ಶನಿವಾರ, ಜನವರಿ 18, 2020
26 °C

‘ಶಿಕ್ಷಣದ ಜ್ಞಾನ ಬೆಳಕು ನೀಡಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಳಗಾವಿ: ‘ಶಿಕ್ಷಣದ ಜ್ಞಾನವು ಬೆಳಕು ನೀಡಬೇಕು ಹಾಗೂ ಸದ್ಗುಣಗಳನ್ನು ಕಲಿಸಬೇಕು’ ಎಂದು 8 ಕರ್ನಾಟಕ ಏರ್ ಸ್ಕ್ವಾರ್ಡನ್ ಎನ್‌ಸಿಸಿ ಕಮಾಂಡಿಗ್ ಆಫೀಸರ್ ವಿಂಗ್‌ ಕಮಾಂಡರ್ ಪಿ.ಆರ್. ಪೊನ್ನಪ್ಪ ಹೇಳಿದರು.

ಇಲ್ಲಿನ ಕೆಎಲ್‌ಇ ರಾಜಾ ಲಖಮಗೌಡ ವಿಜ್ಞಾನ ಪಿಯು ಕಾಲೇಜಿನಲ್ಲಿ ಈಚೆಗೆ ನಡೆದ 2019–20ನೇ ಸಾಲಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪಾರಿತೋಷಕ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಮೌಲ್ಯಯುತ ಅಧ್ಯಯನಗಳು ಜೀವನದ ದಾರಿಗೆ ಬೆಳಕು ನೀಡುತ್ತವೆ. ಶಿಕ್ಷಣದ ಬೆಳಕಿನ ಹೊಳಹುಗಳು ಬದುಕಿನಲ್ಲಿ ಪರಿಪೂರ್ಣವಾಗಿರಬೇಕು. ಜೀವನವು ಕ್ಲಿಷ್ಟಕರವಾಗಿದ್ದರೂ ವಿದ್ಯಾರ್ಥಿಗಳು ಅತ್ಯುನ್ನತ ಧ್ಯೇಯೋದ್ದೇಶ ಮತ್ತು ದೂರದೃಷ್ಟಿಗಳನ್ನು ಇಟ್ಟುಕೊಂಡು ಶಿಕ್ಷಣ ಪಡೆಯಬೇಕು. ಅಂದಿನ ಪಾಠ ಅಂದೇ ಓದಿಕೊಳ್ಳಬೇಕು. ಕೌಶಲಗಳನ್ನು ಬೆಳೆಸಿಕೊಂಡು, ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿ.ಡಿ. ಯಳಮಲಿ, ‘ವಿದ್ಯಾರ್ಥಿಗಳಿಗೆ ಶಿಕ್ಷಣವು ಜೀವನದ ಅಗತ್ಯಗಳನ್ನು ಪೂರೈಸುತ್ತದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಲ್.ವಿ. ದೇಸಾಯಿ, ‘‌ವಿದ್ಯಾರ್ಥಿಗಳು ಜವಾಬ್ದಾರಿ, ಶಿಸ್ತು, ಬದ್ಧತೆ ಮತ್ತು ಮಾನವೀಯ ಗುಣಗಳನ್ನು ಹೊಂದಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು’ ಎಂದು ಹೇಳಿದರು.

2019–20ನೇ ಸಾಲಿನಲ್ಲಿ ಕಾಲೇಜಿನ ಆದರ್ಶ ವಿದ್ಯಾರ್ಥಿಯಾಗಿ ಪ್ರದ್ಯುಮ್ನ ಜೋಶಿ, ಆದರ್ಶ ವಿದ್ಯಾರ್ಥಿನಿಯಾಗಿ ಅನಿಕಾ ನಾಯಕ ಅವರಿಗೆ ಪ್ರಶಸ್ತಿ ಫಲಕ ನೀಡಲಾಯಿತು.

ಪ್ರಾಚಾರ್ಯ ಪ್ರೊ.ಎಸ್.ಜಿ. ನಂಜಪ್ಪನವರ ಸ್ವಾಗತಿಸಿದರು. ಜ್ಯೋತಿ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು. ಎಸ್.ಎಲ್. ಪಾಟೀಲ ವಂದಿಸಿದರು. ಆರ್.ಬಿ. ಯರಗಟ್ಟಿ ಪರಿಚಯಿಸಿದರು.  ಅನಿಕಾ ನಾಯಕ, ಪ್ರದ್ಯುಮ್ನ ಜೋಶಿ ಅನಿಸಿಕೆ ವ್ಯಕ್ತಪಡಿಸಿದರು. ಮಹಮ್ಮದ ಕೈಫ್ ಮುಲ್ಲಾ ಹಾಗೂ ಸಾಕ್ಷಿ ನಿರೂಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು