ಭಾನುವಾರ, ಅಕ್ಟೋಬರ್ 20, 2019
21 °C
ಡಾ.ಅಮರೇಶ ನುಗಡೋಣಿ ಅಭಿಮತ

ನವೋದಯ ಮಾದರಿ ಕಥೆ ಹಳೆಯದು

Published:
Updated:
Prajavani

ಬೆಳಗಾವಿ: ‘ನವೋದಯ ಮಾದರಿ ಕಥೆ ಹಳೆಯದಾಗಿದೆ ಎಂದು ಹೇಳುವುದಾದರೂ ಕಥನ ಮಾದರಿಗಳ ಕುರಿತು ಮಾತನಾಡುವುದು ಅವಶ್ಯವಿದೆ’ ಎಂದು ಕಥೆಗಾರ ಡಾ.ಅಮರೇಶ ನುಗಡೋಣಿ ಹೇಳಿದರು.

ಇಲ್ಲಿನ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ‌ದಿಂದ ಶನಿವಾರ ಬಸವರಾಜ ಕಟ್ಟಿಮನಿ ಜನ್ಮ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ಕನ್ನಡದ ಸಣ್ಣ ಕಥೆಯ ಮಾದರಿಗಳು’ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಕಥನ ಮಾದರಿಗಳು ಎಂದು ಬಂದಾಗ ಇಡೀ ಶತನಮಾನದ ಉದಕ್ಕೂ ಕನ್ನಡ ಕಥೆಗಳು ಬೇರೆ ಬೇರೆ ಸೈದ್ಧಾಂತಿಕ ನೆಲೆಯಲ್ಲಿ  ಸೃಷ್ಟಿಯಾಗಿವೆ. ಅವುಗಳನ್ನು ಅನುಸರಿಸಿಯೇ ಕನ್ನಡ ವಿಮರ್ಶಕರು ಆ ಕಥೆಗಳನ್ನು ಬೇರೆ ಬೇರೆ ಸೈದ್ಧಾಂತಿಕ ನೆಲೆಯಲ್ಲಿ ಓದುವ, ಮಿಮರ್ಶೆ ಮಾಡುವ ರೀತಿಯಲ್ಲಿ ಬೆಳೆದು ಬಂದಿವೆ. ನಾನಾ ರೀತಿಯಲ್ಲಿ ಸಾಹಿತ್ಯ ವಿಮರ್ಶೆ ಬೆಳೆದಿದೆ’ ಎಂದರು.

‘ಸೈದ್ಧಾಂತಿಕ ನೆಲೆಯಲ್ಲಿ ಕಥನಗಳನ್ನು ರಚಿಸುವ ಕಲೆ ಓದುಗರಲ್ಲೂ ಇರುತ್ತದೆ. ಅದರೊಂದಿಗೆ ಕಥೆಯ ರಚನೆ ಬಹಳ ಮುಖ್ಯವಾದುದು. ಕಥೆಗಾರನ ಪದ ಬಳಕೆಯು ಭಾಷಿಕ ದೃಷ್ಟಿಯಿಂದ ಎಂದು ನೋಡಿದಾಗ ಹೇಗೆ ರಚಿಸಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಕಥೆಗಳನ್ನು ಮೊದಲ ತಲೆಮಾರಿನ ಲೇಖಕರು ಸಮರ್ಥವಾಗಿ ದೊಡ್ಡ ವಿಷಯವನ್ನು ಸಹ ಹಾಸುಹೊಕ್ಕಾಗಿ, ಲಾಲಿತ್ಯ, ಹಾಸ್ಯ ಪೂರ್ಣವಾಗಿ ನಿರೂಪಣೆ ಮಾಡಿದ್ದಾರೆ. ಅಲ್ಲದೇ ಕಥೆಯಲ್ಲಿ ಅಸಹಾಯಕತೆ, ಹಕ್ಕು, ಪ್ರತಿಭಟನೆ ಬಗ್ಗೆ ಅರ್ಥಪೂರ್ಣವಾಗಿ ವಿಮರ್ಶೆ ಮಾಡಿದ್ದಾರೆ’ ಎಂದು ಹೇಳಿದರು.

ಗೋಷ್ಠಿಯಲ್ಲಿ ಡಾ.ಸಿ.ಎಸ್. ಭೀಮರಾಯ ‘ಪ್ರಗತಿಶೀಲ ಮತ್ತು ನವ್ಯ ಮಾದರಿ’ ಕಥೆಗಳು ಎಂಬ ವಿಷಯ ಕುರಿತು ಮಾತನಾಡಿ, ‘ಪ್ರಗತಿಶೀಲ ಕಥೆ 1940ರಲ್ಲಿ ಹುಟ್ಟಿಕೊಂಡಿದ್ದು, ಅಲ್ಲಿಯವರೆಗೂ ನವೋದಯ ಲೇಖಕರೇ ಕಥೆಗಳನ್ನು ವಿಮರ್ಶಿಸಿದ್ದಾರೆ. ಲೇಖಕರಿಗೆ ಮುಖ್ಯವಾಗಿ ಸಾಮಾಜಿಕ ಕಳಕಳಿ ಇರಬೇಕಾಗುತ್ತದೆ’ ಎಂದು ಅಭಿ‍ಪ್ರಾಯಪಟ್ಟರು.

ಬಾಗಲಕೋಟೆಯ ಡಾ.ಸುಮಂಗಲಾ ಮೇಟಿ ‘ದಲಿತ ಬಂಡಾಯ ಮಾದರಿಯ ಕಥೆ’ ವಿಷಯ ಕುರಿತು ಮಾತನಾಡಿದರು. ಸಂಚಾಲಕ ಬಾಳಾಸಾಹೇಬ ಲೋಕಾಪುರ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ಕಾದಂಬರಿಕಾರ ಡಾ.ರಹಮತ್ ತರಿಕೇರೆ, ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಇದ್ದರು.

Post Comments (+)