ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ: ಬೆಳಗಾವಿಗೆ 40ನೇ ರ‍್ಯಾಂಕ್!

ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅಸಮಾಧಾನ
Last Updated 5 ಜುಲೈ 2019, 12:10 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿ ಬೆಳಗಾವಿಯು ರಾಷ್ಟ್ರಮಟ್ಟದಲ್ಲಿ 40ನೇ ಹಾಗೂ ರಾಜ್ಯದಲ್ಲಿ 5ನೇ ಸ್ಥಾನದಲ್ಲಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಈ ವಿಷಯವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿ ಶುಕ್ರವಾರ ಸಭೆ ನಡೆಸಿದ ಅವರು, ‘ಮೊದಲನೇ ಹಂತದಲ್ಲಿಯೇ ಆಯ್ಕೆಯಾಗಿದ್ದರೂ ನಗರವು ಹಿಂದುಳಿದದ್ದೇಕೆ? ಇನ್ಮುಂದೆ ವಿಳಂಬವಾಗುವುದನ್ನು ಸಹಿಸಲಾಗದು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಕೆಲಸ ಚುರುಕುಗೊಳಿಸಬೇಕು’ ಎಂದು ಸೂಚಿಸಿದರು.

‘ಕೇಂದ್ರದ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯವು 5ನೇ ಸ್ಥಾನದಲ್ಲಿದೆ. ಕಾಮಗಾರಿಗಳನ್ನು ತ್ವರಿತಗೊಳಿಸಿ 3ನೇ ಸ್ಥಾನಕ್ಕೆ ಬರಲು ಕ್ರಮ ವಹಿಸಲಾಗಿದೆ. ಮಾರ್ಗಸೂಚಿಯಲ್ಲಿನ ತೊಡಕುಗಳಿಂದಾಗಿ ಎಲ್ಲ ರಾಜ್ಯಗಳಲ್ಲೂ ತೊಂದರೆಯಾಗಿದೆ. ಬೆಳಗಾವಿಯು ರಾಜ್ಯದ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದೆ. ಇದು ಸಾಲದು. ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದರು.

₹ 420 ಕೋಟಿ ಬಿಡುಗಡೆ:

‘ನಗರದಲ್ಲಿ 24X7 ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸಲು ₹ 420 ಕೋಟಿ ಅನುದಾನ ಬಿಡುಗಡೆಯಾಗಿದ್ದು, 3 ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಒಳಚರಂಡಿ ನಿರ್ಮಾಣ ಕಾಮಗಾರಿಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು. ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ₹ 125 ಕೋಟಿ‌ ವಿಶೇಷ ಅನುದಾನ ನೀಡಲಾಗುವುದು’ ಎಂದು ಹೇಳಿದರು.

‘ಪಾಲಿಕೆಯಲ್ಲಿ ಆದಾಯ ಹೆಚ್ಚಿಸಲು ಆಸ್ತಿಗಳ ಮರುಮೌಲ್ಯೀಕರಣ ಮಾಡಲಾಗುತ್ತಿದೆ. ಅನಧಿಕೃತವಾಗಿ ಕಟ್ಟಡ ಹಾಗೂ ಬಡಾವಣೆ ನಿರ್ಮಿಸಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ’ ಎಂದರು.

ಬಡ್ಡಿಯೇ ₹ 52 ಕೋಟಿ!:

‘ಸ್ಮಾರ್ಟ್ ಸಿಟಿ ಯೋಜನೆಯಡಿ ನಗರಕ್ಕೆ ಈವರೆಗೆ ₹ 995 ಕೋಟಿ ಅನುದಾನ ದೊರೆತಿದೆ. ಇದರಲ್ಲಿ ₹ 568 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ₹ 4 ಕೋಟಿ ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ. ₹ 52 ಕೋಟಿಯಷ್ಟು ಬಡ್ಡಿ ಬಂದಿದೆ. ನಮ್ಮಲ್ಲಿ ಮಾತ್ರವಲ್ಲ, ದೇಶದಾದ್ಯಂತ ಕಾಮಗಾರಿಗಳ ಅನುಷ್ಠಾನ ನಿಧಾನವಾಗಿ ನಡೆಯುತ್ತಿದೆ’ ಎಂದು ಸಮರ್ಥಿಸಿಕೊಂಡರು. ‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆಯಿಂದ ಪರಿಶೀಲನೆ ನಡೆಸಿ (3ನೇ ವ್ಯಕ್ತಿ ಪರಿಶೀಲನೆ) ವರದಿ ಪಡೆಯಲಾಗುವುದು’ ಎಂದು ತಿಳಿಸಿದರು.

‘ಅನ್ಯ ರಾಜ್ಯದ ಗುತ್ತಿಗೆದಾರರು 3-4 ಮಂದಿಗೆ ಉಪ ಗುತ್ತಿಗೆ ನೀಡುತ್ತಿರುವುದರಿಂದ ಅನುಷ್ಠಾನದಲ್ಲಿ ಸಮಸ್ಯೆ ಆಗುತ್ತಿದೆ. ₹ 30, ₹ 40 ಕೋಟಿ ಬದಲಿಗೆ ಸಣ್ಣ ಪ್ಯಾಕೇಜ್‌ಗಳನ್ನು ಮಾಡಿ ಸ್ಥಳೀಯರಿಗೆ ಕೊಟ್ಟರೆ ಕಾಮಗಾರಿ ಬೇಗ ಪೂರ್ಣಗೊಳ್ಳುತ್ತದೆ’ ಎಂದು ಅಭಯ ಪಾಟೀಲ ಸಲಹೆ ನೀಡಿದರು.

ಕಪ್ಪುಪಟ್ಟಿಗೆ ಸೇರಿಸಿ:

‘ವಿಳಂಬ ಮಾಡಿದವರು, ಕಳಪೆ ಕಾಮಗಾರಿ ನಡೆಸಿದವರನ್ನು ಹಾಗೂ ಉಪ ಗುತ್ತಿಗೆ ಕೊಟ್ಟ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ರಾಜ್ಯದ ಎಲ್ಲಿಯೂ ಅವರಿಗೆ ಕೆಲಸ ಸಿಗದಂತೆ ಮಾಡಬೇಕು’ ಎಂದು ಸಚಿವರು ಸೂಚಿಸಿದರು.

‘ಕೇವಲ 30 ಹಾಸಿಗೆಗಳ ಹೆರಿಗೆ ಆಸ್ಪತ್ರೆಯನ್ನು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೈಗೊಳ್ಳುವ ಅಗತ್ಯವೇನಿತ್ತು? ₹ 2.50 ಕೋಟಿಯ ಕೆಲಸ ಮಾಡಲು ನೀವೇ ಬೇಕಾ? ಪಾಲಿಕೆಯಿಂದಲೇ ಮಾಡಬಹುದಿತ್ತು. ಯಂತ್ರೋಪಕರಣಗಳನ್ನು ನೀವು ಕೊಡಿಸುವುದಿಲ್ಲವೆಂದರೆ ಅದರಿಂದ ಪ್ರಯೋಜನವೇನು? ಇಲ್ಲಿನ ಆಸ್ಪತ್ರೆಯನ್ನು ಮಾದರಿಯಾಗಿ ಮಾಡಬೇಕಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಯಂತ್ರೋಪಕರಣಗಳಿಲ್ಲ, ಸರಿಯಾದ ಸಿಬ್ಬಂದಿ ಇಲ್ಲ. ಹೀಗಿರುವಾಗ ಆರೋಗ್ಯ ಇಲಾಖೆಯವರು ಇಲ್ಲಿಗೆ ಹೇಗೆ ಕೊಡುತ್ತಾರೆ? ಬಹಳ ಹಣ ಪಡೆಯುವ ಅವಕಾಶವಿದ್ದರೂ ಸಣ್ಣ ಪ್ರಮಾಣದಲ್ಲಿ ಕಾಮಗಾರಿ ಕೈಗೊಂಡಿದ್ದು ಸರಿಯಲ್ಲ’ ಎಂದರು. ‘ಯಂತ್ರೋಪಕರಣಗಳ ಖರೀದಿಗೂ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಸಚಿವರ ಬಳಿಗೆ ನಿಯೋಗ:

‘ಬಸ್‌ ನಿಲ್ದಾಣಗಳನ್ನು ನಿಮಗಿಷ್ಟ ಬಂದಂತೆ ಮಾಡಬೇಡಿ. ಅಲ್ಲಿ ನಿಲ್ಲುವವರಿಗೆ ಬಿಸಿಲು ತಾಕದಂತೆ, ಮಳೆಗಾಲದಲ್ಲಿ ಅವರು ಒದ್ದೆಯಾಗದಂತೆ ವಿನ್ಯಾಸವಿರಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ದಂಡು ಮಂಡಳಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳಿಗೆ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಪಡೆದುಕೊಳ್ಳಲು ರಕ್ಷಣಾ ಸಚಿವರನ್ನು ಭೇಟಿಯಾಗಲು ಶೀಘ್ರದಲ್ಲೇ ಎಲ್ಲ ಶಾಸಕರ ನಿಯೋಗ ಕರೆದೊಯ್ಯಲು ನಿರ್ಧರಿಸಲಾಯಿತು.

ಶಾಸಕರಾದ ಅನಿಲ ಬೆನಕೆ, ಲಕ್ಷ್ಮಿ ಹೆಬ್ಬಾಳಕರ, ಪಾಲಿಕೆ ಆಯುಕ್ತ ಶಶಿಧರ ಕುರೇರ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನಮೂರ್ತಿ ಇದ್ದರು.

ಬಳಿಕ ಪಾಲಿಕೆ, ಬುಡಾ ಯೋಜನೆಗಳ ಪ್ರಗತಿ ಪರಿಶೀಲಿಸಿದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT