ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ

ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ವಾಗ್ದಾಳಿ
Last Updated 7 ಫೆಬ್ರುವರಿ 2021, 14:50 IST
ಅಕ್ಷರ ಗಾತ್ರ

ಬೆಳಗಾವಿ: ‘ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಹಾಗೂ ದೇಶದ ಅಲ್ಲಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಅದು ಆ ಪಕ್ಷದ ಪೂರ್ವಯೋಜಿತ ಕಾರ್ಯಕ್ರಮ ಎಂದು ಬಿಜೆಪಿಯವರು ಆರೋಪಿಸುತ್ತಿರುವುದರಲ್ಲಿ ಅರ್ಥವಿಲ್ಲ. ರೈತರು ಕಾಯ್ದೆಗಳನ್ನು ವಾಪಸ್ ಪಡೆಯವಂತೆ ಹೋರಾಟ ಆರಂಭಿಸಿದ್ದರು. ಅವರ ಬೆಂಬಲಕ್ಕೆ ನಾವು ಇತ್ತೀಚೆಗೆ ನಿಂತಿದ್ದೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಆರೋಪ ಸತ್ಯಕ್ಕೆ ದೂರವಾದುದು’ ಎಂದರು.

‘ಕೃಷಿಕರು ದೇಶದಾದ್ಯಂತ ಹೋರಾಟ ಮುಂದುವರಿಸಿದ್ದಾರೆ. ಸರ್ಕಾರ ರೈತರ ಪರವಾಗಿ ಕೆಲಸ ಮಾಡಬೇಕು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುತ್ತಿಲ್ಲ. ಹಟ ಬಿಟ್ಟು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಜ.26ರಂದು ದೆಹಲಿಯಲ್ಲಿ ಬಿಜೆಪಿಯವರು ಉದ್ದೇಶಪೂರ್ವಕವಾಗಿಯೇ ರೈತರ ಹೋರಾಟದ ದಿಕ್ಕು ಬದಲಿಸುವ ಪ್ರಯತ್ನ ಮಾಡಿದರು. ಬಿಜೆಪಿ ನಾಯಕರ ಕುಮ್ಮಕ್ಕಿನಿಂದಲೇ ಹಿಂಸಾಚಾರ ನಡೆಯಿತು. ಆದರೆ, ಅವರ ಉದ್ದೇಶ ಯಶಸ್ವಿಯಾಗಲಿಲ್ಲ’ ಎಂದರು.

ದೇಶದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವಿದೇಶದ ಸೆಲೆಬ್ರೆಟಿಗಳು ಬೆಂಬಲಿಸಿರುವುದಕ್ಕೆ ಬಿಜೆಪಿ ವಿರೋಧಿಸುತ್ತಿರುವ ವಿಚಾರಕ್ಕೆ ತಿರುಗೇಟು ನೀಡಿದ ಅವರು, ‘ಅಮೆರಿಕದ ಪ್ರಧಾನಿ ಪರವಾಗಿ ಮೋದಿ ಅವರೆ ಹೋಗಿ ಪ್ರಚಾರ ಮಾಡಿ ಬಂದಿದ್ದರು. ಬೇರೆ ದೇಶಕ್ಕೆ ಅವರು ಯಾಕೆ ಹೋಗಬೇಕಿತ್ತು?’ ಎಂದು ಕೇಳಿದರು.

‘ಬೇರೆ ದೇಶಗಳಲ್ಲಿ ಜನರಿಗೆ ಅನ್ಯಾಯವಾದಾಗ ನಾವು ಕೂಡ ದನಿ ಎತ್ತಿದ್ದೇವೆ. ಶ್ರೀಲಂಕಾದಲ್ಲಿ ಅನ್ಯಾಯವಾದಾಗ ನಮ್ಮ ಸೈನಿಕರು ಹೋಗಿದ್ದರು. ಬಾಂಗ್ಲಾ ದೇಶವನ್ನು ನಮ್ಮ ಇಂದಿರಾಗಾಂಧಿ ಅವರೇ ಪ್ರತ್ಯೇಕ ದೇಶ ಮಾಡಿದರು. ಆದರೆ, ಅಮೆರಿಕಕ್ಕೆ ಹೋಗಿ ಪ್ರಧಾನಿ ಮೋದಿ ಟ್ರಂಪ್ ಪರವಾಗಿ ಯಾಕೆ ಪ್ರಚಾರ ಮಾಡಬೇಕಿತ್ತು. ಅದು ಬೇರೆ ದೇಶ ಅಲ್ಲವೇ? ಎಂದು ತಿರುಗೇಟು ನೀಡಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ’ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ, ‘ಅದನ್ನು ಮತದಾರರು ತೀರ್ಮಾನ ಮಾಡಬೇಕಾಗುತ್ತದೆ’ ಎಂದರು.

‘ಸಚಿವ ಕೆ.ಎಸ್. ಈಶ್ವರಪ್ಪ ಸರ್ಕಾರದ ಭಾಗವಾಗಿದ್ದಾರೆ. ಪೆನ್ನು–ಪೇಪರ್ ಅವರ ಬಳಿಯೇ ಇದೆ. ಆದರೂ ಕುರುಬರಿಗೆ ಎಸ್‌ಟಿ ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT