ಮಂಗಳವಾರ, ನವೆಂಬರ್ 19, 2019
23 °C
ಗಜಾನನ ಮಂಗಸೂಳಿ ಹೇಳಿಕೆ

ಸಂತ್ರಸ್ತರಿಗೆ ರೋಟರಿಯಿಂದ ‘ಶೆಲ್ಟರ್‌ ಕಿಟ್‌’

Published:
Updated:
Prajavani

ಅಥಣಿ: ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಬೆಂಗಳೂರಿನ ರೋಟರಿ ಇಂಡಿಯಾ ಹ್ಯೂಮಾನಿಟಿ ಪ್ರತಿಷ್ಠಾನದಿಂದ ಸಂಸ್ಥೆಯಿಂದ ರೋಟರಿ ಕ್ಲಬ್‌ ಅಥಣಿ ಘಟಕದಿಂದ ಮನೆ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳುಳ್ಳ ‘ಶೆಲ್ಟರ್‌ ಕಿಟ್‌’ ವಿತರಣೆ ಸಮಾರಂಭ ಸೋಮವಾರ ಇಲ್ಲಿನ ಶಿವಣಗಿ ಕಲ್ಯಾಣಮಂಟಪದಲ್ಲಿ ನಡೆಯಿತು.

ರೋಟರಿ ಜಿಲ್ಲಾ ಘಟಕದ ಕಾರ್ಯದರ್ಶಿ ಗಜಾನನ ಮಂಗಸೂಳಿ ಮಾತನಾಡಿ, ‘ಹಿಂದೆಂದೂ ಕಂಡರಿಯದಂಥ ಪ್ರವಾಹ ಬಂದು ಅನೇಕರು ಬದುಕು ಕಳೆದುಕೊಂಡಿದ್ದಾರೆ. ಈ ಹಿಂದೆಯೂ ರೋಟರಿಯಿಂದ ಸಂತ್ರಸ್ತರ ಸಂಕಷ್ಟ ನಿವಾರಿಸಲು ನೂರು ಕಿಟ್‌ಗಳನ್ನು ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿದೇಶದಲ್ಲಿರುವ ರೋಟರಿ ಸದಸ್ಯರ ಸಹಾಯದಿಂದ ಮನೆ ಕಟ್ಟಿಸಿಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ನಮ್ಮ ವಿನಂತಿ ಮೇರೆಗೆ ಬೆಂಗಳೂರಿನ ರೋಟರಿ ಸಂಸ್ಥೆ ಸದಸ್ಯರು ತಲಾ ₹ 10ಸಾವಿರ ಮೌಲ್ಯದ 100 ಶೆಲ್ಟರ್‌ ಕಿಟ್‌ಗಳನ್ನು (₹ 10 ಲಕ್ಷ ವೆಚ್ಚ) ಕಳುಹಿಸಿಕೊಟ್ಟಿದ್ದಾರೆ. ಅವರನ್ನು ನಾವು ಸ್ಮರಿಸಬೇಕು. ಅರ್ಹರಿಗೆ ಸಹಾಯ ತಲುಪಲೆಂದು ಹಲವು ಗ್ರಾಮಗಳ ಹಿರಿಯರು ಹಾಗೂ ಸಂಸ್ಥೆಯ ಸದಸ್ಯರ ಸಹಕಾರದಿಂದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಅಥಣಿಯ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ‘ಸರ್ಕಾರ ಮಾಡಬೇಕಾದ ಕಾರ್ಯವನ್ನು ರೋಟರಿ ಮಾಡಿರುವುದು ಶ್ಲಾಘನೀಯವಾಗಿದೆ. ನೊಂದ ಜನರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ದೊರೆಯಲಿ’ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಅಥಣಿ ಘಟಕದ ಅಧ್ಯಕ್ಷ ಶ್ರೀಕಾಂತ ಅಥಣಿ ಮಾತನಾಡಿದರು. ಕಾರ್ಯದರ್ಶಿ ಸುರೇಶ ಬಳ್ಳೋಳ್ಳಿ, ಖಜಾಂಚಿ ಸಚಿನ ದೇಸಾಯಿ, ಶೇಖರ ಕೋಲಾರ, ಸಂತೋಷ ಬಮ್ಮಣ್ಣವರ, ಮೇಘರಾಜ ಪರಮಾರ, ಅರುಣ ಯಲಗುದ್ರಿ, ಬಾಹುಬಲಿ ಯಂಡೊಳ್ಳಿ, ಡಾ.ಅಮೃತ್ ಕುಲಕರ್ಣಿ, ಕಾಡಣ್ಣ ಜೈನ್ ಇದ್ದರು.

ಪ್ರತಿಕ್ರಿಯಿಸಿ (+)