ಶುಕ್ರವಾರ, ನವೆಂಬರ್ 15, 2019
23 °C
ಅಥಣಿ: ಸಹಾಯ ಪ್ರತಿಷ್ಠಾನದಿಂದ ಕಾರ್ಯಕ್ರಮ

‘ನೆರೆ’ ಸಂದರ್ಭ ನೆರವಾದವರಿಗೆ ಸನ್ಮಾನ

Published:
Updated:
Prajavani

ಅಥಣಿ: ‘ಪ್ರವಾಹ ಬಂದಾಗ ಪ್ರಾಣದ ಹಂಗು ತೊರೆದು ಜನ ಹಾಗೂ ಜಾನುವಾರುಗಳ ಜೀವ ರಕ್ಷಿಸಿದ ಮೀನುಗಾರರು, ಅಂಬಿಗರನ್ನು ತಾಲ್ಲೂಕು ಅಥವಾ ಜಿಲ್ಲಾಡಳಿತದಿಂದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಿ ಅವರನ್ನು ಸ್ಮರಿಸದಿರುವುದು ಖಂಡನೀಯ. ಸಹಾಯ ಪ್ರತಿಷ್ಠಾನದವರು ಈ ಶ್ರಮಿಕರನ್ನು ಸನ್ಮಾನಿಸಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದು ವಕೀಲ, ಗಡಿ ತಜ್ಞ ಡಾ.ರವೀಂದ್ರ ತೋಟಿಗೇರ ಹೇಳಿದರು.

ಇಲ್ಲಿ ಸಹಾಯ ಪ್ರತಿಷ್ಠಾನ ಹಾಗೂ ಸಂತರಾಮ ಪದವಿಪೂರ್ವ ಕಾಲೇಜಿನಿ ಸಹಯೋಗದಲ್ಲಿ ಆಯೋಜಿಸಿದ್ದ 64ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಭಾಷಣ ಸ್ಪರ್ಧೆ ಹಾಗೂ ‘ನೆರೆ ಜೀವರಕ್ಷಕರಿಗೆ ಸನ್ಮಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಕ ಶ್ರೀಮಂತಿಕೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಕನ್ನಡಪರ ಸಂಘಟನೆಗಳು ಕನ್ನಡಿಗರಿಗೆ ಅನ್ಯಾಯವಾದಾಗ ಬೀದಿಳಿದು ಹೋರಾಟ ಮಾಡುತ್ತಿವೆಯಲ್ಲದೇ ಅನೇಕ ಸಮಾಜಿಕ ಕಾರ್ಯಗಳನ್ನು ಮಾಡುತ್ತಿವೆ. ಜೊತೆಗೆ ಗಡಿಭಾಗದ ಗ್ರಾಮಗಳಲ್ಲಿ ನಮ್ಮ ಭಾಷೆ, ಕಲೆ, ನೆಲ, ಜಲ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ಕೆಲಸಗಳು ಸಂಘಟನೆಗಳಿಂದ ನಡೆಯಬೇಕು’ ಎಂದು ಆಶಿಸಿದರು.

ಸುವರ್ಣ ಕರ್ನಾಟಕ ಜನಸೇವಾ ಸಂಸ್ಥೆ ಅಧ್ಯಕ್ಷ ರವಿ ಪೂಜಾರಿ ಮಾತನಾಡಿ, ‘ಬೇರೆ ಭಾಷೆಗಳ ಪ್ರಭಾವ ನಿಂತಿಲ್ಲ. ಮಾತೃ ಭಾಷೆಯಾದ ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕು’ ಎಂದರು.

ಹುದ್ದಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯ ಹುದ್ದಾರ ಮಾತನಾಡಿ, ‘ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಸಾಹಿತಿಗಳು, ವಚನಕಾರರು ನೀಡಿದ ಕೊಡುಗೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಮೂಲಕ ನಮ್ಮ ಭಾಷೆ ಮತ್ತು ಸಾಹಿತ್ಯ ಉಳಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಮುಖಂಡ ದೀಪಕ ಬುರ್ಲಿ, ಡಾ.ರಾಮಣ್ಣ ದೊಡ್ಡನಿಂಗಪ್ಪಗೊಳ, ಪ್ರೊ.ಎಚ್‌.ಜಿ. ಗಡಕರಿ ಮಾತನಾಡಿದರು.

ತೌಸಫ ಸಾಂಗಲೀಕರ, ಪ್ರಮೋದ ಬಿಳ್ಳೂರ, ಚಿದಾನಂದ ಶೇಗುಣಸಿ, ಡಾ.ಭಾರತಿ ಬಿಜಾಪೂರೆ, ರೇವಣಸಿದ್ದ ಸತ್ತಿ, ಬಾಪು ಕರೋಲಿ, ರವಿ ಬಡಕಂಬಿ, ಶಶಿಧರ, ಚಂದ್ರಶೇಖರ ರೋಖಡಿ, ಯಶೋದಾ ಕರೋಲಿ, ದೀಪಾ ಚೊಳ್ಳಿ, ಶ್ರುತಿ ಬಡಚಿ, ಸಂತೋಷ ಪವಾರ, ಶಿವಾನಂದ ಐಗಳಿ, ಸಾಬು ಡಪಳಾಪೂರ, ರಮೇಶ ಮಾಳಿ, ಪ್ರಶಾಂತ ತೋಡಕರ, ಪುಟ್ಟು ಹಿರೇಮಠ ಇದ್ದರು.

ಸಹಾಯ ಪ್ರತಿಷ್ಠಾನದ ಕಾರ್ಯದರ್ಶಿ ಸಂತೋಷ ಬಡಕಂಬಿ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)