ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಶಾಹೂನಗರದಲ್ಲಿ ಹಲವು ಸಮಸ್ಯೆಗಳು

ಕುಡಿಯುವ ನೀರಿನ ಘಟಕವಿಲ್ಲ, ಸಾರ್ವಜನಿಕ ಶೌಚಾಲಯವಿಲ್ಲ!
Last Updated 16 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ತೆರೆದ ಚರಂಡಿಗಳ ತುಂಬೆಲ್ಲಾ ಹೂಳು. ರಸ್ತೆಯಲ್ಲೂ ಹರಿಯುವ ಮಲಿನ ನೀರು. ತ್ಯಾಜ್ಯ ಡಂಪಿಂಗ್‌ ಯಾರ್ಡ್‌ನಂತಾಗಿರುವ ಖಾಲಿ ನಿವೇಶನಗಳು. ಹಂದಿಗಳು, ಬೀದಿ ನಾಯಿಗಳ ಹಾವಳಿ. ಸೊಳ್ಳೆಗಳ ಹೆಚ್ಚಳದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ. ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಸಾರ್ವಜನಿಕ ಶೌಚಾಲಯ ವ್ಯವವ್ಥೆಯೂ ಇಲ್ಲ.

ಇದು ನಗರದ ಪ್ರಮುಖ ಬಡಾವಣೆಯಾದ ಶಾಹೂನಗರದ ಬಹುತೇಕ ಗಲ್ಲಿಗಳಲ್ಲಿ ಕಾಣಸಿಗುವ ಅವ್ಯವಸ್ಥೆಯ ಚಿತ್ರಣ.

ಬಡಾವಣೆಯು ಬೆಳೆಯುತ್ತಿದೆಯಾದರೂ ಅದಕ್ಕೆ ತಕ್ಕಂತೆ ಮೂಲಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ನಡೆದಿಲ್ಲ. ಈ ಬಡಾವಣೆ ದಾಟಿದರೆ ಗ್ರಾಮೀಣ ಪ್ರದೇಶ ಶುರುವಾಗುತ್ತದೆ. ಆದರೆ, ನಗರದೊಳಗಡೆಯೇ ಇದ್ದರೂ ಕೆಲವು ಗಲ್ಲಿಗಳ ಸ್ಥಿತಿ ಈಗಲೂ ಪಟ್ಟಣ ಪ್ರದೇಶಗಳಿಗಿಂತಲೂ ಕಡೆಯಾಗಿಯೇ ಇವೆ.

ಮನೆಯವರೇ ಮಾಡಿಕೊಳ್ಳುತ್ತಾರೆ

ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇರುವ ಕಡೆಗಳಲ್ಲಿ ಸ್ವಚ್ಛಗೊಳಿಸುವ ಕಾರ್ಯ ನಿಯಮಿತವಾಗಿ ನಡೆಯುತ್ತಿಲ್ಲ. ಬಹುತೇಕ ಕಡೆಗಳಲ್ಲಿ ತ್ಯಾಜ್, ಪ್ಲಾಸ್ಟಿಕ್‌ನಿಂದಾಗಿ ಚರಂಡಿಗಳು ತುಂಬಿ ಹೋಗಿವೆ. ಇದರಿಂದಾಗಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲ. ಅಲ್ಲಲ್ಲಿ ಮನೆಗಳವರೇ ಚಡಿಯಲ್ಲಿ ನೀರು ಹರಿದು ಹೋಗುವಂತೆ ಮಾಡಲು ಸ್ವಚ್ಛಗೊಳಿಸಲು ಸರ್ಕಸ್ ಮಾಡುವುದು ಆಗಾಗ ಕಂಡುಬರುತ್ತದೆ. ಕೆಲವರು ಮಹಾನಗರಪಾಲಿಕೆಗೆ ದೂರು ನೀಡಿ, ಮನೆಗಳ ಎದುರಿನ ಚರಂಡಿಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸುತ್ತಾರೆ.

