ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬಚ್ಚಲು ಗುಂಡಿಗೂ ‘ಖಾತ್ರಿ’ ಅನುದಾನ

ನೈರ್ಮಲ್ಯ ಕಾಪಾಡುವುದಕ್ಕಾಗಿ ಈ ಕಾರ್ಯಕ್ರಮಕ್ಕೆ ಆದ್ಯತೆ
Last Updated 27 ಅಕ್ಟೋಬರ್ 2020, 6:32 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುದಾನದಲ್ಲಿ ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ‘ಬಚ್ಚಲು ಗುಂಡಿ’ಗಳ (ಸೋಕ್ ಪಿಟ್) ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

ಬಚ್ಚಲಿನ ಮಲಿನ ನೀರು ಅನೈರ್ಮಲ್ಯಕ್ಕೆ ಕಾರಣವಾಗಬಾರದು, ಅದು ಭೂಮಿಯಲ್ಲಿ ಇಂಗಬೇಕು ಮತ್ತು ಸಾಂಕ್ರಮಿಕ ರೋಗಗಳ ಹರಡುವಿಕೆಯನ್ನು ತಡೆಯಬೇಕು ಎನ್ನುವುದು ಉದ್ದೇಶವಾಗಿದೆ.

ಹಳ್ಳಿಗಳಲ್ಲಿ ಸಮರ್ಪಕ ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ, ಸ್ನಾನ ಮಾಡಿದ, ಪಾತ್ರೆಗಳು ಹಾಗೂ ಬಟ್ಟೆಗಳನ್ನು ತೊಳೆದ ನೀರು ಮನೆ ಎದುರಿನ ರಸ್ತೆಯಲ್ಲೋ, ಹಿತ್ತಲಿನತ್ತಲೋ ಅಥವಾ ತಗ್ಗು ಪ್ರದೇಶಕ್ಕೋ ಹರಿಯವುದು ಸಾಮಾನ್ಯ. ಇದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುವುದು, ಸೊಳ್ಳೆಗಳ ಉತ್ಪತ್ತಿಯಿಂದ ಸಾಂಕ್ರಮಿಕ ರೋಗಗಳಿಗೂ ಕಾರಣವಾಗುವ ಸ್ಥಿತಿ ಇದೆ. ಈ ಸಮಸ್ಯೆಗಳಿಂದ ಜನರಿಗೆ ಮುಕ್ತಿ ಕೊಡಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯಿಂದ ಈ ಅಭಿಯಾನ ಕೈಗೊಳ್ಳಲಾಗಿದೆ.

ಜಾಗೃತಿ ಕಾರ್ಯಕ್ರಮ:ಹಂತ ಹಂತವಾಗಿ ಪ್ರತಿ ಮನೆಗೂ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅವರ ಮನೆಯ ಬಚ್ಚಲು ನೀರು ಇವರ ಮನೆಗೆ, ಇವರ ಮನೆಯದ್ದು ಇನ್ನೊಬ್ಬರ ಮನೆ ಮುಂದೆ ಹರಿಯಿತೆಂಬ ವಿಷಯದಲ್ಲಿ ಉಂಟಾಗುವ ಜಗಳಕ್ಕೆ ಇದರಿಂದ ಕಡಿವಾಣ ಬೀಳಲಿದೆ ಎಂದು ಆಶಿಸಲಾಗಿದೆ.

ಪಂಚಾಯಿತಿಗೆ 50:ಸದ್ಯ, ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 50 ಬಚ್ಚಲು ಗುಂಡಿಗಳ ನಿರ್ಮಾಣದ ಯೋಜನೆ ಇದೆ. ನವೆಂಬರ್‌ ಅಂತ್ಯದವರೆಗೆ 25,300 ಗುರಿ ಹೊಂದಲಾಗಿದ್ದು, ಇದರಲ್ಲಿ 16,358 ಈಗಾಗಲೇ ನಿರ್ಮಿಸಲಾಗಿದೆ. ರಾಯಬಾಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 1,900 ಗುರಿಯಲ್ಲಿ 1,578 ನಿರ್ಮಾಣವಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಉದ್ಯೋಗ ಚೀಟಿಯ ಪ್ರತಿ ಮತ್ತು ಮನೆಯ ಆರ್‌ಟಿಸಿ ಪ್ರತಿಯನ್ನು ಪಂಚಾಯಿತಿಗೆ ಸಲ್ಲಿಸಬೇಕು. ಕಾಮಗಾರಿ ಖರ್ಚಿನ ವಿವರ ಹಾಗೂ ಒರಿಜಿನಲ್‌ ಬಿಲ್‌ ಸಲ್ಲಿಸಿದರೆ, ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ. ಗರಿಷ್ಠ ₹14ಸಾವಿರದವರೆಗೆ ಪಡೆಯಬಹುದಾಗಿದೆ. 8 ಅಡಿ ಉದ್ದ 4 ಅಡಿ ಅಗಲದ ಗುಂಡಿ ತೆಗೆಯಬೇಕು. ತಳ ಭಾಗದಲ್ಲಿ 3 ಅಡಿ ಜಲ್ಲಿ ಸುರಿಯಬೇಕು. ನಂತರ 5 ಸಿಮೆಂಟ್ ರಿಂಗ್‌ಗಳನ್ನು ಬಿಡಬೇಕು. ಬಳಿಕ ಪ್ಲೇಟ್‌ನಿಂದ ಮುಚ್ಚಿ ಚೌಕಾಕಾರದ ಕಟ್ಟೆ ಕಟ್ಟಬೇಕು. ಬಟ್ಟೆ ತೊಳೆಯುವ ನೀರು, ಬಚ್ಚಲಿನ ನೀರು ನೇರವಾಗಿ ಗುಂಡಿ ಸೇರುವಂತೆ ವ್ಯವಸ್ಥೆ ಇರಬೇಕು ಎನ್ನುತ್ತಾರೆ ಅಧಿಕಾರಿಗಳು.

ಸೌಲಭ್ಯ ತಲುಪಿಸಲು ಕ್ರಮ:‘ಬಚ್ಚಲು ಗುಂಡಿ ಸೇರಿದಂತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲಭ್ಯವಿರುವ ಸೌಲಭ್ಯಗಳು ಜನರಿಗೆ ತಲುಪುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್‌ ಎಚ್.ವಿ. ತಿಳಿಸಿದರು.

‘ವೈಯಕ್ತಿಕ ಕಾಮಗಾರಿಗಳಿಗೆ ಪ್ರತಿ ಫಲಾನುಭವಿ ಒಂದು ಆರ್ಥಿಕ ವರ್ಷದಲ್ಲಿ ₹ 2.50 ಲಕ್ಷದವರೆಗೆ ಪಡೆಯಬಹುದು. ಕೃಷಿ ಹೊಂಡ, ತೆರೆದ ಬಾವಿ, ಕೊಳವೆಬಾವಿ ಮರುಪೂರಣ, ಬದು ನಿರ್ಮಾಣ, ಬಚ್ಚಲು ಗುಂಡಿ, ದನದ ದೊಡ್ಡಿ, ಕುರಿ ದೊಡ್ಡಿ, ಆಡು, ಮೇಕೆ ಶೆಡ್‌, ಹಂದಿ ದೊಡ್ಡಿ, ಕೋಳಿ ಶೆಡ್, ಈರುಳ್ಳಿ ಉಗ್ರಾಣ, ಎರೆಹುಳು ಗೊಬ್ಬರ ತೊಟ್ಟಿಗಳನ್ನು ನಿರ್ಮಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT