ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಲ್ಲಿ ಭಾಷಾ ಕೌಶಲ ಬೆಳೆಸಿ’

‘ಸ್ಕಿಲ್ ಇನ್ ವಿಲೇಜ್’’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೋರೆ
Last Updated 23 ಸೆಪ್ಟೆಂಬರ್ 2021, 15:32 IST
ಅಕ್ಷರ ಗಾತ್ರ

ಬೆಳಗಾವಿ: ‘ಮಕ್ಕಳಲ್ಲಿ ಭಾಷಾ ಕೌಶಲ ಬೆಳೆಸುವ ಮೂಲಕ ಅವರ ಬೌದ್ಧಿಕ ಜ್ಞಾನ ಹಾಗೂ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಚಿಕ್ಕೋಡಿ ತಾಲ್ಲೂಕಿನ ಅಂಕಲಿಯ ಕೆ.ಎಲ್.ಇ. ಸಂಸ್ಥೆಯ ಎಸ್.ಸಿ. ಪಾಟೀಲ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾರದಾ ಕೋರೆ ಪ್ರೌಢಶಾಲೆಯಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಸ್ಕಿಲ್ ಇನ್ ವಿಲೇಜ್’ (ಹಳ್ಳಿಯಲ್ಲಿ ಕೌಶಲ) ಕಾರ್ಯಕ್ರಮಕ್ಕೆ ಸಸಿಗೆ ನೀರೆರೆದು ಚಾಲನೆ ನೀಡಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ಅಂಕಗಳ ಮಾನದಂಡ ಹೆಚ್ಚಿಸುವ ಬದಲಾಗಿ ಬೌದ್ಧಿಕ ಮಟ್ಟವನ್ನು ವೃದ್ಧಿಸುವ ಕೌಶಲಗಳನ್ನು ಹುಟ್ಟು ಹಾಕಬೇಕಾಗಿದೆ. ಇದರಲ್ಲಿ ಭಾಷೆಯ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳು ಭಾಷೆಯನ್ನು ಬಹುಬೇಗನೆ ಕಲಿಯುವ ಸಾಮರ್ಥ್ಯ ಪಡೆದಿದ್ದಾರೆ. ಅವರಿಗೆ ಹಲವು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸುವಂತೆ ರೂಪಿಸಬೇಕಾಗಿದೆ. ಅದರೊಂದಿಗೆ ವಿವಿಧ ರೀತಿಯ ಕೌಶಲಗಳನ್ನು ಪರಿಚಯಿಸುವ ಮೂಲಕ ಅವರ ಮನೋಸಾಮರ್ಥ್ಯ ಬಲಪಡಿಸಬೇಕಾಗಿದೆ’ ಎಂದರು.

‘ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ತರಬೇತಿಯು ವಿದ್ಯಾರ್ಥಿಗಳಲ್ಲಿ ಕೀಳರಿಮೆಯನ್ನು ಕಿತ್ತು ಹಾಕಿ ಋಣಾತ್ಮಕ ವಿಚಾರಗಳನ್ನು, ಕ್ರಿಯಾಶೀಲ ಮನೋಭಾವ ಮೂಡಿಸಲಿದೆ. ಈ ತರಬೇತಿಯ ಮೂಲಕ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯನ್ನು ಸರಾಗವಾಗಿ ಮಾತನಾಡಲು ಕಲಿಯಬಹುದು. ಆದ್ದರಿಂದ ಈ ಯೋಜನೆಯ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು’ ಎಂದು ಸಲಹೆ ನೀಡಿದರು.

ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಬಿ.ಎಚ್. ಅಂಬಿ, ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎ.ಕೆ. ಪಾಟೀಲ, ಪಿಯು ಕಾಲೇಜು ಪ್ರಾಚಾರ್ಯ ಆರ್.ಸಿ. ಪಾಟೀಲ, ಪ್ರೌಢಶಾಲೆಯ ಮುಖ್ಯಸ್ಥೆ ಜಯಶ್ರೀ ತಮಗೊಂಡ, ಸಿಬಿಎಸ್‌ಸಿ ಶಾಲೆಯ ಪ್ರಾಚಾರ್ಯೆ ಭಾರತಿ ಪಾಟೀಲ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT