ಬೆಳಗಾವಿಯ ಜೊತೆ ಶಿವಕುಮಾರ ಸ್ವಾಮೀಜಿ ನಂಟು

7

ಬೆಳಗಾವಿಯ ಜೊತೆ ಶಿವಕುಮಾರ ಸ್ವಾಮೀಜಿ ನಂಟು

Published:
Updated:
Prajavani

ಬೆಳಗಾವಿ: ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಬೆಳಗಾವಿಯ ಜೊತೆ ನಂಟು ಹೊಂದಿದ್ದರು. ವಿಶೇಷವಾಗಿ ಇಲ್ಲಿನ ನಾಗನೂರು ರುದ್ರಾಕ್ಷಿ ಮಠದ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅವರು, ನಗರದಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಇಲ್ಲಿನ ಲಿಂಗರಾಜ ಕಾಲೇಜು ಮೈದಾನದಲ್ಲಿ 1967ರಲ್ಲಿ ಅಖಿಲ ಭಾರತ ಶಿವಾನುಭವ ಸಮ್ಮೇಳನ ಆಯೋಜಿಸಲಾಗಿತ್ತು. ಶಿವಕುಮಾರ ಸ್ವಾಮೀಜಿ ಅವರು ಈ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪೂಜೆ, ಪುನಸ್ಕಾರ ಸೇರಿದಂತೆ ಧಾರ್ಮಿಕ ಆಚರಣೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದರು. ಧಾರ್ಮಿಕ ಆಚರಣೆಯಲ್ಲಿ ತೊಡಗಿಕೊಂಡವರಿಗೆ ಸಂಸ್ಕಾರ ಒಲಿಯುತ್ತದೆ ಎಂದು ಹಿತೋಪದೇಶ ಮಾಡಿದ್ದರು.

ಸಮಾರಂಭದಲ್ಲಿ ಅವರೊಂದಿಗೆ ಈ ಭಾಗದ ಪ್ರಮುಖ ಮಠಾಧೀಶರಾದ ಮುರಗೋಡದ ಮಹಾಂತ ಶಿವಯೋಗಿ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಶಿವಬಸವ ಸ್ವಾಮೀಜಿ, ಧಾರವಾಡದ ಮುರುಘಾಮಠದ ಮೃತ್ಯುಂಜಯ ಸ್ವಾಮೀಜಿ ಅವರೂ ಪಾಲ್ಗೊಂಡಿದ್ದರು. ಹಿರಿಯ ಸ್ವಾಮೀಜಿಯವರ ಮಾತುಗಳಿಗೆ ಕಿವಿಯಾಗಿದ್ದರು.

ಎರಡನೇ ಬಾರಿ ಭೇಟಿ:

ಅಖಿಲ ಭಾರತ ವೀರಶೈವ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದ ರಜತ ಮಹೋತ್ಸವವು 2002ರ ನವೆಂಬರ್‌ 7ರಂದು ನಗರದಲ್ಲಿ ಆಯೋಜಿಸಲಾಗಿತ್ತು. ಈ ಮಹೋತ್ಸವದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲೇ ಬೇಕೆಂದು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಅವರು ಶಿವಕುಮಾರ ಸ್ವಾಮೀಜಿ ಅವರನ್ನು ಒಪ್ಪಿಸಿದ್ದರು.

ಅವರ ಪ್ರೀತಿಯ ಒತ್ತಾಯಕ್ಕೆ ಮಣಿದ ಶಿವಕುಮಾರ ಸ್ವಾಮೀಜಿ ಅವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಶಿವಬಸವ ನಗರದ ಮಠದ ಆವರಣದಲ್ಲಿಯೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿವಕುಮಾರ ಸ್ವಾಮೀಜಿ ಅವರನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಬೆಳಗಾವಿಯಲ್ಲದೇ, ಅಕ್ಕಪಕ್ಕದ ಊರುಗಳ ಜನರೂ ಆಗಮಿಸಿದ್ದರು.

ಪೂಜೆ ಪುನಸ್ಕಾರ:

‘ಶಿವಕುಮಾರ ಸ್ವಾಮೀಜಿ ಅವರು ಬೆಳಗಾವಿಗೆ ಬಂದಾಗ ರುದ್ರಾಕ್ಷಿ ಮಠದಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಬೆಳಿಗ್ಗೆ 4 ಗಂಟೆಗೆ ಎದ್ದು, ಇಷ್ಟಲಿಂಗ ಪೂಜೆಯಲ್ಲಿ ತೊಡಗುತ್ತಿದ್ದರು. ಪ್ರಾರ್ಥನೆ, ಪೂಜೆಯ ನಂತರ ಮುಂದಿನ ಕಾರ್ಯಕ್ರಮಗಳಲ್ಲಿ ತೊಡಗುತ್ತಿದ್ದರು’ ಎಂದು ಮಠದ ಉಸ್ತುವಾರಿ ಶಂಕರ ಗುಡಸ ಸ್ಮರಿಸಿದರು.

‘ಇಲ್ಲಿನ ಮಾರುತಿ ಗಲ್ಲಿಯಲ್ಲಿರುವ ಮಠದ ಪ್ರಸಾದ ನಿಲಯದ (ಹಾಸ್ಟೆಲ್‌) ಅಮೃತ ಮಹೋತ್ಸವವು 2007ರಲ್ಲಿ ಆಯೋಜಿಸಲಾಗಿತ್ತು. ಆ ವೇಳೆ ಅನಾರೋಗ್ಯದ ಕಾರಣದಿಂದಾಗಿ ಸ್ವಾಮೀಜಿಯವರು ಪಾಲ್ಗೊಳ್ಳಲಿಲ್ಲ’ ಎಂದು ಹೇಳಿದರು.

ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚು:

ತುಮಕೂರಿನಲ್ಲಿ ಶಿವಕುಮಾರ ಸ್ವಾಮೀಜಿ ಅವರು ನಡೆಸುತ್ತಿರುವ ವಿದ್ಯಾರ್ಥಿಗಳ ನಿಲಯದಲ್ಲಿ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಚಿಕ್ಕೋಡಿ, ಹುಕ್ಕೇರಿ, ರಾಮದುರ್ಗ, ಸವದತ್ತಿ ಭಾಗದ ವಿದ್ಯಾರ್ಥಿಗಳು ತಮ್ಮಲ್ಲಿ ಇದ್ದಾರೆಂದು ಸ್ವಾಮೀಜಿಯವರು ಇಲ್ಲಿಗೆ ಬಂದಾಗ ಸ್ಮರಿಸಿದ್ದರು ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !