ರಾಮದುರ್ಗ: ‘ಪಾಶ್ಚಿಮಾತ್ಯ ಸಂಸ್ಕೃತಿಗೆ ವಾಲಿಕೊಂಡಿರುವ ಯುವ ಜನಾಂಗವನ್ನು ಮರಳಿ ದೇಶೀಯ ಸಂಸ್ಕೃತಿಗೆ ತರುವ ಕೆಲಸ ಧಾರ್ಮಿಕ ಕೇಂದ್ರಗಳಿಂದ ನಡೆಯಬೇಕಿದೆ’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ತಾಲ್ಲೂಕಿನ ಗೊಡಚಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಮಂದಿರ, ರೇಣುಕಾಚಾರ್ಯ ಗುರುಕುಲ, ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಜ್ಞಾನ ಮಂಟಪ ಕಟ್ಟಡದ ಶಂಕುಸ್ಥಾಪನೆ, ವೀರಭದ್ರೇಶ್ವರ ಜಯಂತಿ ಮತ್ತು ಧರ್ಮಸಭೆ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಮೊದಲಿನಿಂದಲೂ ರಂಭಾಪುರಿ ಪೀಠ ಧರ್ಮ ಜಾಗೃತಿ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಮಠಗಳು, ಮಂದಿರಗಳು, ಪೀಠಗಳು ಧಾರ್ಮಿಕ ಜಾಗೃತಿ ಕಾರ್ಯ, ಸಂಸ್ಕಾರ, ಪರಂಪರೆಯಿಂದ ಭಾರತಕ್ಕೆ ವಿಶ್ವಗುರು ಸ್ಥಾನ ತಂದುಕೊಟ್ಟಿವೆ. ಇಂದು ನಾಗರಿಕ ಸಮಾಜ ಅಧುನಿಕತೆಯ ಟಿವಿ ಮತ್ತು ಮೊಬೈಲ್‍ದಿಂದ ಸಂಸ್ಕಾರ ಕಡಿಮೆಯಾಗಿ ಧಾರ್ಮಿಕ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ. ಧರ್ಮಗುರುಗಳು ಜನರನ್ನು ಜಾಗೃತಗೊಳಿಸುವ ಅಗತ್ಯ ಇದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಠಗಿಮಠ ಮಾತನಾಡಿ, ಪ್ರತಿಯೊಬ್ಬರು ದುಡಿದು ಗಳಿಸಿರುವ ಸಂಪತ್ತಿನಲ್ಲಿ ಸಾಧ್ಯವಾದಷ್ಟು ಸಮಾಜದ ಋಣ ತೀರಿಸಲು ಮಠ, ಮಂದಿರಗಳಿಗೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ದಾನ ಕೊಡುವ ಮೂಲಕ ನೆಮ್ಮದಿಯ ಜೀವನ ನಡೆಸಬೇಕು ಎಂದು ತಿಳಿಸಿದರು.