀಡುತ್ತಿದ್ದಾರೆ.

ರೋಗಿಗಳ ಜೊತೆ ಸಂಪರ್ಕದಲ್ಲಿರುವರು ಮನೆಗೆ ತೆರಳಿದರೆ ಸೋಂಕು ಮನೆಯ ಸದಸ್ಯರಿಗೂ ತಗಲುವ ಅಪಾಯವಿರುತ್ತದೆ. ಅದಕ್ಕಾಗಿ, ಚಿಕಿತ್ಸೆ ನೀಡುತ್ತಿರುವ ಸಿಬ್ಬಂದಿಗಳಿಗೆ ವಾಸಿಸಲು ನಗರದ ಸುಸಜ್ಜಿತ ಹೋಟೆಲ್‌ಗಳಲ್ಲಿ ಜಿಲ್ಲಾಡಳಿತವು ವ್ಯವಸ್ಥೆ ಮಾಡಿದೆ. ಊಟ, ತಿಂಡಿ ಸೇರಿದಂತೆ ಎಲ್ಲ ಅಗತ್ಯ ಸೇವೆಗಳನ್ನು ಹೋಟೆಲ್‌ಗಳಲ್ಲಿಯೇ ಅವರಿಗೆ ಪೂರೈಸುತ್ತಿದೆ. ಒಂದು ವಾರ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ನಂತರ 14 ದಿನಗಳವರೆಗೆ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ.

ಕುಟುಂಬದಿಂದ ದೂರ:ಕ್ವಾರಂಟೈನ್‌ನಲ್ಲಿ ಇರುವ ಸಿಬ್ಬಂದಿಗಳು ತಮ್ಮ ಕುಟುಂಬ ಸದಸ್ಯರಿಂದ ದೂರ ಉಳಿದಿದ್ದಾರೆ. ಚಿಕ್ಕ ಮಕ್ಕಳು, ಪತಿ–ಪತ್ನಿ, ವಯಸ್ಸಾದ ತಂದೆ– ತಾಯಿ, ಅತ್ತೆ– ಮಾವ ಅವರನ್ನೂ ಬಿಟ್ಟಿದ್ದಾರೆ. ವೈರಾಣು ಆತಂಕ ಒಂದೆಡೆ ಕಾಡುತ್ತಿದ್ದರೆ, ಮತ್ತೊಂದೆಡೆ ತಮ್ಮವರನ್ನು ಬಿಟ್ಟಿರುವ ಬೇಸರ ಅನುಭವಿಸುತ್ತಿದ್ದಾರೆ. ಆದಾಗ್ಯೂ, ತಾವು ನಂಬಿಕೊಂಡ ವೃತ್ತಿಯನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ.

ಇತರ ವಿಭಾಗಗಳೂ ಕಾರ್ಯನಿರ್ವಹಣೆ:ಕೋವಿಡ್‌ ಜೊತೆ ಇತರ ರೋಗಗಳಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹೊರರೋಗಿಗಳ ವಿಭಾಗ, ಅಪಘಾತ– ತುರ್ತು ವಿಭಾಗ ಹಾಗೂ ಹೆರಿಗೆ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ನಗರದ ಹಲವೆಡೆ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್‌ಗಳನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ, ಬಹಳಷ್ಟು ಜನರು ಜಿಲ್ಲಾಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಅವರಿಗೂ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಹೆಮ್ಮೆ, ತೃಪ್ತಿ:‘ನಾವೇ ಇಷ್ಟಪಟ್ಟು ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದೇವೆ. ವೃತ್ತಿಧರ್ಮ ಪಾಲಿಸುತ್ತಿದ್ದೇವೆ. ಅದರ ಬಗ್ಗೆ ಹೆಮ್ಮೆ, ತೃಪ್ತಿ ಇದೆ. ರೋಗಿಗಳು ನಮ್ಮನ್ನೇ ದೇವರ ರೀತಿಯಲ್ಲಿ ನೋಡುತ್ತಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಹಾಗೂ ಆರೋಗ್ಯವಂತರನ್ನಾಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ’ ಎಂದು ಸೀನಿಯರ್‌ ಸ್ಟಾಫ್‌ ನರ್ಸ್‌ ಎಲ್‌.ಎಸ್‌. ಪಂಗಣ್ಣನವರ ಹೇಳಿದರು.

*
‘ವೃತ್ತಿ ಧರ್ಮ ಪಾಲನೆ’
‘ರೋಗಿಗಳಿಗೆ ಚಿಕಿತ್ಸೆ ನೀಡುವುದು ನಮ್ಮ (ವೈದ್ಯ) ಧರ್ಮ. ನಮ್ಮ ವೃತ್ತಿಧರ್ಮವನ್ನು ಪಾಲಿಸುತ್ತಿದ್ದೇವೆ. ಕೋವಿಡ್‌ ಪೀಡಿತರನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್‌ ಹಾಗೂ ಸಿಬ್ಬಂದಿಗಳ ಸುರಕ್ಷತೆಗೂ ಹೆಚ್ಚಿನ ಗಮನ ನೀಡಿದ್ದೇವೆ. ಮಾಸ್ಕ್‌, ಸ್ಯಾನಿಟೈಸರ್‌, ಗೌನ್‌, ಪಿಪಿಇ ಕಿಟ್‌ ನೀಡಲಾಗಿದೆ. ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ. ಊಟ, ತಿಂಡಿ ನೀಡಲಾಗುತ್ತಿದೆ’.
– ಡಾ.ವಿನಯ ದಾಸ್ತಿಕೊಪ್ಪ, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT