ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಂಡರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನ: ಸತೀಶ ಜಾರಕಿಹೊಳಿ ಹೇಳಿಕೆ

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ
Last Updated 16 ಫೆಬ್ರುವರಿ 2021, 12:03 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮಾಜಿ ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರು, ಪಕ್ಷ ಬಿಟ್ಟು ಹೋಗಿರುವ ಮುಖಂಡರನ್ನು ಮತ್ತೆ ಆಹ್ವಾನಿಸುತ್ತಿದ್ದೇನೆ. ಗೋಕಾಕದಿಂದ ಈ ಕಾರ್ಯ ಆರಂಭಿಸಿದ್ದೇನೆ. ಇದು ಪಕ್ಷ ಕಟ್ಟುವ ಕಾರ್ಯದ ಒಂದು ಭಾಗವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಗೋಕಾಕದಲ್ಲಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಸೇರಿದಂತೆ ಹಲವು ಮುಖಂಡರಿಗೆ ಆಹ್ವಾನ ನೀಡಿದ್ದೇವೆ. ಅವರು ನಿರ್ಧಾರ ತಿಳಿಸಲು ಸಮಯ ಕೇಳಿದ್ದಾರೆ. ಅವರು ಏನು ತೀರ್ಮಾನ ಕೈಗೊಳ್ಳುತ್ತಾರೆ ನೋಡಬೇಕು’ ಎಂದು ಹೇಳಿದರು.

‘ಪಕ್ಷ ಸಂಘಟನೆಗಾಗಿ ಕೆಪಿಸಿಸಿ ಅಧ್ಯಕ್ಷರು ಸಮಿತಿ ರಚಿಸಿದ್ದಾರೆ. ಆ ತಂಡ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುತ್ತಿದೆ. ಹಲವು ಕಾರಣಗಳಿಂದ ಪಕ್ಷ ಬಿಟ್ಟು ಹೋದ ನಾಯಕರ ಮರು ಸೇರ್ಪಡೆಗೆ ಮುಂದಾಗಿದ್ದೇವೆ. ನಾನೂ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಎಲ್ಲರನ್ನೂ ಸಂಪರ್ಕಿಸುತ್ತೇನೆ; ಬರುವಂತೆ ಕೋರುತ್ತೇನೆ. ಅವರು ಈಗಲಾದರೂ ಬರಬಹುದು. ಮುಂಬರುವ ವಿಧಾನಸಭಾ ಚುನಾವಣೆ ವೇಳೆಗಾದರೂ ಬರಬಹುದು’ ಎಂದರು.

ಜನರು ಅವರಿಗೆ ಮತ ನೀಡಿದ್ದಾರೆ:

ಸರ್ಕಾರವನ್ನು ವಿರೋಧ ಪಕ್ಷಗಳು ಪ್ರಬಲವಾಗಿ ಪ್ರಶ್ನಿಸುತ್ತಿವೆಯೇ ಎಂಬ ಪ್ರಶ್ನೆಗೆ, ‘ಜನರು ಬಿಜೆಪಿಯವರಿಗೆ ಹೆಚ್ಚಿನ ಮತ ನೀಡಿದ್ದಾರೆ. ಅವರೇ ತಕ್ಕ ಪಾಠ ಕಲಿಸಬೇಕು. ಜನರು ನಮಗೆ ಶಕ್ತಿ ನೀಡಿದರೆ ಮಾತ್ರ ನಾವು ಪ್ರಶ್ನಿಸಲು ಸಾಧ್ಯ. ಆದರೂ ಜನವಿರೋಧಿ ನೀತಿಗಳ ಬಗ್ಗೆ ಪ್ರತಿಭಟಿಸುತ್ತಿದ್ದೇವೆ. ಜನರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸುತ್ತಾರೆ’ ಎಂದರು.

‘ಕಾಂಗ್ರೆಸ್‌ನ ಟಾಪ್‌ 5 ಶಾಸಕರು ಬಿಜೆಪಿಗೆ ಬರಲು ಸಿದ್ಧವಿದ್ದಾರೆ’ ಎಂಬ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಗೆ ಹೋಗುವವರು ಯಾರು ಎನ್ನುವುದನ್ನು ಹೇಳಿದವರೇ ಬಹಿರಂಗಪಡಿಸಬೇಕು. ಸಚಿವರು ಹಿಂದೆ ಇನ್ನೂ ಹೆಚ್ಚಿನ ಸಂಖ್ಯೆ ನೀಡಿದ್ದರು. ಈಗ, ಐದಕ್ಕೆ ಇಳಿದಿದ್ದಾರೆ. ರಾಜಕೀಯದಲ್ಲಿ ಹೀಗೆಯೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್‌ನ ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ’ ಎಂದು ಹೇಳಿದರು.

‘ಟಿವಿ, ರೆಫ್ರಿಜರೇಟರ್ ಹಾಗೂ ದ್ವಿಚಕ್ರವಾಹನ ಇರುವವರ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಲಾಗುವುದು ಎಂಬ ಸಚಿವ ಉಮೇಶ ಕತ್ತಿ ಹೇಳಿಕೆಗೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಟಿವಿ ಇಲ್ಲದಿರುವ ಮನೆಯೇ ಇಲ್ಲ. ಸರ್ಕಾರಕ್ಕೆ ಬಡವರ ಪರ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ ಎನ್ನಿಸುತ್ತದೆ’ ಎಂದು ಟೀಕಿಸಿದರು.

ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಎಐಸಿಸಿ ಗೋವಾ ರಾಜ್ಯದ ವೀಕ್ಷಕ ಸುನೀಲ ಹನುಮಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT