ಸೋಮವಾರ, ಆಗಸ್ಟ್ 15, 2022
21 °C
ವಿಶ್ವ ಅಂಗವಿಕಲರ ದಿನ ಡಿ.3ರಂದು

ಹೂವಿನೊಂದಿಗೆ ವಿಕಲತೆ ಮರೆತ ‘ಶಬಾನಾ’

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ಅಂಗವಿಕಲರಾದರೂ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಬದುಕು ರೂಪಿಸಿಕೊಳ್ಳಬಹುದು ಎನ್ನುವುದಕ್ಕೆ ಇಲ್ಲಿನ ಲಕ್ಷ್ಮಿ ನಗರದ ಶಬಾನಾ ಇಸ್ಮಾಯಿಲ್‌ ನಗಾರಿ ಉತ್ತಮ ಉದಾಹರಣೆಯಾಗಿದ್ದಾರೆ.

ನಿತ್ಯ ಹೂಮಾಲೆ ಮಾಡುವ ಕಾಯಕದಲ್ಲಿ ತೊಡಗಿ ಸ್ವಾವಲಂಬಿಯಾಗುವ ಮೂಲಕ ವೈಕಲ್ಯವನ್ನು ಮರೆತಿದ್ದಾರೆ. ಐದು ವರ್ಷದ ಬಾಲಕಿ ಇದ್ದಾಗ ಎಡಗಾಲಿಗೆ ಪೋಲಿಯೊ ಬಾಧಿಸಿದ್ದರ ಪರಿಣಾಮ ಎಡಗಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತ್ತು. ಮಗಳಿಗೆ ಬಂದೊದಗಿದ ವೈಕಲ್ಯದಿಂದ ತಂದೆ–ತಾಯಿ ವಿಚಲಿತರಾಗದೆ ಬಂದಿರುವ ಕಷ್ಟವನ್ನು ಎದುರಿಸೋಣ ಎಂದು ಶಬಾನಾಳನ್ನು ಶಾಲೆಗೆ ಕಳುಹಿಸಿದರು.

ಕಲಿಯುವ ಆಸಕ್ತಿ ಹೊಂದಿದ್ದ ಶಾಬಾನಾ ಕಷ್ಟಪಟ್ಟು ಶಾಲೆ ಕಟ್ಟೆ ಹತ್ತಿ ಪಿಯುಸಿವರೆಗೆ ಶಿಕ್ಷಣ ಮುಗಿಸಿದ್ದಾರೆ. ಐದು ವರ್ಷಗಳಿಂದ ಹೂಮಾಲೆ ಮಾಡುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ಹೂಮಾಲೆ ಮಾರುವವರು ಹೂವು ಮತ್ತು ದಾರ ಕೊಟ್ಟು ಕಟ್ಟಿಸಿಕೊಳ್ಳುತ್ತಾರೆ. ಒಂದು ಹೂಮಾಲೆಗೆ ₹2 ಕೊಡುತ್ತಾರೆ. ನಿತ್ಯ 150ರಿಂದ 200ವರೆಗೆ ಹೂಮಾಲೆ ಕಟ್ಟಿಕೊಟ್ಟು ₹300ರಿಂದ 400ರವರೆಗೆ ಗಳಿಕೆ ಮಾಡುತ್ತಾರೆ ಶಬಾನಾ.

‘ಕೆಲವು ವರ್ಷಗಳ ಹಿಂದೆ ನಾಲ್ಕಾರು ಹುಡುಗಿಯರನ್ನು ಸೇರಿಸಿಕೊಂಡು ಪ್ರತಿ ದಿನ 300ರಿಂದ 400 ಮಾಲೆ ಕಟ್ಟಿಕೊಡುತ್ತಿದ್ದೆ’ ಎನ್ನುತ್ತಾರೆ ಶಬಾನಾ.

ಮನೆಯೆಲ್ಲಾ ತುಂಬಿಕೊಂಡಿರುವ ಸೇವಂತಿಗೆ, ಚೆಂಡು, ಕನಕಾಂಬರ, ಮಲ್ಲಿಗೆ ಹೂವುಗಳೇ ನಿತ್ಯ ಸಂಗಾತಿಗಳಾಗಿ ಶಬಾನಾಳ ಬದುಕಿಗೆ ಚೈತನ್ಯ ನೀಡಿದೆ. ಪೂಜೆ, ಉತ್ಸ, ಮದುವೆ, ಸಭೆ, ಸಮಾರಂಭಗಳಿಗೆ ಬಳಸುವ ಹೂಮಾಲೆಗಳ ಹಿಂದೆ ಶಬಾನಾಳಂತಹ ವಿಕಲಚೇತನರ ಶ್ರಮದ ಕೈಗಳು ಕೆಲಸ ಮಾಡುತ್ತವೆ  ಎನ್ನುವುದು ವಿಶೇಷ. ತ್ರಿಚಕ್ರವಾಹನ ಕೋರಿ ಪುರಸಭೆಗೆ ಅರ್ಜಿ ಹಾಕಿದ್ದು, ಅದರ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ ಶಬಾನಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು