ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಬೆಳವಣಿಗೆಗೆ ಉತ್ತಮ ವಾತಾವರಣ- ಕೆಎಸ್‌ಸಿಎ ಧಾರವಾಡ ವಲಯದ ಸದಸ್ಯ ಅವಿನಾಶ

ಸಂದರ್ಶನ
Last Updated 25 ಮೇ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಲ್ಲಿ ಕೆಎಸ್‌ಸಿಎನಿಂದ ಆಟೊನಗರದಲ್ಲಿ ಉತ್ತಮ ಮೈದಾನ ಸಿದ್ಧಗೊಳಿಸಲಾಗಿದೆ. ಕ್ಲಬ್‌ಗಳು ಕೂಡ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಆಗಾಗ ಪಂದ್ಯಗಳು ನಡೆಯುತ್ತಿವೆ. ಇದರಿಂದಾಗಿ ಕ್ರಿಕೆಟ್‌ ಬೆಳವಣಿಗೆಗೆ ಇಲ್ಲಿ ಬಹಳಷ್ಟು ಅವಕಾಶಗಳಿವೆ’ ಎಂದು ಕೆಎಸ್‌ಸಿಎ ಧಾರವಾಡ ವಲಯದ ಸದಸ್ಯ ಅವಿನಾಶ್‌ ಪೋತದಾರ ತಿಳಿಸಿದರು.

‘ಪ್ರಜಾವಾಣಿ’ಗೆ ಶನಿವಾರ ನೀಡಿದ ಸಂದರ್ಶನದಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

* ಇಲ್ಲಿ ಕ್ರಿಕೆಟ್ ಚಟುವಟಿಕೆಗಳು ಹೇಗಿವೆ?

ಚೆನ್ನಾಗಿ ನಡೆಯುತ್ತಿವೆ. ಕೆಎಸ್‌ಸಿಎ ಧಾರವಾಡ ವಲಯದ ವತಿಯಿಂದ ವಿವಿಧ ವಯೋಮಾನದವರಿಗೆ ಕ್ರಿಕೆಟ್‌ ಪಂದ್ಯಗಳನ್ನು, ತಂಡಕ್ಕೆ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಾರವಾರ, ಗದಗ ತಂಡಗಳ ವಿರುದ್ಧ ಪಂದ್ಯಗಳು ನಡೆಯುತ್ತಿರುತ್ತವೆ. ಇವರಲ್ಲಿ ಉತ್ತಮ ಪ್ರದರ್ಶನ ತೋರಿದವರನ್ನು ಧಾರವಾಡ ವಲಯದ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ನಂತರ, ವಲಯವಾರು ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಪ್ರಾಯೋಜಕರೂ ಕೂಡ ಮುಂದೆ ಬರುತ್ತಿದ್ದಾರೆ. ಬಿಪಿಎಲ್ (ಬೆಳಗಾವಿ ಪ್ರೀಮಿಯರ್‌ ಲೀಗ್) ಟ್ವೆಂಟಿ–20 ಪಂದ್ಯಗಳು ನಡೆಯುತ್ತಿವೆ. ವೇದಿಕೆ ಸೃಷ್ಟಿ ಮಾಡಿಕೊಡುವ ಕೆಲಸವಂತೂ ಆಗುತ್ತಿದೆ.

* ಎಷ್ಟು ಕ್ರಿಕೆಟ್ ಕ್ಲಬ್‌ಗಳಿವೆ?

ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌, ಯೂನಿಯನ್ ಜಿಮ್ಖಾನಾ, ಸಾಯಿರಾಜ್, ಆನಂದ್ ಕ್ರಿಕೆಟ್‌ ಅಕಾಡೆಮಿ ಮೊದಲಾದ ಆರು ಕ್ಲಬ್‌ಗಳು ಕ್ರಿಯಾಶೀಲವಾಗಿವೆ. ಇಲ್ಲಿ ನಡೆಯುವ ಪಂದ್ಯಗಳಲ್ಲಿ ಆಟಗಾರರು ತೋರುವ ಪ‍್ರದರ್ಶನದ ಮಾಹಿತಿಯನ್ನು ಕೆಎಸ್‌ಸಿಎ ಕಳುಹಿಸಲೇಬೇಕು. ಹೀಗಾಗಿ, ಎಲ್ಲರ ‍ಪ್ರದರ್ಶನವೂ ಗಣನೆಗೆ ಬರುತ್ತದೆ. ರಾಜ್ಯ ತಂಡಕ್ಕೆ ಆಯ್ಕೆಯಾಗುವ ಅವಕಾಶದ ಬಾಗಿಲು ತೆರೆಯಬಹುದು. ರಾಜ್ಯ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ರೋಹಿತ್‌ ಮೋರೆ, ರೋಹನ್ ಕದಂ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ನಿಂದ ಬಂದವರು. ಇದು ಬೆಳಗಾವಿಗೆ ಹೆಮ್ಮೆಯ ವಿಷಯವಾಗಿದೆ.

* ಕೆಎಸ್‌ಸಿಎ ಮೈದಾನದಲ್ಲಿ ಇನ್ನೇನೆಲ್ಲಾ ಸೌಲಭ್ಯ ಬೇಕು?

ಮೈದಾನ ಒಳ್ಳೆಯ ರೂಪ ಪಡೆದಿದೆ. ಔಟ್‌ಫೀಲ್ಡ್‌ ಹಾಗೂ ವಿಕೆಟ್ ಪೂರ್ಣಗೊಂಡಿದೆ. ಅಂತರರಾಷ್ಟ್ರೀಯ ಪಂದ್ಯಗಳಿಗೆ ಬಿಸಿಸಿಐನವರು ಆಯ್ಕೆ ಮಾಡಿರುವುದೇ ಇದಕ್ಕೆ ನಿದರ್ಶನ. ಹೊನಲು ಬೆಳಕಿನ ವ್ಯವಸ್ಥೆ ಮಾಡುವಂತೆ ಕೆಎಸ್‌ಸಿಎಗೆ ಕೋರಿದ್ದೇನೆ. ಸಕಾರಾತ್ಮಕ ಸ್ಪಂದನೆ ಬಂದಿದೆ. ಗ್ಯಾಲರಿ ನಿರ್ಮಾಣಕ್ಕಾಗಿ ಪ್ರಾಯೋಜಕರನ್ನು ಹುಡುಕುತ್ತಿದ್ದೇವೆ. ಗ್ಯಾಲರಿಗೆ ದಾನಿಗಳ ಹೆಸರು ಹಾಕುವುದಕ್ಕೆ ಕೆಎಸ್‌ಸಿಎ ಅನುಮೋದನೆ ಕೊಡಬೇಕಾಗುತ್ತದೆ. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟು 22ಸಾವಿರ ಮಂದಿ ಕೂರುವುದಕ್ಕೆ ಗ್ಯಾಲರಿ ವ್ಯವಸ್ಥೆ ಮಾಡಲು ಅವಕಾಶವಿದೆ.

* ಅಂತರರಾಷ್ಟ್ರೀಯ ಪಂದ್ಯ ನಡೆದರೆ ಆಗುವ ಪ್ರಯೋಜನಗಳೇನು?

ಕ್ರಿಕೆಟ್‌ ಬೆಳೆಯುತ್ತದೆ. ಇಲ್ಲಿನ ಹುಡುಗರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಉದ್ಯಮದ ಪ್ರಗತಿಗೂ ಪೂರಕವಾಗಿದೆ. ಹೀಗಾಗಿ, ಹೆಚ್ಚಿನ ಪಂದ್ಯಗಳು ನಡೆಯುವಂತಾಗಲು ಶ್ರಮಿಸುತ್ತಿದ್ದೇವೆ.

* ಮೈದಾನದ ನಿರ್ವಹಣೆ ಹೇಗೆ?

ನಿರ್ವಹಣೆಗೆ ಆದ್ಯತೆ ನೀಡಲಾಗಿದೆ. ಇದಕ್ಕೆ ತಗಲುವ ವೆಚ್ಚಕ್ಕಾಗಿ ಹಣ ಹೊಂದಿಸಲು ಕ್ಲಬ್ ಹೌಸ್, ಜಿಮ್‌, ರೆಸ್ಟೊರೆಂಟ್ ನಿರ್ಮಿಸಲಾಗಿದೆ. ಸದಸ್ಯತ್ವದಿಂದ ಬಂದ ಹಣ ನಿರ್ವಹಣೆಗೆ ಬಳಸಬೇಕು ಎನ್ನುವುದು ಕೆಎಸ್‌ಸಿಎ ಉದ್ದೇಶವಾಗಿದೆ.

* ಯುವ ಕ್ರಿಕೆಟಿಗರಿಗೆ ನಿಮ್ಮ ಸಲಹೆಗಳೇನು?

ಪರಿಶ್ರಮ, ಬದ್ಧತೆ, ಪ್ರಾಮಾಣಿಕತೆ ಇರಬೇಕು. ಏಕಾಗ್ರತೆಯಿಂದ ಕಲಿಯಬೇಕು. ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT