ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಂಟದಾರ್ಯ ಮಠಕ್ಕೆ ಸಮರ್ಥರು ಸಿಗುವವರೆಗೆ ಜವಾಬ್ದಾರಿ ನಿರ್ವಹಣೆ: ಸಿದ್ಧರಾಮ ಶ್ರೀ

ತೋಂಟದಾರ್ಯ ಮಠದ 20ನೇ ಪೀಠಾಧಿಪತಿ ಹೇಳಿಕೆ
Last Updated 23 ಅಕ್ಟೋಬರ್ 2018, 15:19 IST
ಅಕ್ಷರ ಗಾತ್ರ

ಬೆಳಗಾವಿ: ‘ವಿವೇಚನಾಶೀಲ ಮಠಾಧಿಪತಿಯಾಗಿ, ಸಂದಿಗ್ಧ ಪರಿಸ್ಥಿತಿಯಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಪೀಠಾಧಿಪತಿಯಾಗಲು ಒಪ್ಪಿಕೊಂಡಿದ್ದೇನೆ. ಸಮರ್ಥ ವ್ಯಕ್ತಿ ಸಿಗುವವರೆಗೆ ಮಾತ್ರವೇ ನಿರ್ವಹಿಸುತ್ತೇನೆ’ ಎಂದು ಗದಗದ ತೋಂಟದಾರ್ಯ ಮಠದ 20ನೇ ಪೀಠಾಧಿಪತಿ ಸಿದ್ಧರಾಮ ಸ್ವಾಮೀಜಿ ಇಲ್ಲಿ ತಿಳಿಸಿದರು.

ನಾಗನೂರ ರುದ್ರಾಕ್ಷಿಮಠದಿಂದ ಮಂಗಳವಾರ ಆಯೋಜಿಸಿದ್ದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಕೆಲವರ ಕೈಗೆ ಮಠಗಳು ಸಿಕ್ಕರೆ ಹಾಳಾಗುತ್ತವೆ. ಅದಕ್ಕೆ ಅವಕಾಶ ಕೊಡಬಾರದೆಂದು ಸಮ್ಮತಿಸಿದ್ದೇನೆ. ಮಠ ಉಳಿಯುವಂತೆ ಮಾಡಬೇಕಾಗಿರುವುದರಿಂದ ಒಪ್ಪಿದ್ದೇನೆ. ಬಹಳಷ್ಟು ಸ್ವಾಮೀಜಿಗಳು ಇದ್ದರೂ ನನ್ನನ್ನೇ ಆಯ್ಕೆ ಮಾಡಿದ ಸ್ವಾಮೀಜಿ ಭರವಸೆ ಹುಸಿಯಾಗದಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಠದ ಪರಂಪರೆ ಮುಂದುವರಿಸುವೆ’ ಎಂದು ಹೇಳಿದರು.

ಹೊರಬರಲು

‘ಶ್ರೀಗಳ ಆಶಯಕ್ಕೆ ತಕ್ಕಂತೆ ಕೆಲಸ ಮಾಡಿ ಯೋಗ್ಯ ವ್ಯಕ್ತಿಗಳಿಗೆ ಅಧಿಕಾರ ಕೊಟ್ಟು ಹೊರಬರಲು ನಿರ್ಧರಿಸಿದ್ದೇನೆ. ಅವರು ಮಾಡಿದ ಸೇವಾ ಕಾರ್ಯ ಮುಂದುವರಿಸಲು, ಪರಿಸ್ಥಿತಿಗೆ ಒಳಗಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಅಧಿಕಾರಕ್ಕಾಗಿ; ದೊಡ್ಡ ಮಠದ ಆಸೆಗಾಗಿ ಅಲ್ಲಿಗೆ ಹೋಗುತ್ತಿಲ್ಲ. ಈ ವಯಸ್ಸಿನಲ್ಲಿ ನನಗ್ಯಾವ ಆಸೆ? ಹಾಗೆ ನೋಡಿದರೆ ರುದ್ರಾಕ್ಷಿಮಠಕ್ಕೂ ಆ ಮಠಕ್ಕೂ ವ್ಯತ್ಯಾಸವೇನಿಲ್ಲ. ಈ ಮಠದಿಂದಲೂ ಬಿಡುಗಡೆ ಹೊಂದಲು ಬಯಸಿದ್ದವನು ನಾನು. ಹೀಗಿರುವಾಗ ಸಮಾಜದವರು ತಮ್ಮ ಮೂಗಿನ ನೇರಕ್ಕೆ ಏನೇನೋ ಚರ್ಚಿಸುವುದು ಸರಿಯಲ್ಲ’ ಎಂದರು.

‘ತೋಂಟದ ಶ್ರೀಗಳು, ಬಸವ ತತ್ವಕ್ಕೆ ನಿಷ್ಠರಾಗಿದ್ದರು. ಅವರ ಸೇವಾ ಕಾರ್ಯ ಸುವರ್ಣಾಕ್ಷರಗಳಲ್ಲಿ ಬರೆದು ಇಡುವಂಥದು. ಕಲೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರ ಸಂರಕ್ಷಿಸುವ ಜವಾಬ್ದಾರಿ ಮಠಗಳದು ಎಂದು ಭಾವಿಸಿದ್ದರು; ಪ್ರೋತ್ಸಾಹಿಸಿದರು. 500 ಪುಸ್ತಕಗಳನ್ನು ಪ್ರಕಟಿಸಿ, ಯಾವುದೇ ವಿಶ್ವವಿದ್ಯಾಲಯವೂ ಮಾಡದಂಥ ಕೆಲಸ ನಿರ್ವಹಿಸಿದ್ದಾರೆ’ ಎಂದು ಸ್ಮರಿಸಿದರು.

ಲೇಖನದಿಂದ

‘33 ವರ್ಷಗಳ ಹಿಂದೆ ನಾನು ಬರೆದಿದ್ದ ಲೇಖನದಿಂದ ಪ್ರಭಾವಿತರಾಗಿ ಅವರ ಬಳಿಗೆ ಕರೆಸಿಕೊಂಡು ಚರ್ಚಿಸಿದ್ದರು; ನಂತರ ಪ್ರೋತ್ಸಾಹಿಸುತ್ತಿದ್ದರು. ಓದಲು ಪುಸ್ತಕಗಳನ್ನು ಕೂಡ ಕೊಡುತ್ತಿದ್ದರು. ಹಲವು ಮಠಗಳಿಗೆ ಮಠಾಧೀಶರನ್ನಾಗಿ ಮಾಡಲು ಬಹಳ ಯತ್ನಿಸಿದ್ದರು. ನಾನು ಸ್ವತಂತ್ರ ಮನೋಭಾವ ಹೊಂದಿದ್ದರಿಂದ ಹಿಂಜರಿಯುತ್ತಿದ್ದೆ. ಕೊನೆಗೆ ನಾಗನೂರ ರುದ್ರಾಕ್ಷಿ ಮಠಕ್ಕೆ ಉತ್ತರಾಧಿಕಾರಿಯಾಗಿ ಮಾಡಿದರು. ಅವರು ಕೊಟ್ಟ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ ಸಮಾಧಾನವಿದೆ. ಸಮಾಜದ ಋಣ ತೀರಿಸುವ ಕೆಲಸ ಮಾಡಿದ್ದೇನೆ’ ಎಂದು ತಿಳಿಸಿದರು.

‘ಲಿಂಗಾಯತ ಪಾರಿಭಾಷಿಕ ಪದಕೋಶ ಸಿದ್ಧಪಡಿಸಬೇಕು. ಇದಕ್ಕಾಗಿ ಮಠದ ಕೆಲಸಗಳಿಂದ ಮುಕ್ತಿ ಪಡೆಯಬೇಕು ಎಂದು ನಿರ್ಧರಿಸಿದ್ದೆ. ಬರವಣಿಗೆಯಲ್ಲಿ ತೊಡಗಬೇಕು ಎನ್ನುವ ಉದ್ದೇಶವಿತ್ತು. ಇದನ್ನು ಸಿದ್ಧಲಿಂಗ ಶ್ರೀಗಳ ಗಮನಕ್ಕೂ ತಂದಿದ್ದೆ’ ಎಂದರು.

‘ತೋಂಟದಾರ್ಯ ಮಠದಲ್ಲಿ ಸ್ವಲ್ಪ ದಿನ ನಿರ್ವಹಿಸಿ, ಎಲ್ಲವೂ ಸುಸ್ಥಿತಿಗೆ ಬಂದ ನಂತರ ಬೇರೆಯವರಿಗೆ ಬಿಟ್ಟು ಕೊಡುವ ಉದ್ದೇಶವಿದೆ. ಮೆರೆಯಲು ಹೋಗುತ್ತಿಲ್ಲ. ವೈಯಕ್ತಿಕ ಹಿತಕ್ಕಿಂತ ಸಮಾಜದ ಹಿತ ಮುಖ್ಯ ಎನ್ನುವ ಕಾರಣಕ್ಕೆ, ಆ ಮಠಕ್ಕೆ ಮೂರ್ತ ಸ್ವರೂಪ ನೀಡಬೇಕೆಂದು ಹೋಗುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಸಾಹಿತಿ ರಾಮಕೃಷ್ಣ ಮರಾಠೆ ಮಾತನಾಡಿ, ‘ಸ್ವಾಮೀಜಿಗಳು ಹೇಗಿರಬೇಕು ಎನ್ನುವುದಕ್ಕೆ ಸಿದ್ಧಲಿಂಗ ಶ್ರೀ ಉದಾಹರಣೆ ಆಗಿದ್ದರು. ನುಡಿದಂತೆಯೇ ನಡೆದರು. ಭಾಷೆ, ಸಂಸ್ಕೃತಿಗೆ ಧಕ್ಕೆಯಾದಾಗ ಪ್ರತಿಭಟಿಸಿದರು. ರಾಜಕಾರಣಿಗಳನ್ನೂ ಎದುರು ಹಾಕಿಕೊಂಡಿದ್ದರು. ಶ್ರೀಮದ್ ಗಾಂಭೀರ್ಯದ ವ್ಯಕ್ತಿತ್ವ ಅವರದಾಗಿತ್ತು. ಸಮರ್ಥ ಗುರುವಿಗೆ ಸಮರ್ಥ ಉತ್ತರಾಧಿಕಾರಿ ಸಿಕ್ಕಿದ್ದಾರೆ’ ಎಂದರು.

ಡಾ.ಎಚ್.ಬಿ. ರಾಜಶೇಖರ, ಸಾಹಿತಿಗಳಾದ ಬಿ.ಎಸ್. ಗವಿಮಠ, ಬಿ.ವಿ.‌ಕಟ್ಟಿ, ಶರಣೆ ವಾಗ್ದೇವಿ ತಾಯಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT