ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷಿತ ಯೋಧರ ದಾಖಲೆ ಸಂಗ್ರಹಿಸಿ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ರಾಮಚಂದ್ರಗೌಡ
Last Updated 22 ಅಕ್ಟೋಬರ್ 2021, 17:02 IST
ಅಕ್ಷರ ಗಾತ್ರ

ಬೆಳಗಾವಿ: ‘ಕಿತ್ತೂರು ಸಂಸ್ಥಾನದ ನಿರ್ಲಕ್ಷಿತ ಯೋಧರ ದಾಖಲೆಗಳನ್ನು ಸಂಗಹಿಸುವ ಕಾರ್ಯ ನಡೆಯಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಆಶಯ ವ್ಯಕ್ತಪಡಿಸಿದರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠಗಳಿಂದ ‘ಕಿತ್ತೂರು ಸಂಸ್ಥಾನ ಮತ್ತು ನಿರ್ಲಕ್ಷಿತ ಯೋಧರು’ ವಿಷಯದ ‌ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಯಣ್ಣ ಜೊತೆಗೆ ಗಲ್ಲು ಶಿಕ್ಷೆಗೆ ಗುರಿಯಾದವರು ಅನೇಕರಿದ್ದಾರೆ. ನಿರ್ಲಕ್ಷ್ಯಕ್ಕೆ ಒಳಗಾದ ಯೋಧರ ಕುರಿತು ಸಮಗ್ರ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕು’ ಎಂದರು.

‘ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಮಾಜಮುಖಿ ಸಂಶೋಧನೆಗಳು ನಡೆಯಬೇಕು. ವಿದೇಶಗಳ ಗ್ರಂಥಾಲಯದಲ್ಲಿ ಜಗತ್ತಿನ ಎಲ್ಲ ಮಾಹಿತಿ ಸಿಗುತ್ತದೆ. ಅದೇ ಮಾದರಿಯಲ್ಲಿ ಚನ್ನಮ್ಮ ಹಾಗೂ ರಾಯಣ್ಣನ ಕುರಿತು ದಾಖಲೆಗಳು ಜನರಿಗೆ ಬೇಕು ಎಂದಾಗ, ನಮ್ಮ ವಿಶ್ವವಿದ್ಯಾಲಯದ ಪೀಠಗಳಲ್ಲಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.

ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಅಧ್ಯಕ್ಷ ಡಾ.ಎಂ. ಜಯಪ್ಪ, ‘ಪ್ರತಿ ವರ್ಷ ಈ ಪೀಠಗಳಿಂದ ಮೌಲಿಕ ವಿಷಯಗಳ ಕುರಿತು ಉಪನ್ಯಾಸ ಮತ್ತು ವಿಚಾರಸಂಕಿರಣಗಳನ್ನು ನಡೆಸಲಾಗುತ್ತಿದೆ. ವಿದ್ವಾಂಸರಿಂದ ಜ್ಞಾನದ ಸಾರ ಉಣಬಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಧಾರವಾಡದ ಸಂಶೋಧಕ ಅರವಿಂದ ಯಾಳಗಿ, ‘1946ರಲ್ಲಿ ಸಂಶೋಧನಾ ಮಂಡಳ ಎಂಬ ಸಂಘಟನೆ ಕಿತ್ತೂರು ಸಂಸ್ಥಾನದ ಕುರಿತು ಅಧ್ಯಯನ ಶುರು ಮಾಡಿತು. ಅಲ್ಲಿಂದ ನಮಗೆ ದಾಖಲೆಗಳು ದೊರೆತವು’ ಎಂದರು.

ಸರ್ದಾರ್ ಗುರುಸಿದ್ದಪ್ಪ ಅವರ ವಂಶಸ್ಥೆ ಜಯಶ್ರೀ ಪಾಟೀಲ ಉದ್ಘಾಟಿದರು. ಅಮಟೂರು ಬಾಳಪ್ಪ ಕುರಿತು ಯ.ರು. ಪಾಟೀಲರು, ಕಿತ್ತೂರಿನ ರಾಣಿ ವೀರಮ್ಮ– ಮಹೇಶ ಚನ್ನಂಗಿ, ಸರ್ದಾರ್ ಗುರುಸಿದ್ದಪ್ಪ– ಪ್ರೊ.ಆರ್.ಎಂ. ಷಡಕ್ಷರಯ್ಯ, ವೀರ ಮಾತೆ ಕೆಂಚಮ್ಮ– ಬಸವರಾಜ ಕಮತ, ಬಿಚುಗತ್ತಿ ಚನ್ನಬಸಪ್ಪ– ಡಾ.ಎಚ್.ಎಸ್. ಮೇಲಿನಮನಿ, ರಾಣಿ ರುದ್ರಮ್ಮ–ಡಾ. ಸರಸ್ವತಿ ಭಗವತಿ, ರಾಯಣ್ಣನ ನಂತರದ ಕಿತ್ತೂರು ಕಲಿಗಳ ಕುರಿತು ಡಾ.ಎ.ಬಿ. ವಗ್ಗರ
ವಿಷಯ ಮಂಡಿಸಿದರು.

ಚನ್ನಮ್ಮ ಪೀಠದ ಅಧ್ಯಕ್ಷ ಪ್ರೊ.ಎಸ್.ಎಂ. ಗಂಗಾಧರಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ.ಮಹೇಶ ಗಾಜಪ್ಪನವರ, ಡಾ.ಶೋಭಾ ನಾಯಕ, ಡಾ.ಹನುಮಂತಪ್ಪ
ಸಂಜೀವಣ್ಣನವರ, ಡಾ.ಯಲ್ಲಪ್ಪ ಜಕ್ಕಣ್ಣವರ, ಡಾ.ಸದಾಶಿವ ಮುಗಳಿ, ಡಾ.ಬಿ.ಆರ್. ರಾಧಾ ಇದ್ದರು.

ಡಾ.ಗಜಾನನ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸುಪ್ರಿಯಾ ಮತ್ತು ಶಿವಲೀಲಾ ಪ್ರಾರ್ಥಿಸಿದರು. ಡಾ.ಸಾವುಕಾರ ಕಾಂಬಳೆ ನಿರೂಪಿಸಿದರು. ಡಾ.ಪಿ. ನಾಗರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT