ಮಂಗಳವಾರ, ಜನವರಿ 18, 2022
27 °C

ದೇವದಾಸಿ ಪದ್ಧತಿ ನಿವಾರಣೆಗೆ ಪಣ ತೊಡಿ- ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ‘ದೇವದಾಸಿ ಪದ್ಧತಿ ನಿವಾರಣೆಗೆ ಎಲ್ಲರೂ ಪಣ ತೊಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಸತೀಶ ನಗರದಲ್ಲಿ ‘ಶಕ್ತಿ’ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಏಡ್ಸ್ ಸೋಂಕಿತರನ್ನು ಸಾಮಾಜಿಕವಾಗಿ ಕೀಳಾಗಿ ಕಾಣುವ ಪ್ರವೃತ್ತಿ ಎಲ್ಲೆಡೆ ಇರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ’ ಎಂದು ವಿಷಾದಿಸಿದರು.

‘ಏಡ್ಸ್ ಸೋಂಕಿತ ಮಹಿಳೆಯರು ಒಂದೆಡೆ ಸೇರಿ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲು ವ್ಯವಸ್ಥಿತ ಕಟ್ಟಡವನ್ನು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರ ನಿಧಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌, ‘ಛತ್ತೀಸಗಡ ರಾಜ್ಯದಲ್ಲಿ 15 ವರ್ಷದಲ್ಲಿ ಒಟ್ಟು 11ಸಾವಿರ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. ಜಾರ್ಖಂಡ್‌ನಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ಆದ್ದರಿಂದ ಮಹಿಳೆಯರು ಈಗಿನ ಪರಿಸ್ಥಿತಿಯಲ್ಲಿ ಅತ್ಯಂತ ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಸಾವಿತ್ರಿಬಾಯಿ ಫುಲೆ ಅವರು ಮಹಾರಾಷ್ಟ್ರದ ಪುಣೆಯಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಲು ನಿರ್ಧರಿಸಿದಾಗ, ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳು ಕೇಳಿಬಂದವು. ಆದರೆ, ಅವರು ಆ ಆರೋಪ ಮತ್ತು ದಬ್ಬಾಳಿಕೆ ಪ್ರವೃತ್ತಿಗೆ ಹೆದರದೆ ಮುನ್ನುಗ್ಗಿ ಮಹಿಳೆಯರಿಗೆ ಶಿಕ್ಷಣ ನೀಡಿದರು. ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ’ ಎಂದು ಸ್ಮರಿಸಿದರು.

‘ಬಿಜೆಪಿ ಸರ್ಕಾರವು ಜನರ ಕ್ಷೇಮಗಳತ್ತ ಚಿಂತಿಸದೆ, ವಾಸ್ತವಗಳಿಂದ ಬೇರೆಡೆ ಸೆಳೆಯುತ್ತಿದೆ’ ಎಂದು ಆರೋಪಿಸಿದರು.

‘ಕೋಲ್ಕತ್ತಾದಲ್ಲಿ 27ಸಾವಿರ ಜನರಿಗೆ ಉದ್ಯೋಗ ನೀಡುತ್ತಿದ್ದ ಕ್ರೈಸ್ತ ಮಿಷನರಿ ಮೇಲೆ ಕೇಂದ್ರ ಸರ್ಕಾರ ಐಟಿ ದಾಳಿ ನಡೆಸಿ, ಅದರ ಚಟುವಟಿಕೆಗಳನ್ನು ನಿಗ್ರಹಿಸುತ್ತಿದೆ. ರಾಜ್ಯದಲ್ಲೂ ಮತಾಂತರ ನಿಷೇ ಕಾಯ್ಕೆ ಜಾರಿಗೊಳಿಸಿ, ಕ್ರೈಸ್ತ ಸಮುದಾಯವನ್ನು ಗುರಿಪಡಿಸಲು ಮುಂದಾಗಿದೆ’ ಎಂದು ದೂರಿದರು.

ಮುಖಂಡ ಆರ್.ಎಂ. ಪಾಟೀಲ, ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಹೊಸಮನಿ, ಸಂಶೋಧಕಿ ಡಾ.ಲೀಲಾ ಸಂಪಗಿ ಇದ್ದರು.

ಜಯರಾಜ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು