ಕೆ-ಶಿಪ್ ಕಚೇರಿಗಳ ಸ್ಥಳಾಂತರ ಸರಿಯಲ್ಲ: ರಮೇಶ ಜಾರಕಿಹೊಳಿ

7

ಕೆ-ಶಿಪ್ ಕಚೇರಿಗಳ ಸ್ಥಳಾಂತರ ಸರಿಯಲ್ಲ: ರಮೇಶ ಜಾರಕಿಹೊಳಿ

Published:
Updated:

ಬೆಳಗಾವಿ: ಬೆಳಗಾವಿಯಲ್ಲಿದ್ದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆ-ಶಿಪ್) ವಿಭಾಗ ಹಾಗೂ ಉಪವಿಭಾಗ ಕಚೇರಿಗಳನ್ನು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹಾಸನಕ್ಕೆ ಸ್ಥಳಾಂತರಿಸಿರುವುದು ತಪ್ಪು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು‌.

ಹುಕ್ಕೇರಿ ತಾಲ್ಲೂಕಿನ ರಾಜಾ ಲಖಮಗೌಡ ಜಲಾಶಯ (ಹಿಡಕಲ್)ಕ್ಕೆ ಭಾನುವಾರ ಬಾಗಿನ ಅರ್ಪಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಕಚೇರಿಗಳನ್ನು ಸ್ಥಳಾಂತರಿಸುವ ವಿಷಯ ಮೂರು ತಿಂಗಳಿಂದಲೂ ಚರ್ಚೆಯಲ್ಲಿತ್ತು. ನಾವು ಅದನ್ನು ತಡೆದಿದ್ದೆವು. ಈಗ ಸ್ಥಳಾಂತರ ಮಾಡಲಾಗಿದೆ. ಅವುಗಳನ್ನು ಇಲ್ಲೇ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಶಾಸಕರೆಲ್ಲರೂ ಸೇರಿ ಒತ್ತಡ ಹೇರುತ್ತೇವೆ ಎಂದರು.

ರಾಜ್ಯದಲ್ಲಿ ಎಚ್‌.ಡಿ. ರೇವಣ್ಣ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎಂಬ ಬಿಜೆಪಿ ಮುಖಂಡರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಮಾಣವಚನ ಸ್ವೀಕರಿಸಿರುವವರು ಯಾರು? ಕುಮಾರಸ್ವಾಮಿಯೋ? ರೇವಣ್ಣ ಅವರೋ? ಎಂದು ಕೇಳಿದರು.

ವಾಲ್ಮೀಕಿ ಸಮಾಜಕ್ಕೆ ಇನ್ನೆರಡು ಸಚಿವ ಸ್ಥಾನ ಕೇಳುವುದಕ್ಕಾಗಿ ನವದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಲು ಹೋಗಿದ್ದೆ. ಅದರಲ್ಲಿ ರಹಸ್ಯ ಕಾರ್ಯಾಚರಣೆ ಏನಿಲ್ಲ. ಸಮಾಜದ ನಾಗೇಂದ್ರ,‌ ಪ್ರತಾಪ ಪಾಟೀಲ, ತುಕಾರಾಂ ಅಥವಾ ರಘುಮೂರ್ತಿ ಇದ್ದಾರೆ, ‌ಅವರಲ್ಲಿ ಇಬ್ಬರಿಗೆ ಅವಕಾಶ ಕೇಳಿದ್ದೇನೆ. ಅಲ್ಲದೇ ನಮ್ಮ ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಕೋರಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.

ಸಚಿವ ಸ್ಥಾನ ರಮೇಶಗೆ ಸಿಕ್ಕರೂ  ಒಂದೇ, ಸಹೋದರ ಸತೀಶಗೆ ಸಿಕ್ಕರೂ ಒಂದೇ. ಹೀಗಾಗಿ ಅವರಿಗೆ ಹುದ್ದೆ ಕೇಳಿಲ್ಲ ಎಂದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದರು.

ಅಖಂಡ ಕರ್ನಾಟಕಕ್ಕೆ ನಮ್ಮ ಬೆಂಬಲವಿದೆ. ಬಿಜೆಪಿ ಶಾಸಕ ಉಮೇಶ ಕತ್ತಿ ವಾದಕ್ಕೆ ವಿರೋಧವಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನ್ನುವವರು ಬಜೆಟ್ ಪುಸ್ತಕ ಓದಲಿ ಎಂದು ತಿರುಗೇಟು ನೀಡಿದರು.

ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡಲು ತಾಂತ್ರಿಕ ಅಡಚಣೆ ಇದೆ. ಇದನ್ನು ಬಗೆಹರಿಸಲು ಈ ಭಾಗದ ಶಾಸಕರೊಂದಿಗೆ ಚರ್ಚಿಸಲು ಶೀಘ್ರವೇ ಸಭೆ ನಡೆಸಲಾಗುವುದು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳಗಾವಿಯನ್ನು 2ನೇ ರಾಜಧಾನಿ ಮಾಡಬೇಕು ಎನ್ನುವುದಕ್ಕೆ ಸಂಪೂರ್ಣ ಬೆಂಬಲವಿದೆ ಎಂದರು.

ಶಾಸಕ ಉಮೇಶ ಕತ್ತಿ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ ಇದ್ದರು.


ಹಿಡಕಲ್ ಜಲಾಶಯದಲ್ಲಿ ಗಂಗಾಪೂಜೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !