ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತ್ತಿರುವ ಗಂಜಿ ಕೇಂದ್ರ

ಸರಿಯಾದ ಊಟ, ಹೊದಿಕೆ ಸಿಗದೇ ಕಂಗಾಲು
Last Updated 7 ಆಗಸ್ಟ್ 2019, 19:43 IST
ಅಕ್ಷರ ಗಾತ್ರ

ಅಥಣಿ: ಕೃಷ್ಣಾ ನದಿಯ ನೆರೆ ಸಂತ್ರಸ್ತರಿಗೆ ತಾಲ್ಲೂಕಿನಲ್ಲಿ 16 ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ, ಅಲ್ಲಿರುವವರಿಗೆ ಸರಿಯಾದ ಊಟ, ಹೊದಿಕೆ ಮೊದಲಾದ ಸೌಲಭ್ಯಗಳು ದೊರೆಯದೇ ಕಂಗಾಲಾಗಿದ್ದಾರೆ.

ಜನಹಾಗೂ ಜಾನುವಾರುಗಳಿಗೆ ನಾಗನೂರ, ರಡ್ಡೇರಹಟ್ಟಿ, ದೊಡವಾಡ, ಸತ್ತಿ, ತೀರ್ಥ, ಹುಲಗಬಾಳಿ, ನದಿಇಂಗಳಗಾವ ಮೊದಲಾದ ಕಡೆಗಳಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅವುಗಳಲ್ಲಿ ಹಲವು ಸೋರುತ್ತಿವೆ. 2005ರಲ್ಲಿ ಮಹಾಪೂರ ಬಂದಾಗ ಮಾಡಿದ್ದ ಪುನರ್ವಸತಿ ಕೇಂದ್ರಗಳೇ ಇಂದಿನ ಗಂಜಿಕೇಂದ್ರಗಳಾಗಿವೆ. ‍ಪುನರ್ವಸತಿ ಕೇಂದ್ರಗಳಿಗೆ ಯಾವುದೇ ಕಚೇರಿಯಾಗಲಿ, ಗ್ರಾಮವಾಗಲಿ ಸ್ಥಳಾಂತರಗೊಂಡಿಲ್ಲ. ಆದರೂ ಕಟ್ಟಡಗಳು ಸೋರುತ್ತಿವೆ!

ರಡ್ಡೇರಹಟ್ಟಿ ಬಳಿಯ ಗಂಜಿ ಕೇಂದ್ರದಲ್ಲಿ ಇರುವವರು ಹೇಳುವ ಪ್ರಕಾರ ಸರಿಯಾಗಿ ಊಟ ನೀಡುತ್ತಿಲ್ಲ. ಬೆಳಿಗ್ಗೆ ಉಪಾಹಾರ ನೀಡಿ ಹೋದರೆ ನಂತರ ಸರಿಯಾದ ಸಮಯಕ್ಕೆ ಊಟ ಬರುವುದಿಲ್ಲ ಎಂದು ದೂರಿದರು.

ತಾಲ್ಲೂಕಿನ ಸತ್ತಿ ಗ್ರಾಮದ ಬಳಿಯ ಗಂಜಿ ಕೇಂದ್ರದಲ್ಲಿ ನೂರಾರು ಜಾನುವಾರುಗಳನ್ನು ಊರಿನ ಪ್ರಮುಖ ರಸ್ತೆ ಮಧ್ಯೆಯೇ ಕಟ್ಟಲಾಗಿದೆ. ಆದರೆ, ಅವುಗಳಿಗೆ 2 ದಿನಗಳಿಂದ ಮೇವು ಪೂರೈಸಿಲ್ಲ. ‘ಮೇವು ತರಲು ಹೋಗಿದ್ದಾರೆ’ ಎನ್ನುವ ಉತ್ತರ ಅಧಿಕಾರಿಗಳಿಂದ ಬರುತ್ತಿದೆ ಎಂದು ಸ್ಥಳೀಯರು ತಿಳಿಸಿದರು. ‘ಮನೆಗಳನ್ನು ತೊರೆದು ಬಂದಿದ್ದೇವೆ. ನಾವು ಎಲ್ಲಿಂದ ಮೇವು ತರಬೇಕು, ಹಣವಾದರೂ ಎಲ್ಲಿ ಬರಬೇಕು?’ ಎಂದು ಸಂತ್ರಸ್ತರು ಕೇಳಿದರು.

ಕೇಂದ್ರಗಳಲ್ಲಿ ಹಾಸಿಗೆ, ಹೊದಿಕೆ ಕೊಟ್ಟಿಲ್ಲ. ಸೋರುವ ಕಟ್ಟಡಗಳಲ್ಲಿ ಮಳೆ ನೀರಿನ ಮಧ್ಯೆ, ಶೀತ ವಾತಾವರಣದಲ್ಲಿ ನಡುಗುತ್ತಾ ಮಲಗಬೇಕಾದ ಸ್ಥಿತಿ ಇದೆ. ರಾತ್ರಿ ಅಂಗನವಾಡಿ ಕಾರ್ಯಕರ್ತೆ ಹೊರತುಪಡಿಸಿದರೆ ಬೇರೆ ಅಧಿಕಾರಿಗಳು ಅಥವಾ ಸಿಬ್ಬಂದಿ ಇರುವುದಿಲ್ಲ. ನಾವು ಯಾರಿಗೆ ಕಷ್ಟ ಹೇಳಿಕೊಳ್ಳಬೇಕು ಎಂದು ಸಂತ್ರಸ್ತರು ತಿಳಿಸಿದರು. ‍ಪಡಿತರ ಸರಿಯಾಗಿ ಸರಬರಾಜಾಗುತ್ತಿಲ್ಲ ಎನ್ನುವ ಆರೋಪಗಳೂ ಇವೆ. ಅಲ್ಲದೇ, ಉಸ್ತುವಾರಿ ನೋಡಿಕೊಳ್ಳಲು ಅಧಿಕಾರಿಗಳನ್ನು ನಿಯೋಜಿಸಿಲ್ಲ.

ತಾಲ್ಲೂಕು ಆಡಳಿತ ಅಥವಾ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಸೌಲಭ್ಯ ಕಲ್ಪಿಸಬೇಕು ಎನ್ನುವುದು ಸಂತ್ರಸ್ತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT