ಸ್ಮಾರ್ಟ್‌ ಸಿಟಿ ಯೋಜನೆಗಳ ಪ್ರಗತಿ ವರದಿ ಮಂಡನೆ

7

ಸ್ಮಾರ್ಟ್‌ ಸಿಟಿ ಯೋಜನೆಗಳ ಪ್ರಗತಿ ವರದಿ ಮಂಡನೆ

Published:
Updated:
Deccan Herald

ಬೆಳಗಾವಿ: ‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ ಹೇಳಿದರು.

ಇಲ್ಲಿನ ಪಾಲಿಕೆಯ ಸಭಾಂಗಣದಲ್ಲಿ ಸದಸ್ಯರಿಗೆ ಹಾಗೂ ಶಾಸಕರಿಗೆ ಯೋಜನೆಯ ಬಗ್ಗೆ ವಿವರಣೆ ನೀಡಿದ ಅವರು, ಮಹಾನಗರಗಳಲ್ಲಿ ಉತ್ತಮ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸ್ಮಾರ್ಟ್ ಸಿಟಿ ಯೋಜನೆಯನ್ನು ರೂಪಿಸಿದೆ. ಇದರಡಿ ಆಯ್ಕೆಯಾದ ದೇಶದ ಮೊದಲ 20 ನಗರಗಳಲ್ಲಿಯೂ ಬೆಳಗಾವಿಯೂ ಒಂದಾಗಿದೆ ಎಂದರು.

ಈ ಯೋಜನೆಯಡಿ ನೆಹರು ನಗರದ ರಸ್ತೆಯನ್ನು ಅಭಿವೃದ್ಧಿಪಡಿಸುವುದು, ಟಿಳಕವಾಡಿಯ ವಾಕ್ಸಿನ್‌ ಡಿಪೋ ಉದ್ಯಾನದಲ್ಲಿ ಹೆರಿಟೇಜ್‌ ಪಾರ್ಕ್‌ ನಿರ್ಮಾಣ, ನೀರು ಶುದ್ಧೀಕರಣ ಘಟಕಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳು ಪ್ರಗತಿಯಲ್ಲಿವೆ. ಹೆರಿಟೇಜ್‌ ಪಾರ್ಕ್‌ನ ಎರಡನೇ ಹಂತದ ಕಾಮಗಾರಿ ಟೆಂಡರ್‌ ಹಂತದಲ್ಲಿದೆ ಎಂದು ಹೇಳಿದರು.

ಸಿಟಿ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಟೆಂಡರ್‌ ಅಂತಿಮಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ವಿವರಣೆ ನೀಡಿದರು.

ಶೌಚಾಲಯಕ್ಕೆ ಒತ್ತು ನೀಡಲು ಸಲಹೆ:

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ನಗರದಲ್ಲಿ ಜನರು ಮೂತ್ರ ವಿಸರ್ಜನೆ ಮಾಡಲು ಸಾಕಷ್ಟು ಪರದಾಡುವಂತಾಗಿದೆ. ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ನಗರದಲ್ಲಿ ಪ್ರತ್ಯೇಕ ಸೈಕಲ್‌ ಟ್ರ್ಯಾಕ್‌ ನಿರ್ಮಿಸುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ವಾಹನಗಳ ಸಂಚಾರಕ್ಕೆ ರಸ್ತೆಗಳಲ್ಲಿ ಜಾಗ ಸಿಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಪ್ರತ್ಯೇಕವಾಗಿ ಸೈಕಲ್‌ ಟ್ರ್ಯಾಕ್‌ ನಿರ್ಮಿಸಿದರೆ ಹೇಗೆ? ಎಂದು ಪ್ರಶ್ನಿಸಿದರು. ಸೈಕಲ್‌ ಹಾಗೂ ದ್ವಿಚಕ್ರ ವಾಹನಗಳಿಗೆ ಸೇರಿಸಿಕೊಂಡು ಪ್ರತ್ಯೇಕ ಟ್ರ್ಯಾಕ್‌ ನಿರ್ಮಿಸಲಿ ಎಂದು ಸಲಹೆ ನೀಡಿದರು.

ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಸದಸ್ಯರಾದ ಕಿರಣ ಸಾಯನಾಯಕ್‌, ದೀಪಕ ಜಮಖಂಡಿ ಸೇರಿದಂತೆ ಹಲವು ಜನ ಸದಸ್ಯರು ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !