ಶನಿವಾರ, ಜುಲೈ 2, 2022
22 °C

ಟೆಂಟ್‌ ಹಾಕಿ ಗ್ರಾಮಸ್ಥರಿಂದ ಶಾಲಾ ಪ್ರಾರಂಭೋತ್ಸವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮುದೇನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಗೊಂಡಿರುವುದರಿಂದ, ಅವುಗಳ ಮುಂಭಾಗದಲ್ಲಿ ಟೆಂಟ್‌ ಹಾಕಿ, ಅಲ್ಲಿಯೇ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಸುವ ಮೂಲಕ ಗ್ರಾಮಸ್ಥರು ವಿನೂತನವಾಗಿ ಸೋಮವಾರ ಪ್ರತಿಭಟನೆ ನಡೆಸಿದರು.

ಆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೂರು ವರ್ಷಗಳ ಇತಿಹಾಸ ಹೊಂದಿದೆ. ಶಿಥಿಲಗೊಂಡಿರುವ ಕೊಠಡಿಗಳನ್ನು ನಿರ್ಮಿಸಲು ಶಿಕ್ಷಣ ಸಚಿವರು, ಶಾಸಕರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಡಂಗುರ ಸಾರಿಸಿ ಪ್ರತಿಭಟನೆಗೆ ನಿರ್ಧರಿಸಿದ್ದರು.

ಶಾಲೆಯಲ್ಲಿ 315 ವಿದ್ಯಾರ್ಥಿಗಳಿದ್ದಾರೆ. 6 ಮಂದಿ ಶಿಕ್ಷಕರಿದ್ದಾರೆ. 11 ಕೊಠಡಿಗಳಿವೆ. ಅವುಗಳಲ್ಲಿ ಕೆಲವು ಮಾತ್ರ ಸುಸ್ಥಿತಿಯಲ್ಲಿವೆ. ಉಳಿದ ಕೊಠಡಿಗಳು ಸೋರುತ್ತಿವೆ. ಹೆಂಚುಗಳು ಕಿತ್ತು ಹೋಗಿವೆ. ಹೊಸ ಶಾಲೆಗಳನ್ನು ನಿರ್ಮಿಸಿಕೊಡಬೇಕು ಎಂದು ಐದು ವರ್ಷಗಳಿಂದಲೂ ಕೋರುತ್ತಾ ಬಂದಿದ್ದಾರೆ.

‘ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ಮಾಡಿದರೆ ಸಾಲದು. ಮಕ್ಕಳಿಗೆ ಮೂಲ ಸೌಲಭ್ಯಗಳನ್ನು ಪೂರೈಸಲು ಸರ್ಕಾರ ಮುಂದಾಗಬೇಕು. ಹಲವು ಬಾರಿ ವಿನಂತಿಸಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ಧೋರಣೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದೇವೆ’ ಎಂದು ಎಸ್‌ಡಿಎಂಸಿಯವರು ತಿಳಿಸಿದರು.

‘ಶಾಲೆಯ ಕೊಠಡಿಗಳು ಬಿದ್ದು ಹೋಗುವ ಪರಿಸ್ಥಿತಿಯಲ್ಲಿವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕವಾಗುತ್ತಿದೆ. ಆದರೆ, ಅವರು ಶಿಕ್ಷಣದಿಂದ ವಂಚಿತರಾಗಬಾರದು ನಿರ್ಧರಿಸಿ ಶಾಲೆಯ ಆವರಣದಲ್ಲಿಯೇ ಟೆಂಟ್‌ ಹಾಕಿ ವ್ಯವಸ್ಥೆ ಮಾಡಿದ್ದೇವೆ’ ಎಂದರು.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬಿಇಒ ಎಂ.ಆರ್‌. ಆಲಾಸೆ ಮತ್ತು ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. 15 ದಿನದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

‘ಈ ಹಿಂದೆ ಕೊಠಡಿ ದುರಸ್ತಿ ಮಾಡುವುದಾಗಿ ಹೇಳಿದ್ದರೂ ಎಸ್‌ಡಿಎಂಸಿಯವರು ಸಹಕಾರ ನೀಡಿರಲಿಲ್ಲ. ತ್ವರಿತವಾಗಿ ಕಟ್ಟಡ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಬಿಇಒ ಅಲಾಸೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧಿಕಾರಿಗಳ ಬೇಜವಾಬ್ದಾರಿ ಧೋರಣೆಯಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಶಾಲೆ ಮುಂದೆ ಟೆಂಟ್‌ನಲ್ಲಿಯೇ ತರಗತಿ ನಡೆಸುತ್ತೇವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಕಮ್ಮಾರ ಪ್ರತಿಕ್ರಿಯಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು