ಶನಿವಾರ, ಜನವರಿ 23, 2021
18 °C
ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

ಫುಲೆ ದಂಪತಿಯಿಂದ ಶಿಕ್ಷಣ ಕ್ರಾಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಇಂಗ್ಲಿಷ್ ವಿದ್ಯಾಭ್ಯಾಸದ ಫಲವಾಗಿ ವೈಚಾರಿಕ ಬದಲಾವಣೆಗೆ ಒಡ್ಡಿಕೊಂಡಿದ್ದ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ ಅವರು ಮಾಡಿದ್ದು ಕೇವಲ ಸುಧಾರಣೆಯಲ್ಲ. ಅದೊಂದು ಮಹಾಕ್ರಾಂತಿ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕ್ ಡಿಸೋಜಾ ಹೇಳಿದರು.

ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕವು ಇಲ್ಲಿನ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ ಹಾಗೂ ತಾಲ್ಲೂಕು ಸಂಚಾಲಕರ ಪ್ರಥಮ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತಿ ವ್ಯವಸ್ಥೆಯ ಅಸಮಾನತೆಯ ಮೇಲೆ ನಿಂತಿರುವ ಭಾರತೀಯ ಸಮಾಜದ ಕಟ್ಟಡದ ತಳಪಾಯವೇ ಕುಸಿದು ಹೋಗಿತ್ತು. ರಿಪೇರಿ ಮಾಡಿದರೆ ಸರಿ  ಹೋಗಲಾರದೆಂದು ಅದನ್ನು ಕೆಡವಿ ಹೊಸದಾಗಿ ಕಟ್ಟಬೇಕೆಂದು ಸಾಮಾಜಿಕ ಕ್ರಾಂತಿಗೆ ಮುಂದಾದರು. ಅಂದು ಅವರು ಬಿತ್ತಿ ಬೆಳೆದ ಫಲವೇ ಅಂಬೇಡ್ಕರ್ ಎಂಬ ಮಹಾ ಬೆಳೆ’ ಎಂದು ಸ್ಮರಿಸಿದರು.

ತಾಲ್ಲೂಕು ಸಂಚಾಲಕರಾದ ಸುನಂದಾ ಭರಮನಾಯ್ಕರ, ಶಬಾನಾ ಅಣ್ಣಿಗೇರಿ, ಸಂಜೀವ ಹಾದಿಮನಿ, ಆನಂದ ಹಂಪನ್ನವರ, ಅರ್ಜುನ್ ನಿಡಗುಂದೆ ಸಮ್ಮಿಲನದಲ್ಲಿ ಮಾತನಾಡಿದರು. ಪಿಎಚ್‌ಡಿ ಪಡೆದ ಅಡಿವೆಪ್ಪ ಇಟಗಿ, ಮುಹಮ್ಮದ್ ರಫಿ ದೊಡಮನಿ, ಸಂಜೀವ ಹಾದಿಮನಿ ಅವರನ್ನು ಸತ್ಕರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ, ‘ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಗುರುತಿಸಿಕೊಂಡಿರುವ ಬರಹಗಾರರು, ಚಿಂತಕರು ಯಾರೊಂದಿಗೆ ಗುರುತಿಸಿಕೊಳ್ಳಬೇಕು ಮತ್ತು ಯಾರೊಂದಿಗೆ ಗುರುತಿಸಿಕೊಳ್ಳಬಾರದು ಎಂಬ ಅಂತರವನ್ನು ಸದಾ ಕಾಯ್ದುಕೊಂಡು ಜನಪರವಾಗಿರಬೇಕು’ ಎಂದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಜಿ.ವಿ. ಕುಲಕರ್ಣಿ ಡಾ.ಅಶೋಕ್ ಡಿಸೋಜಾ ಫೋಟೊ ಪೂಜೆ ಸಲ್ಲಿಸಿದರು. ಸಂವಿಧಾನದ ಪೂರ್ವ ಪೀಠಿಕೆಯ ಓದಿನೊಂದಿಗೆ ಚಾಲನೆ ನೀಡಲಾಯಿತು.

ಮನೋಹರ ಕಾಂಬಳೆ, ನಿಂಗಪ್ಪ ಸಂಗ್ರೆಜಿಕೊಪ್ಪ, ಮಲ್ಲಿಕಾರ್ಜುನ ಲೋಕಳಿ, ನೇಮಿಚಂದ್ರ, ಮಹೇಶ್ ಸಿಂಗೆ, ಆಕಾಶ್ ಬೇವಿನಕಟ್ಟಿ, ಹನುಮಂತ ಯರಗಟ್ಟಿ, ಪಾಂಡುರಂಗ ಗಾಣಿಗೇರ ಇದ್ದರು.

ಸುಧಾ ಕೊಟಬಾಗಿ, ಸರಸ್ವತಿ  ಆಲಖನೂರೆ, ಸುರೇಖಾ ಕೊಟ್ರೆ, ಪ್ರಿಯಾಂಕಾ ಉಪ್ಪಾರ ಕ್ರಾಂತಿ ಗೀತೆ ಮತ್ತು ಲಕ್ಷ್ಮಿ ಮಾಳಂಗಿ, ಆರತಿ ಅಕ್ಕನ್ನವರ, ಮಂಜುನಾಥ ಪಾಟೀಲ, ಬಾಲಕೃಷ್ಣ ನಾಯಕ ಸ್ವಾಗತ ಗೀತೆ ಹಾಡಿದರು. ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದ ಪ್ರಾಸ್ತಾವಿಕ ಮಾತನಾಡಿದರು. ಸಿದ್ರಾಮ ತಳವಾರ ಸ್ವಾಗತಿಸಿದರು. ಅಕ್ಷತಾ ಯಳ್ಳೂರ ನಿರ್ವಹಿಸಿದರು. ಶಂಕರ್ ಬಾಗೇವಾಡಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.