ಶಂಕರಾಚಾರ್ಯರ ತತ್ವ ಸಾಧನೆಗೆ ಪ್ರೇರಣೆ: ಶಾಸಕ ಅನಿಲ ಬೆನಕೆ

ಬೆಳಗಾವಿ: ‘ಶಂಕರಾಚಾರ್ಯರ ತತ್ವಗಳು ಸಾಧನೆಗೆ ಪ್ರೇರಣೆಯಾಗಿವೆ’ ಎಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಶುಕ್ರವಾರ ನಡೆದ ಶಂಕರಾಚಾರ್ಯರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ಯಶಸ್ಸು ಕೈಗೂಡಬೇಕಾದರೆ ಶ್ರಮದ ಜೊತೆಗೆ ದೇವರ ಆಶೀರ್ವಾದವೂ ಇರಬೇಕಾಗುತ್ತದೆ. ಅಂತಹ ದೇವರ ಸಾನ್ನಿಧ್ಯ ಕರುಣಿಸುವಲ್ಲಿ ಶಂಕರಾಚಾರ್ಯರ ಚಿಂತನೆ ಮತ್ತು ತತ್ವಗಳು ಪೂರಕವಾಗಿವೆ’ ಎಂದರು.
‘ಭಾರತದಾದ್ಯಂತ ಸುತ್ತಿದ ಸಂತ ಶಂಕರಾಚಾರ್ಯರು ಹಿಂದೂ ಧರ್ಮದ ಕುರಿತಾಗಿ ಜಾಗೃತಿ ಮೂಡಿಸುವ ಜೊತೆಗೆ ಶಾಂತಿ, ಸಹನೆ, ಸಂಘಟನೆ, ಮಾನವತ್ವದ ತತ್ವಗಳನ್ನು ಸಾರಿದ್ದಾರೆ’ ಎಂದು ಸ್ಮರಿಸಿದರು.
ಉಪನ್ಯಾಸ ನೀಡಿದ ಡಾ.ನರೇಂದ್ರ ನಾರಾಯಣ ವಾಳೇಕರ, ‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಚಾರ ಕೈಗೊಂಡ ಸಚ್ಚಿದಾನಂದ ಶಂಕರಾಚಾರ್ಯರು ಹಿಂದೂ ಧರ್ಮದ ಸಂಘಟನೆಗಾಗಿ ಅವಿರತ ಶ್ರಮಿಸಿದರು. ಅಂದು ಶಂಕರಾಚಾರ್ಯರು ಪರಿಚಯಿಸಿ, ಪಸರಿಸಿದ ಉದಾತ್ತ ತತ್ವಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ’ ಎಂದು ಹೇಳಿದರು.
‘ಹಿಂದೂ ಧರ್ಮದ ಜಾಗೃತಿ, ಸಂಘಟನೆಗಾಗಿ ಇಂದು ನಡೆಯುತ್ತಿರುವ ಅನೇಕ ಹೋರಾಟಗಳಿಗೆ ಶಂಕರಾಚಾರ್ಯರ ಚಿಂತನೆಗಳು ಮಾರ್ಗದರ್ಶಕವಾಗಿವೆ’ ಎಂದು ಅಭಿಪ್ರಾಯಪಟ್ಟರು.
ಮೆರವಣಿಗೆ:
ಕುಮಾರಗಂಧರ್ವ ರಂಗಮಂದಿರದಿಂದ ಬಸವರಾಜ ಕಟ್ಟೀಮನಿ ಸಭಾಭವನದವರೆಗೆ ಶಂಕರಾಚಾರ್ಯರ ಫೋಟೊ ಮೆರವಣಿಗೆ ನಡೆಸಲಾಯಿತು.
ಸಮಾಜದ ಮಹಿಳೆಯರು ಶಂಕರಾಚಾರ್ಯರ ಪುಟ್ಟ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ತೂಗುವ ಮೂಲಕ ಸಾಂಪ್ರದಾಯಿಕವಾಗಿ ನಾಮಕರಣ ಮಾಡಿದರು.
ಹೆಚ್ಚಿವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮುಖಂಡರಾದ ಗುರುರಾಜ ಜೋಶಿ, ಬಿ.ಆರ್. ಪಾಟೀಲ, ವೆಂಕಟೇಶ ಕುಲಕರ್ಣಿ, ಪದ್ಮಜಾ ಕುಲಕರ್ಣಿ, ಉಮಾ ದೇಶಪಾಂಡೆ ಉಪಸ್ಥಿತರಿದ್ದರು.
ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಶ್ರೀರಂಗ ಜೋಶಿ ಪ್ರಾರ್ಥನೆ, ನಾಡಗೀತೆ, ಭಕ್ತಿಗೀತೆ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ವಮಂಗಳಾ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.