ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ಮಾರುತ್ತಿದ್ದಾಕೆ ಮುಖ್ಯ ಶಿಕ್ಷಕಿ: ಬಡತನ ಮೆಟ್ಟಿ ಸಾಧಿಸಿದ ಮಾಲಾ ಸಣ್ಣಕ್ಕಿ

Last Updated 17 ಅಕ್ಟೋಬರ್ 2021, 4:56 IST
ಅಕ್ಷರ ಗಾತ್ರ

ಮೂಡಲಗಿ: ಬಾಲಕಿಯಾಗಿದ್ದಾಗ ಕೂಲಿ ಮಾಡಿಕೊಂಡು ಶಾಲೆ ಕಲಿತು ಕಷ್ಟಪಟ್ಟು ಶಿಕ್ಷಕಿಯಾದ ಮೂಡಲಗಿಯ ಮಾಲಾ ಬಾಳಪ್ಪ ಸಣ್ಣಕ್ಕಿ ಬೆಂಗಳೂರಿನ ಮಹದೇವಪುರದ ಸರ್ಕಾರಿ ಹೈಟೆಕ್‌ ಕನ್ನಡ, ಇಂಗ್ಲಿಷ್‌ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣದ ರೂವಾರಿಯಾಗಿದ್ದಾರೆ.

ಅಂದಾಜು ₹4 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟ ಹೊಂದಿರುವ ಶಾಲೆ ಇದಾಗಿದೆ. 1ರಿಂದ 7ನೇ ತರಗತಿವರೆಗಿನ ಮಹದೇವಪುರ ಸರ್ಕಾರಿ ಶಾಲೆಯು ಹಲವು ದಶಕಗಳಿಂದ 2 ಪ್ರತ್ಯೇಕ ಕಟ್ಟಡದಲ್ಲಿ ನಡೆಯುತ್ತಿದ್ದು, ಇದು ಮಕ್ಕಳಿಗೆ ಮತ್ತು ಸಿಬ್ಬಂದಿಗೆ ಕಷ್ಟವಾಗಿತ್ತು. 2016ರಲ್ಲಿ ಮಾಲಾ ಸಣ್ಣಕ್ಕಿ ಮುಖ್ಯ ಶಿಕ್ಷಕಿಯಾಗಿ ಬಂದ ಮೇಲೆ ಎರಡು ಕಡೆಯಲ್ಲಿ ನಡೆಯುತ್ತಿದ್ದ ಶಾಲೆಯನ್ನು ಒಂದೇ ಸ್ಥಳದಲ್ಲಿ ನಡೆಸಲು ಕನಸು ಕಂಡರು. ಅದಕ್ಕಾಗಿ ಶಿಕ್ಷಣ ಇಲಾಖೆ, ಸರ್ಕಾರ ಮತ್ತು ದೇಣಿಗೆಗಾಗಿ ಸಮುದಾಯವನ್ನು ಕೂಡಿಸಿಕೊಂಡು ಶ್ರಮಿಸಿದರು.

ಕ್ಯಾಪ್ಟಿಲ್‌ ಲ್ಯಾಂಡ್‌ ಹೋಪ್‌ ಪ್ರತಿಷ್ಠಾನ, ಸಿಂಗಪೂರ ಮೂಲದ ಖಾಸಗಿ ಕಂಪನಿಯೊಂದು ಶಾಲೆ ನಿರ್ಮಾಣಕ್ಕೆ ದೇಣಿಗೆ ನೀಡಲು ಮುಂದೆ ಬಂದಿತು. 2005ರಲ್ಲಿ ಶಾಲೆಗಾಗಿ 2.4 ಎಕರೆ ಜಾಗವನ್ನು ಸರ್ಕಾರ ನೀಡಿತ್ತು. ಕಟ್ಟಡ ನಿರ್ಮಿಸುವ ಸಂದರ್ಭ ಹಲವು ವಿಘ್ನಗಳು ಎದುರಾದವು. ಅವುಗಳನ್ನೆಲ್ಲ ಎದುರಿಸಿ ಮಾಲಾ ಅಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಅಣಿಗೊಳಿಸಿದರು. ಎರಡೂವರೆ ವರ್ಷದಲ್ಲಿ ಅತ್ಯಾಧುನಿಕ ಶಾಲೆ ನಿರ್ಮಾಣವಾಗಿದೆ. ಸ್ಮಾ‌ರ್ಟ್‌ ತರಗತಿ ಕೊಠಡಿಗಳು, ಗ್ರಂಥಾಲಯ, ಕ್ರೀಡಾ ಕೊಠಡಿ, ಚಿತ್ರಕಲಾ ಕೊಠಡಿ, ವಿಜ್ಞಾನ ಪ್ರಯೋಗಾಲಯ, ಶೌಚಾಲಯ, ಶುದ್ಧ ನೀರಿನ ಘಟಕ ಇವೆ.

‘ಕೂಲಿ ಮಾಡುತ್ತಿದ್ದ ಅನ್ಷಕರಸ್ಥ ತಂದೆ–ತಾಯಿ. ನನ್ನೊಂದಿಗೆ ಮೂವರು ಹೆಣ್ಣು ಮಕ್ಕಳು. ನಮಗೊಬ್ಬ ಸಹೋದರ. ಒಂದು ಹೊತ್ತು ಊಟಕ್ಕೂ ಕಷ್ಟ. ಕಿತ್ತುತಿನ್ನುವ ಬಡತನ. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಶಾಲೆ ಕಲಿಯುವ ಕನಸು ಕಂಡಿದ್ದೆ’ ಎಂದು ಮಾಲಾ ಅವರು ತಮ್ಮ ಬಾಲ್ಯ ನೆನೆದು ಕಣ್ಣೀರಾದರು.

‘ಬೆಳಿಗ್ಗೆ ನಾಲ್ಕಕ್ಕೆ ಎದ್ದು ರೈತರ ಕಬ್ಬಿನ ಪಡಗಳಿಗೆ ಹೋಗಿ, ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ. ಕೆಲಸಕ್ಕೆ ಪ್ರತಿಯಾಗಿ ಕೊಡುವ ಕಬ್ಬಿನ ವಾಡಿ (ಮೇವು) ಕಟ್ಟಿಕೊಂಡು ದನದ ಪೇಟೆಯಲ್ಲಿ ಮಾರಿ ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಹೋಗುತ್ತಿದ್ದೆ’ ಎಂದು ತಮ್ಮ ಕಷ್ಟದ ದಿನಗಳನ್ನು ಹಂಚಿಕೊಂಡರು.

ಪ್ರೌಢಶಾಲೆಯನ್ನು ಮೂಡಲಗಿ ಎಸ್‌ಎಸ್‌ಆರ್‌ ಪ್ರೌಢಶಾಲೆ ಮುಗಿಸಿ, ಎಸ್‌ಎಸ್‌ಆರ್‌ ಕಾಲೇಜಿನಲ್ಲಿ ಟಿಸಿಎಚ್‌ ಮಾಡಿ ಬೆಂಗಳೂರಿನ ಮಲ್ಲೇಶಪಾಳ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಪ್ರಾರಂಭಿಸಿದರು. ಮಲ್ಲೇಶಪಾಳ್ಯದಲ್ಲೂ ಜನರ ಸಹಕಾರ, ದೇಣಿಗೆಯಿಂದ ಶಾಲಾ ಕಟ್ಟಡ ನಿರ್ಮಿಸಿ ಜನರ ಪ್ರೀತಿ ಗಳಿಸಿದ್ದಾರೆ.

ಮಹದೇವಪುರ ಸರ್ಕಾರಿ ಶಾಲೆಯಲ್ಲಿ ಹಿಂದೆ 175 ಮಕ್ಕಳ ಸಂಖ್ಯೆ ಇತ್ತು. ಮಾಲಾ ಸಣ್ಣಕ್ಕಿ ಮುಖ್ಯಶಿಕ್ಷಕಿಯಾಗಿ ಬಂದ ನಂತರ, ಹೈಟೆಕ್‌ ಕಟ್ಟಡ ನಿರ್ಮಾಣವಾದ ಬಳಿ 600 ದಾಟಿದೆ. ಮಾಲಾ ಅವರ ಪ್ರಯತ್ನದಿಂದಾಗಿ ಅಲ್ಲಿನ ಮಕ್ಕಳು ಹೈಟೆಕ್‌ ಸೌಲಭ್ಯ ಪಡೆಯುವಂತಾಗಿದೆ. ದೇಣಿಗೆ ಕೊಡಲು ಜನರು ಮುಂದೆ ಬರುತ್ತಿದ್ದಾರೆ.

‘ಸಾಮಾನ್ಯ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎನ್ನುವುದು ನನ್ನ ಗುರಿಯಾಗಿದ್ದು, ಅದನ್ನು ಈಡೇರಿಸಿದ ತೃಪ್ತಿ ಇದೆ’ ಎನ್ನುತ್ತಾರೆ ಮಾಲಾ. ಸಂಪರ್ಕಕ್ಕೆ ಮೊ.ಸಂಖ್ಯೆ: 9731970992.

ಪ್ರೇರಣೆಯಾಗಿದೆ

ನಾನು ಎದುರಿಸಿದ ಕಷ್ಟಗಳು, ಬಡತನ, ಅವಮಾನಗಳೇ ನನ್ನಲ್ಲಿ ಆತ್ಮಸ್ಥೈರ್ಯ ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಿದೆ.

–ಮಾಲಾ ಸಣ್ಣಕ್ಕಿ, ಮುಖ್ಯ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT