ಸೋಮವಾರ, ನವೆಂಬರ್ 30, 2020
22 °C
ಪಿಎಚ್‌.ಡಿ, ರ‍್ಯಾಂಕ್ ಪ್ರಮಾಣಪತ್ರ ವಿತರಿಸಿದ ಸತೀಶ

ಪದವೀಧರರ ಮೇಲೆ ಹೆಚ್ಚಿನ ಜವಾಬ್ದಾರಿ: ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ವಿದ್ಯಾರ್ಥಿಗಳು ಕಷ್ಟಪಟ್ಟು ಸಂಪಾದಿಸಿದ ಡಾಕ್ಟರೇಟ್ ಪದವಿ ಮತ್ತು ರ‍್ಯಾಂಕ್‌ಗಳು ಸಮಾಜವನ್ನು ಇನ್ನಷ್ಟು ಸದೃಢವಾಗಿ ಕಟ್ಟಲು ಸದುಪಯೋಗವಾಗಲಿ’ ಎಂದು ಶಾಸಕ ಸತೀಶ ಜಾರಕಿಹೊಳಿ ಆಶಿಸಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವೀಧರರು ಮತ್ತು ರ‍್ಯಾಂಕ್ ವಿಜೇತರಿಗೆ ಪ್ರಮಾಣಪತ್ರಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಾಲಕರು ಪಟ್ಟ ಕಷ್ಟ ಮತ್ತು ಕಂಡ ಕನಸಿಗೆ ಬೆಲೆ ಬರುವಂತೆ ನಡೆದುಕೊಳ್ಳಬೇಕು. ಪಿಎಚ್.ಡಿ ಮತ್ತು ರ‍್ಯಾಂಕ್ ಇತ್ಯಾದಿ ಪದವಿ ಪಡೆಯದ ಅವಕಾಶ ವಂಚಿತರೆ ಅನೇಕ ಸಾಧನೆಗಳನ್ನು ಮಾಡುತ್ತಾರೆ. ಹೀಗಾಗಿ ಪದವಿ ಪಡೆದವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ’ ಎಂದರು.

‘ಸಾಮಾಜಿಕ ಜವಾಬ್ದಾರಿ ಎಲ್ಲಕ್ಕಿಂತಲೂ ದೊಡ್ಡ ಜವಾಬ್ದಾರಿ. ವಿದ್ಯಾವಂತರು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಹೋರಾಟದ ಆಶಯಗಳನ್ನು  ಅಳವಡಿಸಿಕೊಳ್ಳಬೇಕು. ಗಳಿಕೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ, ‘ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಆದ್ಯತೆ ಕೊಡುತ್ತದೆ. ನಾವು  ವಿದ್ಯಾರ್ಥಿಗಳಿದ್ದಾಗ ಇಷ್ಟೊಂದು ಅನುಕೂಲಗಳು ಇರಲಿಲ್ಲ. ಈಗಿನವರಿಗೆ ಅನೇಕ ಸೌಲಭ್ಯಗಳಿವೆ. ಪ್ರತಿಭೆಗೆ ಜಾಗತಿಕವಾಗಿ ಅನೇಕ ಅವಕಾಶಗಳಿವೆ. ಕೌಶಲ ವೃದ್ಧಿಸಿಕೊಳ್ಳುವ ಅವುಗಳನ್ನು ಪಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕುಲಸಚಿವ ಡಾ.ಬಸವರಾಜ ಪದ್ಮಶಾಲಿ, ಸಿಂಡಿಕೇಟ್ ಸದಸ್ಯರಾದ ಆನಂದ ಹೊಸೂರು, ಅನಿಲ ದೇಸಾಯಿ, ಶ್ರೀನಿವಾಸ ಶಾಸ್ತ್ರಿ, ನದಾಫ, ಕುಲಪತಿ ವಿಶೇಷಾಧಿಕಾರಿ ಡಾ.ಎಂ. ಜಯಪ್ಪ, ಡಾ.ರಾಜಪ್ಪ ದಳವಾಯಿ, ಡಾ.ಎಸ್.ಎಂ. ಗಂಗಾಧರಯ್ಯ, ಡಾ.ಯಲ್ಲಪ್ಪ ಹಿಮ್ಮಡಿ, ಡಾ.ಎಚ್.ಐ. ತಿಮ್ಮಾಪೂರ, ಡಾ.ಬಲವಂತಗೋಳ, ಡಾ.ಕೆ.ಎಲ್.ಎನ್. ಮೂರ್ತಿ ಇದ್ದರು.

ಮೌಲ್ಯಮಾಪನ ಕುಲಸಚಿವ ಡಾ.ಎಸ್.ಎಂ. ಹುರಕಡ್ಲಿ ಸ್ವಾಗತಿಸಿದರು. ಹಣಕಾಸು ಅಧಿಕಾರಿ ಡಾ.ಡಿ.ಎನ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಡಾ.ಎಂ. ಗದಿಗೆಪ್ಪಗೌಡರ, ರಶ್ಮಿ ಪೈ ನಿರೂಪಿಸಿದರು. ಡಾ.ನಂದಿನಿ ದೇವರಮನಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು