ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಗೂ ಮುನ್ನವೇ ಜಿನುಗುತ್ತಿರುವ ಗೋಡೆ!

ಬಿಲ್‌ ಪಾವತಿಸದಂತೆ ಸಚಿವರ ಸೂಚನೆ
Last Updated 5 ಜುಲೈ 2019, 10:57 IST
ಅಕ್ಷರ ಗಾತ್ರ

ಬೆಳಗಾವಿ: ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಶಾಸಕರಾದ ಅನಿಲ ಬೆನಕೆ ಹಾಗೂ ಲಕ್ಷ್ಮಿ ಹೆಬ್ಬಾಳಕರ ಅಧಿಕಾರಿಗಳೊಂದಿಗೆ ಇಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಶುಕ್ರವಾರ ಜಿಟಿಜಿಟಿ ಮಳೆಯ ನಡುವೆಯೂ ಕೊಡೆ ಸಹಾಯದಲ್ಲಿ ಪರಿಶೀಲಿಸಿದರು.

ಉತ್ತರ ಮತಕ್ಷೇತ್ರದ ಶ್ರೀನಗರದ ವಂಟಮುರಿಯಲ್ಲಿ ನಿರ್ಮಿಸಲಾಗುತ್ತಿರುವ 30 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಕಟ್ಟಡ, ಮಹಾಂತೇಶ ನಗರದಲ್ಲಿ ವಿಜ್ಞಾನ ಉದ್ಯಾನ ಹಾಗೂ ಅಶೋಕನಗರದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಕ್ರೀಡಾ ಸಂಕೀರ್ಣವನ್ನು ವೀಕ್ಷಿಸಿದರು.

ಉದ್ಘಾಟನೆಗೂ ಮುನ್ನವೇ, ವ್ಯಾಯಾಮ ಶಾಲೆಯಲ್ಲಿ ನೀರು ಜಿನುಗುತ್ತಿರುವುದನ್ನು ಗಮನಿಸಿದ ಲಕ್ಷ್ಮಿ ಹೆಬ್ಬಾಳಕರ, ‘ಈ ರೀತಿಯ ಕಳಪೆ ಕಾಮಗಾರಿ ಕೈಗೊಂಡರೆ ಹೇಗೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರ ಪ್ರಯೋಜನವಾದರೂ ಏನು, ಹೀಗೆ ಉದ್ಘಾಟನೆ ಮಾಡಿದರೆ ಜನರು ಏನನ್ನುತ್ತಾರೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಕಟ್ಟಡದಲ್ಲಿ ನೀರು ಜಿನುಗದಂತೆ ಸರಿಪಡಿಸಬೇಕು. ನಂತರವಷ್ಟೇ ಗುತ್ತಿಗೆದಾರರಿಗೆ ಸಂಪೂರ್ಣ ಬಿಲ್ ಪಾವತಿಸಬೇಕು’ ಎಂದು ಸೂಚಿಸಿದರು.‌

ಬ್ಯಾಡ್ಮಿಂಟನ್ ಕೋರ್ಟ್ ಕಟ್ಟಡದ ಎದುರು ನೀರು ನಿಂತಿದ್ದನ್ನು ಗಮನಿಸಿದ ಅವರು, ‘ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

‘ಇಲ್ಲಿ ಅಭ್ಯಾಸ ಮಾಡುವುದಕ್ಕೆ ಬರುವವರಿಗೆ ದುಬಾರಿ ಶುಲ್ಕ ವಿಧಿಸಬಾರದು’ ಎಂದು ಮಾಜಿ ಶಾಸಕ, ಮುಖಂಡ ಫಿರೋಜ್‌ ಸೇಠ್‌ ಸಲಹೆ ನೀಡಿದರು. ‘ಬಹಳ ಕಡಿಮೆ ಶುಲ್ಕವಿದ್ದರೆ ಹೆಚ್ಚಿನ ಜನರು ಬರುತ್ತಾರೆ. ಆಗ, ಅಭ್ಯಾಸ ಮಾಡುವವರಿಗೆ ತೊಂದರೆಯಾಗುತ್ತದೆ. ಆದಾಗ್ಯೂ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಸಭೆ ನಡೆಸಿ ನಿರ್ಧರಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ಪ್ರತಿಕ್ರಿಯಿಸಿದರು.

ಇದಕ್ಕೂ ಮುನ್ನ ಸಚಿವ ಹಾಗೂ ಹೆಬ್ಬಾಳಕರ, ಟ್ರೆಡ್ ಮಿಲ್‌ನಲ್ಲಿ ಕೆಲ ಸಮಯ ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT