ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಹೆಚ್ಚಿಸಿ, ಲಸಿಕೆ ಒದಗಿಸಿ: ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ

ಮುಖ್ಯಮಂತ್ರಿ ಎದುರು ಜನಪ್ರತಿನಿಧಿಗಳ ಮನವಿ
Last Updated 21 ಆಗಸ್ಟ್ 2021, 13:23 IST
ಅಕ್ಷರ ಗಾತ್ರ

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಸಿದ ಸಭೆಯಲ್ಲಿ ಜನಪ್ರತಿನಿಧಿಗಳು ಹಲವು ವಿಷಯಗಳನ್ನು ಮಂಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ‘ನೆರೆಯಿಂದಾಗಿ ಪ್ರಾಥಮಿಕ ಮಾಹಿತಿ ಪ್ರಕಾರ ₹ 2800 ಕೋಟಿ ಹಾನಿ ವರದಿಯಾಗಿದೆ. ಹಾನಿಯಾದಾಗ ಕೂಡಲೇ ಸಮೀಕ್ಷೆ ಕೈಗೊಂಡು ಆಯಾ‌ ಪಂಚಾಯ್ತಿಯಲ್ಲಿ ಪಟ್ಟಿ ಪ್ರದರ್ಶಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಇದರಿಂದ ಗೊಂದಲ ನಿವಾರಣೆ‌ ಜೊತೆಗೆ ಅನಧಿಕೃತ ವ್ಯಕ್ತಿಗಳು ‌ಪರಿಹಾರ ಪಡೆಯುವುದನ್ನು ತಪ್ಪಿಸಬಹುದು’ ಎಂದು ತಿಳಿಸಿದರು.

ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ನೆರೆ ಹಾನಿ ಸಮೀಕ್ಷೆ ಹಾಗೂ ಕೋವಿಡ್ ನಿರ್ವಹಣೆಗೆ ಹಲವು ವಿಷಯಗಳನ್ನು ಚರ್ಚಿಸಿದರು.

ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ‘ತಾತ್ಕಾಲಿಕವಾಗಿ ನೇಮಿಸಿಕೊಂಡಿರುವ ವೈದ್ಯಕೀಯ ಸಿಬ್ಬಂದಿಗೆ ಸಂಬಳ ಬಿಡುಗಡೆ ಮಾಡಬೇಕು. ಶಾಶ್ವತ ಸ್ಥಳಾಂತರ ಬಯಸುವ ಕುಟುಂಬಗಳಿಗೆ ಸರ್ಕಾರಿ ಜಮೀನಿನಲ್ಲಿ ಪುನರ್ವಸತಿ ಕಲ್ಪಿಸಬೇಕು’ ಎಂದು ಕೋರಿದರು.

ಕೊರತೆ ನೀಗಿಸಿ:

‘ಕ್ಷೇತ್ರದ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಕಂಡುಬಂದಿದ್ದು, ಕೂಡಲೇ ಪೂರೈಸಬೇಕು’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಒತ್ತಾಯಿಸಿದರು.

ಶಾಸಕ ಗಣೇಶ ಹುಕ್ಕೇರಿ, ‘ಬೆಳಗಾವಿ ಗಡಿ‌ ಜಿಲ್ಲೆಯಾಗಿರುವುದರಿಂದ ಹೆಚ್ಚಿನ ಅನುದಾನ ನೀಡಬೇಕು’ ಎಂದು ಕೋರಿದರು.

‘ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿದೆ ಎಂದು ಪರೀಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಬಾರದು’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಶಾಸಕ ಮಹಾಂತೇಶ ಕೌಜಲಗಿ, ‘ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ನಿಯೋಜಿಸಬೇಕು. ಡಯಾಲಿಸಿಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ತಾಲ್ಲೂಕು ಆಸ್ಪತ್ರೆಗಳಲ್ಲಿ ತೊಂದರೆ ಆಗುತ್ತಿದೆ’ ಎಂದು ವಿವರಿಸಿದರು.

ಹೆಚ್ಚುವರಿಯಾಗಿ ಪೂರೈಸಿ:

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಲಸಿಕೆ ಪೂರೈಕೆ ಸಮರ್ಪಕವಾಗಿ ಆಗದೆ ಅಭಿಯಾನ ನಿಧಾನಗತಿಯಲ್ಲಿ ಸಾಗಿದೆ. ಆದ್ದರಿಂದ ಹೆಚ್ಚಿನ ಲಸಿಕೆ ಪೂರೈಸಬೇಕು’ ಎಂದು ಒತ್ತಾಯಿಸಿದರು. ದನಿಗೂಡಿಸಿದ ಸಂಸದೆ ಮಂಗಲಾ ಸುರೇಶ ಅಂಗಡಿ, ‘ಹೆಚ್ಚುವರಿ ಲಸಿಕೆ ಪೂರೈಸಬೇಕು’ ಎಂದು ಕೋರಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಕೋವಿಡ್ ತಪಾಸಣೆಗೆ ಅಗತ್ಯವಿರುವ ಆರ್‌ಟಿಪಿಸಿಆರ್ ಪರೀಕ್ಷಾ ಕೇಂದ್ರವನ್ನು ಗೋಕಾಕದಲ್ಲೂ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ಶ್ರೀಮಂತ ಪಾಟೀಲ, ‘ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಾದರೆ ಆಮ್ಲಜನಕ ತಕ್ಷಣವೇ ಪೂರೈಸಲು ಅನುಕೂಲವಾಗುವಂತೆ ಬಾಟ್ಲಿಂಗ್ ಘಟಕ ಸ್ಥಾಪಿಸಬೇಕು’ ಎಂದು ಕೋರಿದರು.

‘ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಾದರೆ ಗಡಿಯಲ್ಲಿರುವ ಅಥಣಿ ತಾಲ್ಲೂಕಿನ ಮೇಲೆ ಹೆಚ್ಚಿನ ಪರಿಣಾಮ ‌ಬೀರುತ್ತದೆ. ಆದ್ದರಿಂದ ತುರ್ತು ಚಿಕಿತ್ಸೆಗೆ ಅನೂಕೂಲ ಕಲ್ಪಿಸಬೇಕು ಹಾಗೂ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸಂಪೂರ್ಣ ಜಲಾವೃತವಾಗುವ ಗ್ರಾಮಗಳ ಎಲ್ಲ ಕುಟುಂಬಗಳಿಗೆ ತಲಾ‌ ₹ 10ಸಾವಿರ ಪರಿಹಾರ ನೀಡಬೇಕು’ ಎಂದು ಶಾಸಕ ಮಹೇಶ ಕುಮಠಳ್ಳಿ ಮನವಿ ಮಾಡಿದರು.

ಶಾಸಕರಾದ ಅನಿಲ ಬೆನಕೆ ಹಾಗೂ ದುರ್ಯೋಧನ ಐಹೊಳೆ ಮಾತನಾಡಿದರು.

221 ತಂಡಗಳ ರಚನೆ:ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಜಿಲ್ಲೆಯಲ್ಲಿ ಸದ್ಯಕ್ಕೆ 468 ಸಕ್ರಿಯ ಪ್ರಕರಣಗಳಿವೆ. 0.81 ಪಾಸಿಟಿವಿಟಿ ದರ‌, ಮರಣ ದರ ಶೇ.2.08ರಷ್ಟಿದೆ. ಕೋವಿಡ್ ಲಸಿಕೆಯ 2ನೇ ಡೋಸ್ ಅನ್ನು ಶೇ.13ರಷ್ಟು ನೀಡಲಾಗಿದೆ. ಗಡಿ ಭಾಗದ 94 ಗ್ರಾಮದಲ್ಲಿ ಲಸಿಕಾಕರಣ ಹಮ್ಮಿಕೊಂಡು ಎರಡೂ ಲಕ್ಷಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ’ ಎಂದು ವಿವರ ನೀಡಿದರು.

‘ಕೋವಿಡ್ ನಿರ್ವಹಣೆಗಾಗಿ ಜಿಲ್ಲೆಗೆ ₹ 34 ಕೋಟಿ ಬಿಡುಗಡೆಯಾಗಿದ್ದು, ₹ 28 ಕೋಟಿ ಖರ್ಚು ಮಾಡಲಾಗಿದೆ. ಆ.16ರಿಂದ ‘ವಾತ್ಸಲ್ಯ’ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮ ಆರಂಭಿಸಲಾಗಿದೆ. 221 ತಂಡಗಳನ್ನು ರಚಿಸಿದ್ದು, 1,372 ಶಿಬಿರಗಳನ್ನು ಆಯೋಜಿಸಲಾಗುವುದು. ಶಾಲೆ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಶೇ.98ರಷ್ಟು ಶಿಕ್ಷಕರಿಗೆ ಲಸಿಕೆ ನೀಡಲಾಗಿದೆ. ಆಮ್ಲಜನಕ ಕೊರತೆ ನೀಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT