ಬೆಳಗಾವಿಗೆ ಗಾಂಧಿ ಭೇಟಿ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆ ಬಿಡುಗಡೆಗೆ ಚಿಂತನೆ

7
ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆಚೀಟಿಗಳ ಪ್ರದರ್ಶನ

ಬೆಳಗಾವಿಗೆ ಗಾಂಧಿ ಭೇಟಿ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆ ಬಿಡುಗಡೆಗೆ ಚಿಂತನೆ

Published:
Updated:
Deccan Herald

ಬೆಳಗಾವಿ: ‘ಮಹಾತ್ಮ ಗಾಂಧೀಜಿಗೂ–ಬೆಳಗಾವಿಗೂ ಅವಿನಾಭಾವ ಸಂಬಂಧವಿದೆ. ನಗರ ಹಾಗೂ ತಾಲ್ಲೂಕಿನ ಹುದಲಿಗೆ ಭೇಟಿ ನೀಡಿದ್ದರು. ಹೀಗಾಗಿ, ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ 2 ವಿಶೇಷ ಲಕೋಟೆಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ’ ಎಂದು ಇಲ್ಲಿನ ಪ್ರಧಾನ ಅಂಚೆ ಕಚೇರಿಯ ಸೂಪರಿಂಟೆಂಡೆಂಟ್ ಎಸ್‌.ಡಿ. ಕುಲಕರ್ಣಿ ತಿಳಿಸಿದರು.

ಶುಕ್ರವಾರ ಆಯೋಜಿಸಿದ್ದ ಅಂಚೆಚೀಟಿಗಳ ಸಂಗ್ರಹಣೆ ಕುರಿತ ಕಾರ್ಯಕ್ರಮ ಹಾಗೂ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಲಕೋಟೆ ಸಿದ್ಧಪಡಿಸಲು ಆಸಕ್ತರು ಪ್ರಾಯೋಜಕತ್ವ ನೀಡಬಹುದು. ತಿಲಕವಾಡಿಯ ವೀರಸೌಧ ಹಾಗೂ ಹುದಲಿಯಲ್ಲಿ ಅವುಗಳ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಹೇಳಿದರು.

ಜಾಗದ ವ್ಯವಸ್ಥೆ

‘ಉತ್ತರ ಕರ್ನಾಟಕದಲ್ಲಿ ಬೆಳಗಾವಿಯಲ್ಲಿ ಮಾತ್ರವೇ ಇಲಾಖೆಯು ಅಂಚೆ ಚೀಟಿಗಳ ಸಂಗ್ರಹದ ಬ್ಯುರೊಗೆ ಅವಕಾಶ ನೀಡಿದೆ. ಆರ್‌ಎಂಎಸ್‌ ಕಚೇರಿ ಸ್ಥಳಾಂತರವಾದ ನಂತರ ಆ ಜಾಗದಲ್ಲಿ ಬ್ಯುರೊಗೆ ಸ್ಥಳಾವಕಾಶ ಒದಗಿಸಲಾಗುವುದು. ಇದಕ್ಕಾಗಿ ₹ 2 ಲಕ್ಷ ಅನುದಾನವೂ ಮಂಜೂರಾಗಿದೆ. ಈಗಾಗಲೇ ಪೀಠೋಪಕರಣಗಳ ಖರೀದಿಯೂ ನಡೆದಿದೆ. ಅಲ್ಲಿ ದೊಡ್ಡ ಸಭಾಂಗಣ ದೊರೆಯಲಿದೆ. ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುವುದು. ಇದಕ್ಕಾಗಿ ಅಂಚೆಚೀಟಿ ಸಂಗ್ರಾಹಕರ ಸಲಹೆ ಪಡೆಯಬಹುದು’ ಎಂದು ಮಾಹಿತಿ ನೀಡಿದರು.

‘2019ರಲ್ಲಿ ಜಿಲ್ಲಾಮಟ್ಟದ ಅಂಚೆ ಚೀಟಿಗಳ ಪ್ರದರ್ಶನವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುವುದಕ್ಕೆ ಉದ್ದೇಶಿಸಲಾಗಿದೆ’ ಎಂದು ಪ್ರಕಟಿಸಿದರು. ‘ಅಂಚೆ ಚೀಟಿಗಳನ್ನು ಸಂಗ್ರಹಿಸುವವರು ಇಲಾಖೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಹವ್ಯಾಸದಿಂದಾಗಿ ಹಲವು ಮಹತ್ವದ ಅಂಚೆ ಚೀಟಿಗಳನ್ನು ಇಂತಹ ಪ್ರದರ್ಶನಗಳಲ್ಲಿ ವೀಕ್ಷಿಸಬಹುದಾಗಿದೆ’ ಎಂದು ತಿಳಿಸಿದರು.

ಹವ್ಯಾಸಗಳ ರಾಜ

ಅಂಚೆ ಚೀಟಿಗಳ ಸಂಗ್ರಹಣೆ ಬ್ಯೂರೊದ ಪ್ರಭಾರಿ ಧರ್ಮೇಂದ್ರ ಜೈ ಮಾತನಾಡಿ, ‘ಅಂಚೆ ಚೀಟಿಗಳನ್ನು ಸಂಗ್ರಹಿಸುವುದು ಅಮೂಲ್ಯ ಹವ್ಯಾಸವಾಗಿದೆ. ದೇಶದ ಸಂಸ್ಕೃತಿ, ಕಲೆ, ನಾಯಕರು, ಮರ ಗಿಡಗಳು, ಪ್ರಾಣಿ–ಪಕ್ಷಿಗಳು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ವೈಜ್ಞಾನಿಕ ಅಭಿವೃದ್ಧಿ ಬಗ್ಗೆ ಪ್ರಮುಖ ಮಾಹಿತಿಗಳನ್ನು ಅಂಚೆ ಚೀಟಿಗಳಿಂದ ತಿಳಿದುಕೊಳ್ಳಬಹುದು. ಸಣ್ಣ ಅಂಚೆ ಚೀಟಿಯು ಮಹತ್ತರ ವಿಚಾರಗಳ ಭಂಡಾರವಾಗಿದೆ. ಇದನ್ನು ಹವ್ಯಾಸಗಳ ರಾಜ ಹಾಗೂ ರಾಜರ ಹವ್ಯಾಸ ಎಂದು ಕರೆಯುತ್ತಾರೆ’ ಎಂದು ವಿವರಿಸಿದರು.

‘ಅಂಚೆ ಕಚೇರಿಯಲ್ಲಿ ಫಿಲಾಟೆಲಿ (ಅಂಚೆ ಚೀಟಿಗಳ ಸಂಗ್ರಹಣೆ) ಠೇವಣಿ ಖಾತೆ ತೆರೆದವರಿಗೆ, ಹೊಸದಾಗಿ ಬಿಡುಗಡೆಯಾದ ಅಂಚೆ ಚೀಟಿಗಳನ್ನು ಕಳುಹಿಸಿಕೊಡಲಾಗುವುದು. ಮಾಹಿತಿಗೆ 2424897 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಅಂಚೆಚೀಟಿ ಸಂಗ್ರಾಹಕರ ಕ್ಲಬ್‌ ಅಧ್ಯಕ್ಷೆ ರಾಜೇಶ್ವರ ಸಂಬರಗಿಮಠ, ಕಾರ್ಯದರ್ಶಿ ಜಿ.ಡಿ. ಪ್ರಶಾಂತ್, ಪೋಸ್ಟ್‌ ಮಾಸ್ಟರ್‌ ಪಿ.ಎಸ್. ಮುಧೋಳ, ಹಿರಿಯ ಅಂಚೆ ಚೀಟಿ ಸಂಗ್ರಾಹಕ ಎಸ್‌.ಡಿ. ಚೌಗುಲೆ, ಎಎಸ್ಪಿಗಳಾದ ಎಂ.ಕೆ. ಕೊತ್ತಲ್, ರಾಜೀವಕುಮಾರ್ ಇದ್ದರು.

ಪಿಒ ಶ್ರೀನಿವಾಸ ಚವಾಣ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !