‘ಅಧ್ಯಾತ್ಮದೊಂದಿಗೆ ವಿಜ್ಞಾನವೂ ಅಗತ್ಯ’

7
ಎಸ್‌ಜಿಬಿಐಟಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

‘ಅಧ್ಯಾತ್ಮದೊಂದಿಗೆ ವಿಜ್ಞಾನವೂ ಅಗತ್ಯ’

Published:
Updated:
Deccan Herald

ಬೆಳಗಾವಿ: ಜಾಗತೀಕರಣ, ಖಾಸಗೀಕರಣದ ಪ್ರಭಾವವಿರುವ ಪ್ರಸ್ತುತ ದಿನಗಳಲ್ಲಿ ಅಧ್ಯಾತ್ಮದೊಂದಿಗೆ ವಿಜ್ಞಾನವೂ ಅತ್ಯಗತ್ಯವಾಗಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

‌ಇಲ್ಲಿನ ಎಸ್‌ಜಿಬಿಐಟಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಆಧ್ಯಾತ್ಮಿಕ ಶಿಕ್ಷಣದ ಬಗ್ಗೆ ಒತ್ತು ಕೊಡುವುದು ಬಿಟ್ಟು ಸ್ವಾಮೀಜಿಗಳೇಕೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುತ್ತಿದ್ದಾರೆ ಎಂಬ ಪ್ರಶ್ನೆ ಬರಬಹುದು. ಬದಲಾದ ಕಾಲಘಟ್ಟದಲ್ಲಿ ತಾಂತ್ರಿಕ ಶಿಕ್ಷಣ ಅವಶ್ಯವಾಗಿದೆ. ಇದನ್ನು ಮನಗಂಡು, ಮಠಾಧೀಶರು ಸಂಸ್ಥೆಗಳನ್ನು ಆರಂಭಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಪ್ರಚಲಿತ ವಿದ್ಯಮಾನಗಳು ಹಾಗೂ ತಂತ್ರಜ್ಞಾನದಲ್ಲಿನ ಬದಲಾವಣೆಗಳನ್ನು ತಿಳಿದುಕೊಳ್ಳುತ್ತಿರಬೇಕು’ ಎಂದು ಸಲಹೆ ನೀಡಿದರು.

ಉತ್ತಮ ನಡವಳಿಕೆ ಅಗತ್ಯ:

‘ಯಶಸ್ಸಿಗೆ ಪರಿಶ್ರಮವೊಂದೇ ಹೆದ್ದಾರಿ. ಬೇರಾವುದೇ ದಾರಿಗಳಿಲ್ಲ. ಕಾಲೇಜುಗಳಾಗಲೀ, ಪೋಷಕರಾಗಲಿ ಎಲ್ಲಿವರೆಗೆ ಕೈಹಿಡಿದು ನಡೆಸುತ್ತಾರೆ? ಹೀಗಾಗಿ ನಾವಾಗಿಯೇ ಸಬಲಗೊಳ್ಳಬೇಕು. ಯಶಸ್ಸು ಸಿಕ್ಕ ನಂತರ ಅದನ್ನು ನಿರ್ವಹಿಸುವುದನ್ನೂ ಕಲಿತುಕೊಳ್ಳಬೇಕು. ಇಲ್ಲವಾದಲ್ಲಿ, ಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಸಾಧಿಸಿದ ನಂತರವೂ ಉತ್ತಮ ನಡವಳಿಕೆ ಇರಬೇಕು. ಇಲ್ಲದಿದ್ದರೆ, ಯಶಸ್ಸು ಗಳಿಸಿದರೂ ಪ್ರಯೋಜನ ಆಗುವುದಿಲ್ಲ’ ಎಂದರು.

ಸನ್ಮಾನ ಸ್ವೀಕರಿಸಿದ ಗದಗದ ಶಿವಾನಂದ ಬೃಹನ್ಮಠದ ಉತ್ತರಾಧಿಕಾರಿ ಕೈವಲ್ಯಾನಂದ ಸ್ವಾಮೀಜಿ, ‘ಜ್ಞಾನ ಹಾಗೂ ಅನುಭವ ನಮ್ಮನ್ನು ಸಂತೋಷವಾಗಿ ಬದುಕಿಸಬಲ್ಲವು. ಹೀಗಾಗಿ ಜ್ಞಾನ ಪಡೆಯುತ್ತಲೇ ಇರಬೇಕು. ಮನಸ್ಸು, ಬುದ್ಧಿ ಎನ್ನುವುದು ಭೂಮಿ ಇದ್ದಂತೆ. ಜೀವನ ನಾಶ ಮಾಡುವ ಕಳೆ ಬೆಳೆಯದಂತೆ ನೋಡಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು’ ಎಂದು ಸಲಹೆ ನೀಡಿದರು.

ಶರಣತತ್ವ ಪಾಲಿಸಿ:

‘ನಮ್ಮಲ್ಲಿ ಬಹಳಷ್ಟು ಪದವೀಧರರಿದ್ದಾರೆ. ಆದರೆ, ಅವರಿಗೆ ಕೆಲಸವಿಲ್ಲ ಅಥವಾ ಇರುವ ಕೆಲಸಕ್ಕೆ ಅವರು ಹೋಗುವುದಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ಕಂಡುಬರುತ್ತಿದೆ. ಜೀವನ ನದಿಯ ಅಲೆಗಳ ರೀತಿ ಇರುತ್ತದೆ. ಹೀಗಾಗಿ, ಒಂದೇ ಜ್ಞಾನ ಅಥವಾ ಉದ್ಯೋಗವನ್ನು ನಂಬಿಕೊಳ್ಳಬಾರದು. ಎಲ್ಲ ಕೆಲಸಗಳಿಗೂ ಸಿದ್ಧವಿರಬೇಕು’ ಎಂದು ಕಿವಿಮಾತು ಹೇಳಿದರು.

ಸತ್ಕಾರ ಸ್ವೀಕರಿಸಿದ ಸಾಹಿತಿ ಎಲ್.ಎಸ್. ಶಾಸ್ತ್ರಿ, ‘ಶರಣತತ್ವಗಳು ಜಗತ್ತಿಗೆ ಮಾದರಿಯಾಗಿವೆ. ಅವುಗಳ ಸಾರವನ್ನು ಅನುಸರಿಸಿದರೆ ಯಶಸ್ಸು ದೊರೆಯುತ್ತದೆ. ಕಾಯಕ ತತ್ವ ಹಾಗೂ ಅಂತರಂಗ ಶುದ್ಧಿ ಬಹಳ ಮಹತ್ವವಾದುದು’ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಗೋವಿಂದ ವೆಲ್ಲಿಂಗ್‌ ಮಾತನಾಡಿ, ‘ನಾಲ್ಕು ವರ್ಷಗಳ ಎಂಜಿನಿಯರಿಂಗ್ ಕೋರ್ಸ್‌ ಪೂರೈಸಿದಾಗ ಎಲ್ಲವೂ ಬದಲಾವಣೆ ಆಗಿರುತ್ತದೆ. ನೀವು ಆಗಬೇಕು ಅಂದುಕೊಂಡಿದ್ದ ಕೆಲಸವೇ ಇರುವುದಿಲ್ಲ. ನೀವು ಕಲಿತ ಪಠ್ಯಕ್ರಮದಲ್ಲೂ ಏನೋ ಕೊರತೆ ಇದೆ ಎನಿಸಬಹುದು. ಹೀಗಾಗಿ, ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತ ಪುಸ್ತಕಗಳನ್ನು, ಓದಬೇಕು. ಇಂದಿನ ಅಗತ್ಯಗಳಿಗೆ ತಕ್ಕಂತೆ ಸಿದ್ಧಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಜೆ.ಎನ್. ರಾಮಚಂದ್ರೇಗೌಡ ಇದ್ದರು.

ಸೌಮ್ಯಾ ಪ್ರಾರ್ಥಿಸಿದರು. ಪ್ರಾಂಶುಪಾಲ ಎಸ್‌.ಎಸ್‌. ಸಾಲಿಮಠ ಸ್ವಾಗತಿಸಿದರು. ಶ್ವೇತಾ ಹಿರೇಮಠ ನಿರೂಪಿಸಿದರು. ಕೆ.ಬಿ. ಗೌಡ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !