ಸತೀಶ ಜಾರಕಿಹೊಳಿ ಅವರನ್ನು ಸಿ.ಎಂ ಮಾಡಿಯೇ ತೀರುತ್ತೇನೆ: ರಮೇಶ ಜಾರಕಿಹೊಳಿ

7

ಸತೀಶ ಜಾರಕಿಹೊಳಿ ಅವರನ್ನು ಸಿ.ಎಂ ಮಾಡಿಯೇ ತೀರುತ್ತೇನೆ: ರಮೇಶ ಜಾರಕಿಹೊಳಿ

Published:
Updated:

ಬೆಳಗಾವಿ: ‘ಮುಖ್ಯಮಂತ್ರಿ ರೇಸ್‌ನಲ್ಲಿ ನಾನಿಲ್ಲ. ಸಹೋದರ, ಶಾಸಕ ಸತೀಶ ಜಾರಕಿಹೊಳಿ ಒಬ್ಬರೇ ಇದ್ದಾರೆ. ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಯೇ ತೀರುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸತೀಶ ಮುಖ್ಯಮಂತ್ರಿಯಾಗದಂತೆ ಕೆಲವರು ಕುತಂತ್ರ ನಡೆಸಿರಬಹುದು. ಆದರೆ, ಇದನ್ನೆಲ್ಲ ಮೀರಿ ನಾವು ಅವರನ್ನು ಮಾಡಿಯೇ ತೀರುತ್ತೇವೆ. ನನಗೆ ಸಚಿವ ಸ್ಥಾನವೇ ಸಾಕು’ ಎಂದು ನುಡಿದರು.

‘ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ನಮ್ಮ ಜೊತೆ ಹೋಲಿಕೆ ಮಾಡುವುದು ತಪ್ಪು. ಅವರು ಅದಕ್ಕೆ ಅರ್ಹರಲ್ಲ. ಇಷ್ಟು ವರ್ಷಗಳ ಕಾಲ ಕಾರ್ಯಕರ್ತರಾಗಿದ್ದರು. ಈಗಷ್ಟೇ ಶಾಸಕಿಯಾಗಿದ್ದಾರೆ. ಅವರು ಜನರನ್ನು ಮರಳು ಮಾಡುವ ನಾಟಕ ಬಿಡಬೇಕು. ರಾಜಕಾರಣದಲ್ಲಿ ಯಾರೂ ಶಾಶ್ವತರಲ್ಲ’ ಎಂದು ಟಾಂಗ್‌ ನೀಡಿದರು.

‘ನಾನು ಬಿಜೆಪಿಗೆ ಹೋಗುತ್ತೇನೆ ಎನ್ನುವ ಮಾತು ಶುದ್ಧ ಸುಳ್ಳು. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡಲ್ಲ. ನಾವು ಕಟ್ಟಿ ಬೆಳೆಸಿದ ಪಕ್ಷವಿದು. ಇದನ್ನು ಇನ್ನಷ್ಟು ಬಲಪಡಿಸುತ್ತೇವೆ. ಪಕ್ಷದ ಹೈಕಮಾಂಡ್‌ಗೆ ಒಂದೇ ಕೋರಿಕೆ ಎಂದರೆ, ಸುಳ್ಳು ಮಾತುಗಳನ್ನು ಕೇಳಿಕೊಂಡು ನಮ್ಮ ಮೇಲೆ ಆಪಾದನೆ ಮಾಡಬಾರದು. ನಮ್ಮ ಮನಸ್ಸು ನೋಯಿಸಬಾರದು’ ಎಂದರು.

ಮುಂದಿನ ಯೋಜನೆ, ಈಗಿನದ್ದಲ್ಲ

‘ನಾನು ಸಿ.ಎಂ ಆಗಬೇಕೆಂದು ರಮೇಶ ಹೇಳಿರುವುದು ಈಗಿನದ್ದಲ್ಲ, ಮುಂದಿನ 10 ವರ್ಷಗಳಲ್ಲಿ ಇದು ಸಾಕಾರಗೊಳ್ಳಬಹುದು. ಅದಕ್ಕೆ ಎಷ್ಟು ಜನ ಬೆಂಬಲ ಸೂಚಿಸುತ್ತಾರೆಯೋ ನೋಡಬೇಕು’ ಎಂದು ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.

‘ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಇಷ್ಟವಿಲ್ಲ. ಹೈಕಮಾಂಡ್‌ ಬಯಸಿದರೆ ನೋಡೋಣ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 3

  Frustrated
 • 1

  Angry

Comments:

0 comments

Write the first review for this !