ಅಲ್ಲಲ್ಲಿ ಇರುವ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು ಹಂದಿಗಳ ವಾಸ ಸ್ಥಾನವಾಗಿವೆ. ಜನರು ಅಲ್ಲಿಗೇ ಕಸ ಚೆಲ್ಲುವುದರಿಂದ ಆ ಪ್ರದೇಶಗಳು ರೋಗ ಹರಡುವ ಕೇಂದ್ರಗಳಾಗಿ ಪರಿಣಮಿಸಿವೆ. ನಿವೇಶನಗಳನ್ನು ಆಗಾಗ ಸ್ವಚ್ಛಗೊಳಿಸಲು ಮಾಲೀಕರು ಮುಂದಾಗಬೇಕು ಇಲ್ಲವೇ ನಗರಪಾಲಿಕೆಯವರೇ ಸ್ವಚ್ಛ ಮಾಡಿ ಮಾಲೀಕರಿಂದ ಹಣ ವಸೂಲಿ ಮಾಡುವ ಕಾರ್ಯವಾದರೂ ನಡೆಯಬೇಕು ಎನ್ನುವುದು ನಿವಾಸಿಗಳ ಒತ್ತಾಯವಾಗಿದೆ. ಮುಖ್ಯರಸ್ತೆಗಳ ಪಕ್ಕದಲ್ಲಿರುವ ಖಾಲಿ ನಿವೇಶನಗಳಲ್ಲೂ ಇದೇ ರೀತಿಯ ಚಿತ್ರಣವಿದೆ.

ಹಾವಳಿ ತಪ್ಪಿಸಬೇಕು

ಬಡಾವಣೆಯ ಒಂದು ಭಾಗ ಬಾಕ್ಸೈಟ್‌ ರಸ್ತೆಗೆ ಹೊಂದಿಕೊಂಡಿದೆ. ಆ ರಸ್ತೆಯ ಮೂಲಕ ನೂರಾರು ಮಂದಿ ಎಪಿಎಂಸಿಗೆ ಓಡಾಡುತ್ತಾರೆ. ಆದರೆ, ಮುಖ್ಯ ರಸ್ತೆಯಲ್ಲಾಗಲಿ ಅಥವಾ ಬಡಾವಣೆಯ ಒಳ ಭಾಗದಲ್ಲಾಗಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲ. ಇದರಿಂದಾಗಿ ಬೇರೆ ಊರುಗಳಿಂದ ಬರುವವರು ತೊಂದರೆ ಅನುಭವಿಸುತ್ತಿದ್ದಾರೆ. ಇಡೀ ಏರಿಯಾದ ಎಲ್ಲಿ ಹುಡುಕಿದರೂ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಕಾರ್ಯವಾಗಿಲ್ಲ. ಕೆಲವರು ಮನೆಗಳಲ್ಲಿ ಫಿಲ್ಟರ್ ಹೊಂದಿದ್ದಾರೆ. ಬಹುತೇಕರು ಜಲಮಂಡಳಿಯಿಂದ ಪೂರೈಸಲಾಗುವ ನೀರನ್ನೇ ನೇರವಾಗಿ ಸೇವಿಸುತ್ತಾರೆ.

ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಬೀದಿ ನಾಯಿಗಳು ಹಾಗೂ ಹಂದಿಗಳ ಹಾವಳಿ ತಪ್ಪಿಸಬೇಕು ಎನ್ನುವುದು ನಿವಾಸಿಗಳ ಒತ್ತಾಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಒಮ್ಮೊಮ್ಮೆ ಅವುಗಳ ಹಿಂಡು ಕೊನೆಯ ಬಸ್‌ನಿಲ್ದಾಣದಿಂದ ಹಿಡಿದು ಮುಖ್ಯ ರಸ್ತೆವರೆಗೆ ಬೊಗಳುತ್ತಾ ಪರಸ್ಪರ ಕಾದಾಡುತ್ತಾ ಓಡಾಡುತ್ತಿರುತ್ತವೆ. ಇದರಿಂದ ಸ್ಥಳೀಯರ ನೆಮ್ಮದಿ ಹಾಳಾಗುತ್ತಿದೆಯಲ್ಲದೇ, ನಿರಾತಂಕವಾಗಿ ಓಡಾಡುವುದಕ್ಕೆ ತೊಂದರೆಯಾಗಿ ಪರಿಣಮಿಸಿದೆ. ಗಣೇಶ ಮಂದಿರದ ಬಳಿ ಉದ್ಯಾನವಿದೆ. ಆದರೆ, ಸಮರ್ಪಕವಾಗಿ ನಿರ್ವಹಣೆ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT