ಬುಧವಾರ, ಮೇ 25, 2022
29 °C
ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲ್ಲುವುದಕ್ಕೆ ಬಿಡುವುದಿಲ್ಲ ಎಂದಿದ್ದ ರಮೇಶ ಜಾರಕಿಹೊಳಿ

ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿಗೆ ‘ಪಂಚ್‘ ಕೊಟ್ಟ ಲಕ್ಷ್ಮಿ ಹೆಬ್ಬಾಳಕರ–ಸತೀಶ್!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌‌ನ ಚನ್ನರಾಜ ಹಟ್ಟಿಹೊಳಿ ಅವರಿಗೆ ‘ಪ್ರಥಮ ಪ್ರಾಶಸ್ತ್ಯ’ದ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಅವರು, ಜಿದ್ದಾಜಿದ್ದಿಯಿಂದ ಕೂಡಿದ್ದ ಮತ್ತು ತ್ರಿಕೋನ‌ ಹಣಾಹಣಿಯಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ.

ಹೊಸ ಮುಖ, ಮರೈನ್ ಎಂಜಿನಿಯರಿಂಗ್ ಪದವೀಧರ ಹಟ್ಟಿಹೊಳಿ (37) ಅವರಿಗೆ ಮತದಾರರು ಸೈ ಎಂದಿದ್ದಾರೆ. ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಮ್ಮ ಕಿರಿಯ ಸಹೋದರ ಮೇಲ್ಮನೆಗೆ ಪ್ರವೇಶ ಪಡೆಯುವಂತೆ ನೋಡಿಕೊಂಡಿದ್ದಾರೆ. ಇದರೊಂದಿಗೆ ಆ ಕುಟುಂಬದ ಮತ್ತೊಂದು ಕುಡಿ ಚುನಾಯಿತ ಜನಪ್ರತಿನಿಧಿಯಾಗಿ ಆಯ್ಕೆ ಆದಂತಾಗಿದೆ.

ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಕೆಪಿಸಿಸಿ ‌ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಜಿಲ್ಲೆಯಲ್ಲಿ ತಮಗಿರುವ ರಾಜಕೀಯ ತಂತ್ರಗಾರಿಕೆಯ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮಗೆ ಪಕ್ಷ ಮೊದಲು ಎನ್ನುವುದನ್ನು ನಿರೂಪಿಸಿದ್ದಾರೆ. ಅಲ್ಲದೇ, ಪಕ್ಷದಲ್ಲಿನ‌ ತಮ್ಮ ಹಿಡಿತ ಹಾಗೂ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದ ಸಹೋದರರಾದ ರಮೇಶ ಜಾರಕಿಹೊಳಿ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಮತದಾರರು ಕುಟುಂಬ ರಾಜಕಾರಣಕ್ಕೆ ಮನ್ನಣೆಯ ಮುದ್ರೆ ಒತ್ತಿದ್ದಾರೆ.

ಹಟ್ಟಿಹೊಳಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದವರು. ಅವರ ಪರವಾಗಿ ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ಮಾಡಿದ್ದ ಸತೀಶ, ತಾವು ಲಿಂಗಾಯತ ಸಮಾಜದ ಪರವಾಗಿದ್ದೇನೆ ಎನ್ನುವ ಸಂದೇಶವನ್ನೂ ರವಾನಿಸಿದ್ದಾರೆ. ಇದರೊಂದಿಗೆ ಲಿಂಗಾಯತ ಸಮಾಜದ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ತಮ್ಮ ಭವಿಷ್ಯ ಗಟ್ಟಿಗೊಳಿಸಿಕೊಳ್ಳುವಲ್ಲೂ ಯಶಸ್ವಿಯಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲ್ಲುವುದಕ್ಕೆ‌ ಬಿಡುವುದಿಲ್ಲ’ ಎಂಬ ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ, ಈ ಚುನಾವಣೆ ಫಲಿತಾಂಶವು ತೀವ್ರ ಮುಖಭಂಗ ಆಗುವಂತೆ ಮಾಡಿದೆ. ಲಕ್ಷ್ಮಿ - ಸತೀಶ ಜಾರಕಿಹೊಳಿ‌ ಪ್ರವಾಸ ಮಾಡಿ, ಕಾರ್ಯತಂತ್ರದ ರೂಪಿಸಿದ್ದರಿಂದಾಗಿ ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿ ಜೋಡಿ ಮಂಕಾಗಿದೆ. ತಮ್ಮ ಪಕ್ಷದ ಅಭ್ಯರ್ಥಿ ಕವಟಗಿಮಠ ಅವರನ್ನು ಮೊದಲ ಪ್ರಾಶಸ್ತ್ಯದ ಮತಗಳಿಂದ ‌ಗೆಲ್ಲಿಸಿಕೊಳ್ಳುವುದು ಅವರಿಂದ ಸಾಧ್ಯವಾಗಿಲ್ಲ. ಜಾರಕಿಹೊಳಿ ಸಹೋದರರ ಫೈಟ್‌ನಲ್ಲಿ ಸತೀಶ ಕೈಮೇಲಾಗಿದೆ.

ದ್ವಿಸದಸ್ಯ ಕ್ಷೇತ್ರವಾದರೂ ಸತೀಶ ಜಾರಕಿಹೊಳಿ ಸಲಹೆಯಂತೆ ಒಬ್ಬ ಅಭ್ಯರ್ಥಿಯನ್ನು ಮಾತ್ರವೇ ಕಣಕ್ಕಿಳಿಸುವ ತಂತ್ರವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿತ್ತು. ಈ ಪ್ರಯೋಗದಲ್ಲಿ ಯಶಸ್ಸನ್ನೂ ಆ ಪಕ್ಷ ಕಂಡಿದೆ. ಶಕ್ತಿಗಳೆಲ್ಲವೂ ಒಗ್ಗೂಡಿದ್ದು ಕಾಂಗ್ರೆಸ್‌ನ ಕೈಹಿಡಿದಿದೆ. ನಾಯಕರೆಲ್ಲರೂ ಒಮ್ಮತದಿಂದ ಕಾರ್ಯನಿರ್ವಹಿಸಿ ಅಭ್ಯರ್ಥಿಯನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾಗುವ  ಮೂಲಕ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಗಟ್ಟಿಯಾಗಿದೆ ಎನ್ನುವುದನ್ನೂ ನಿರೂಪಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಗೆ ಬಂದು ಪ್ರಚಾರ ಮಾಡಿದ ನಂತರ ಕಾಂಗ್ರೆಸ್‌ನ ಗೆಲುವಿ ಹಾದಿ ಸುಗಮವಾಯಿತು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಲಿಂಗಾಯತ ಸಮಾಜದ ಕಾರ್ಡ್ ಕೂಡ ಚನ್ನರಾಜ ಕೈಹಿಡಿದಿದೆ. ಆಡಳಿತಾರೂಢ‌ ಬಿಜೆಪಿಗೆ ಒಳಹೊಡೆತ‌ ಬಿದ್ದಿರುವುದು ಸ್ಪಷ್ಟವಾಗಿದ್ದು, ಆ ಪಕ್ಷ ಭಾರಿ ಮುಖಭಂಗವನ್ನೂ ಅನುಭವಿಸಿದೆ.

ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇಲ್ಲಿಗೆ ಬಂದು ಪಕ್ಷದ ನಾಯಕರೊಂದಿಗೆ‌ ಒನ್–ಟು–ಒನ್ ಮಾತುಕತೆ ನಡೆಸಿದ್ದರು. ‘ನಮ್ಮ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಆಯ್ಕೆ ಆಗುವಂತೆ ನೋಡಿಕೊಳ್ಳಬೇಕು. ಪಕ್ಷಕ್ಕೆ ಮುಜುಗರ ಆಗದಂತೆ ನೋಡಿಕೊಳ್ಳಬೇಕು’ ಎಂದು ಖಡಕ್ ಆಗಿ ತಾಕೀತು ಮಾಡಿದ್ದರು. ಆದರೆ, ಇದ್ಯಾವುದೂ ಅಭ್ಯರ್ಥಿ ಕವಟಗಿಮಠ ಅವರ ಕೈಹಿಡಿದಿಲ್ಲ. ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆಯುವುದು ಅವರಿಗೆ ಸಾಧ್ಯವಾಗಿಲ್ಲ.

ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಬರೋಬ್ಬರಿ 13 ಮಂದಿ ಶಾಸಕರು ಬಿಜೆಪಿಯವರೇ ಇದ್ದಾರೆ. ಮೂವರು ಸಂಸದರು ಆ ಪಕ್ಷದವರೇ ಆಗಿದ್ದಾರೆ. ಸ್ವತಃ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನಸ್ವರಾಜ್ ಸಮಾವೇಶ ನಡೆಸಿ ಪ್ರಚಾರ ಮಾಡಿದ್ದರು. ಗ್ರಾಮ ಪಂಚಾಯಿತಿಗಳಲ್ಲಿ ಗೆದ್ದಿರುವ ಅತಿ ಹೆಚ್ಚಿನ ಸದಸ್ಯರು ಪಕ್ಷದ ಬೆಂಬಲಿಗರು ಎಂದು ಬಿಜೆಪಿಯವರು ‘ಲೆಕ್ಕ’ ಕೊಟ್ಟಿದ್ದರು. ಅವರನ್ನು ನಂಬಿಕೊಂಡಿದ್ದರು.

ಇದನ್ನೂ ಓದಿ: ಪರಿಷತ್‌ ಚುನಾವಣೆ ಫಲಿತಾಂಶ 2021: ಸೋತ ಪ್ರಮುಖರ ವಿವರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು