ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್‌ನಲ್ಲಿ ಉದ್ಯೋಗಾವಕಾಶ ಹೆಚ್ಚಳ

ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ ಹೇಳಿಕೆ
Last Updated 26 ಮೇ 2019, 14:16 IST
ಅಕ್ಷರ ಗಾತ್ರ

ಬೆಳಗಾವಿ: ‘ತಂತ್ರಜ್ಞಾನ ಕ್ಷೇತ್ರದ ಕ್ರಾಂತಿಕಾರಕ ಬದಲಾವಣೆಯ ಕಾರಣ ವಿಶ್ವದಾದ್ಯಂತ ಎಂಜಿನಿಯರಿಂಗ್ ಪದವೀಧರರಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ಕೆಎಲ್ಎಸ್‌–ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ ತಿಳಿಸಿದರು.

‌ಇಲ್ಲಿನ ಗೋಗಟೆ ತಾಂತ್ರಿಕ ಕಾಲೇಜಿನ ಅನ್ವಯಿಕ ವಿಜ್ಞಾನ ವಿಭಾಗವು ಭಾನುವಾರ ಆಯೋಜಿಸಿದ್ದ ‘ಎಂಜಿನಿಯರಿಂಗ್ ಕೋರ್ಸ್‌ಗಳು ಹಾಗೂ ಸಿಇಟಿ, ಕಾಮೆಡ್-ಕೆ ಸೀಟ್ ಆಯ್ಕೆ ಪ್ರಕ್ರಿಯೆ’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಎಂಜಿನಿಯರಿಂಗ್ ಕ್ಷೇತ್ರದ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಆದರೆ, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಆಯಾ ಕ್ಷೇತ್ರದಲ್ಲಿ ನಿಪುಣರಾಗುವುದು ಹಾಗೂ ಕೌಶಲ ಬೆಳೆಸಿಕೊಳ್ಳುವುದು ಅವಶ್ಯವಾಗಿದೆ’ ಎಂದು ಹೇಳಿದರು.

‘ಕಾಲೇಜು ಆಯ್ಕೆ ಮಾಡಿಕೊಳ್ಳುವಾಗ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಕಾಲೇಜಿನ ಕಲಿಕಾ ವಿಧಾನ, ಹೊಂದಿರುವ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಒಡಂಬಡಿಕೆ, ಮೂಲಸೌಲಭ್ಯಗಳು, ನ್ಯಾಕ್‌ನಿಂದ ಮಾನ್ಯತೆ ಪಡೆದಿದೆಯೋ ಅಥವಾ ಇಲ್ಲವೋ, ಮುಖ್ಯವಾಗಿ ಕ್ಯಾಂಪಸ್ ಸಂದರ್ಶನಕ್ಕೆ ಯಾವೆಲ್ಲ ಕಂಪನಿಗಳು ಭೇಟಿ ಕೊಡುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಅಲ್ಲದೇ ಆ ಕಾಲೇಜಿನಿಂದ ಕಲಿತ ಹಳೆಯ ವಿದ್ಯಾರ್ಥಿಗಳೆಲ್ಲ ಈಗ ಯಾವೆಲ್ಲ ಸ್ಥಾನದಲ್ಲಿ ಇದ್ದಾರೆ ಎಂಬ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಎ.ಎಸ್. ದೇಶಪಾಂಡೆ ಅವರು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಎಷ್ಟು ವಿಭಾಗಗಳಿವೆ, ಅವುಗಳ ಪ್ರಾಮುಖ್ಯತೆ ಹಾಗೂ ಅವುಗಳಿಗೆ ಸಂಬಂಧಿಸಿದ ವೃತ್ತಿ ಮಾರ್ಗಗಳನ್ನು ತಿಳಿಸಿಕೊಟ್ಟರು.

ಶೈಕ್ಷಣಿಕ ವಿಭಾಗದ ಡೀನ್ ಡಾ.ಎಂ.ಎಸ್. ಪಾಟೀಲ ಸಿ.ಇ.ಟಿ, ಕಾಮೆಡ್-ಕೆ ಸೀಟ್ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರವಾಗಿ ತಿಳಿಸಿದರು.

ಸಂಯೋಜಕರಾದ ಡಾ.ಎಂ.ಕೆ. ರೆಂದಾಳೆ, ಡಾ.ಪಿ.ಆರ್. ಹಂಪಿಹೊಳಿ, ಡಾ.ಎಸ್.ವಿ. ದಿವೇಕರ್ ಭಾಗವಹಿಸಿದ್ದರು. ಪ್ರೊ.ಸುಪ್ರಿಯಾ ಕುಲಕರ್ಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT