ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಹೇಳಿಕೆ

ನೆರೆ: ಹಳ್ಳಿಗಳ ಸ್ವಚ್ಛತೆಗೆ ತಲಾ ₹ 1 ಲಕ್ಷ: ಸಚಿವ ಕೆ.ಎಸ್. ಈಶ್ವರಪ್ಪ

Published:
Updated:
Prajavani

ಬೆಳಗಾವಿ: ‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಜಲ‍ಪ್ರಳಯ ಉಂಟಾಗಿದೆ. ಹೀಗಾಗಿ, ನೆರೆಪೀಡಿತ ಗ್ರಾಮಗಳಲ್ಲಿ ತುರ್ತಾಗಿ ಸ್ವಚ್ಛತೆ ಕೈಗೊಳ್ಳಲು ತಲಾ ₹ 1 ಲಕ್ಷ ಅನುದಾನ ನೀಡಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಗಳ  ಅಧ್ಯಕ್ಷರು ಮತ್ತು ಸಿಇಒಗಳ ‘ಸಮಾಲೋಚನೆ,‌‌‌‌ ಚಿಂತನ-ಮಂಥನ ಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದೇಶಗಳಿಗೆ ಹೋಲಿಸಿದರೆ ನಮ್ಮ ಗ್ರಾಮಗಳು ಸೊರಗಿವೆ. ಸಂಸ್ಕೃತಿಯಲ್ಲಿ ಶ್ರೀಮಂತವಾಗಿದ್ದರೂ, ಮೂಲಸೌಲಭ್ಯಗಳ ಕೊರತೆ ಇದೆ. ಹೀಗಾಗಿ, ಅಲ್ಲಿ ಅಭಿವೃದ್ಧಿಗೆ ಆಧಿಕಾರಿಗಳು ಆದ್ಯತೆ ನೀಡಬೇಕು. ಇದಕ್ಕಾಗಿ ಜಿಲ್ಲಾ ಪಂಚಾಯ್ತಿಗೆ ನೀಡುವ ಅನಿರ್ಬಂಧಿತ ಅನುದಾನವನ್ನು ₹ 4 ಕೋಟಿಯಿಂದ ₹ 8 ಕೋಟಿಗೆ ಹಾಗೂ ತಾಲ್ಲೂಕು ಪಂಚಾಯ್ತಿಗೆ ₹ 2 ಕೋಟಿಯಿಂದ ₹ 4 ಕೋಟಿಗೆ ಹೆಚ್ಚಿಸಲಾಗಿದೆ. ಮೊದಲ ಕಂತು ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಕೇಂದ್ರದಿಂದ ನೆರವು ‍ಪಡೆಯುತ್ತೇವೆ:

‘ನೆರೆ ಸಂತ್ರಸ್ತರಿಗೆ ನೆರವಾಗಲು ಸರ್ಕಾರ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಇಡೀ ಸಮಾಜ ನೆರವಾಗಿದೆ. 5,612 ಗ್ರಾಮೀಣ ರಸ್ತೆಗಳು ನೆರೆಯಿಂದಾಗಿ ಹಾಳಾಗಿವೆ. 609 ಕೆರೆಗಳಿಗೆ ಹಾನಿಯಾಗಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಕೇಂದ್ರದ ನೆರವು ಪಡೆದು ಶಾಶ್ವತ ಪರಿಹಾರ ಕಲ್ಪಿಸಲಾಗುವುದು’ ಎಂದರು.

‘ಮೂರೂ ಹಂತದ ಪಂಚಾಯತ್‌ರಾಜ್‌ ವ್ಯವಸ್ಥೆ ಬಲಪಡಿಸಲು ಬದ್ಧವಾಗಿದ್ದೇವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ನೀಡುವ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ. ಅಧಿಕಾರ ಅಥವಾ ಅನುದಾನ ಕಡಿಮೆ ಎಂದು ಅಧಿಕಾರಿಗಳು ಸುಮ್ಮನಾಗದೇ ಶಾಸಕರು ಮತ್ತಿತರ ಜನಪ್ರತಿನಿಧಿಗಳ ಸಮನ್ವಯದಲ್ಲಿ ಮೂಲಸೌಕರ್ಯ ಕಲ್ಪಿಸಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

ರೈಲ್ವೆಗೆ ₹ 50 ಲಕ್ಷ ಕೋಟಿ:

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 100 ದಿನಗಳು ಪೂರ್ಣಗೊಂಡಿವೆ. ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಹೀಗಾಗಿ, ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಮುಂದಿನ 10 ವರ್ಷಗಳಲ್ಲಿ ರೈಲ್ವೆ ಜಾಲ ಬಲಪಡಿಸಲು ₹ 50ಲಕ್ಷ ಕೋಟಿ ಒದಗಿಸಲಾಗುವುದು’ ಎಂದು ಹೇಳಿದರು.

‘ರೈಲ್ವೆಯಲ್ಲಿ ಬಹಳಷ್ಟು ಉದ್ಯೋಗದ ಅವಕಾಶಗಳಿವೆ. ಉತ್ತರ ಭಾರತದವರ ರೀತಿ ದಕ್ಷಿಣದವರೂ ಉದ್ಯೋಗ ಪಡೆದುಕೊಳ್ಳಬೇಕು. ತಕ್ಕಂತೆ ನೈಪುಣ್ಯವನ್ನೂ ಬೆಳೆಸಿಕೊಳ್ಳಬೇಕು. ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ನರೇಗಾ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಡಾ.ಆರ್. ವಿಶಾಲ್ ಇದ್ದರು.

ಇದಕ್ಕೂ ಮುನ್ನ, ‘ಸ್ವಚ್ಛ ಮೇವ ಜಯತೇ ಜಾಗೃತಿ ವಾಹನ ಸಂಚಾರ’ಕ್ಕೆ ಹಸಿರುನಿಶಾನೆ ತೋರಿದರು. ರಾಯಬಾಗ ತಾಲ್ಲೂಕು ಚಿಂಚಲಿಯ ಡಾ.ಬಿ.ಆರ್. ಅಂಬೇಡ್ಕರ್‌ ಜಾನಪದ ಪೋಷಕರ ಮತ್ತು ಅಂಬೇಡ್ಕರ್‌ ಸಾಂಸ್ಕೃತಿಕ ಯುವ ನಾಟಕ ಕಲಾ ಸಂಘದ ಕಲಾವಿದರು ಜಾಗೃತಿ ಗೀತೆಗಳನ್ನು ಹಾಡಿದರು.

Post Comments (+)